ADVERTISEMENT

ಹಾವೇರಿಗೆ ಬಂದ ತುಳುನಾಡಿನ ಕೊರಗಜ್ಜ

ಕೆರಿಮತ್ತಿಹಳ್ಳಿ ಗ್ರಾಮದಲ್ಲಿ ನೂತನ ದೇಗುಲ ನಿರ್ಮಾಣ: ಭಕ್ತರಿಂದ ಬೀಡಿ, ಸೇಂದಿ, ಚಕ್ಕುಲಿಯ ನೈವೇದ್ಯ

ಸಿದ್ದು ಆರ್.ಜಿ.ಹಳ್ಳಿ
Published 17 ಅಕ್ಟೋಬರ್ 2022, 19:31 IST
Last Updated 17 ಅಕ್ಟೋಬರ್ 2022, 19:31 IST
ಹಾವೇರಿ ತಾಲ್ಲೂಕಿನ ಕೆರಿಮತ್ತಿಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕೊರಗಜ್ಜ ಸ್ವಾಮಿ ದೇವಾಲಯ  – ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ
ಹಾವೇರಿ ತಾಲ್ಲೂಕಿನ ಕೆರಿಮತ್ತಿಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕೊರಗಜ್ಜ ಸ್ವಾಮಿ ದೇವಾಲಯ  – ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ   

ಹಾವೇರಿ: ತುಳುನಾಡಿನ ಆರಾಧ್ಯ ದೈವ ‘ಕೊರಗಜ್ಜ’ ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿದ ಹಾವೇರಿಗೆ ಪ್ರಥಮ ಬಾರಿಗೆ ಬಂದು ನೆಲೆಸಿದ್ದಾರೆ. ಭಕ್ತರ ಕೊರಗನ್ನು ನಿವಾರಿಸುವ ಅಜ್ಜನ ದರ್ಶನಕ್ಕೆ ಜನರು ಸಾಲುಗಟ್ಟಿ ಬರುತ್ತಿದ್ದಾರೆ.

ತಾಲ್ಲೂಕಿನ ಕೆರಿಮತ್ತಿಹಳ್ಳಿ ಗ್ರಾಮದಲ್ಲಿ ನೂತನವಾಗಿ ‘ಶ್ರೀ ಸ್ವಾಮಿ ಕೊರಗಜ್ಜ ಸನ್ನಿಧಾನ’ವನ್ನು ನಿರ್ಮಿಸಲಾಗಿದೆ. ಮಂಗಳೂರು ಹೊರವಲಯದ ಕುತ್ತಾರು ಕೊರಗಜ್ಜನ ಆದಿಕ್ಷೇತ್ರ ಅಥವಾ ಮೂಲಸ್ಥಾನ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೊರಗಜ್ಜನನ್ನು ಭಕ್ತಿಭಾವದಿಂದ ಆರಾಧಿಸುತ್ತಾರೆ.

‌‌‌‌ಕಳೆದು ಹೋದ ವಸ್ತು ಸಿಗುತ್ತದೆ!
ತುಳುನಾಡಿನ ಅದೆಷ್ಟೋ ಜನ ಇಂದಿಗೂ ತಮ್ಮ ವಸ್ತುಗಳು ಕಳೆದು ಹೋದರೆ ಕಾರ್ಣಿಕ ಪುರುಷ ಕೊರಗಜ್ಜನನ್ನು ಭಕ್ತಿಯಿಂದ ನೆನೆಯುತ್ತಾರೆ. ತಾವು ಕಳೆದುಕೊಂಡ ವಸ್ತುಗಳು ಮತ್ತೆ ಕೈ ಸೇರುವುದು ಸೂರ್ಯನಷ್ಟೇ ಸತ್ಯ ಎನ್ನುವುದು ಭಕ್ತರ ನಂಬಿಕೆಯ ನುಡಿ.ಕಷ್ಟಗಳು ಎದುರಾದಾಗ ಕೊರಗಜ್ಜನನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಸಾಕು, ಕಣ್ಣುಮುಚ್ಚಿ ತೆಗೆಯುವುದರೊಳಗೆ ಸಮಸ್ಯೆಗಳು ಮಾಯವಾಗುತ್ತವೆ ಎಂಬುದು ಭಕ್ತರ ಅಚಲ ನಂಬಿಕೆ.

ADVERTISEMENT

ಬೀಡಿ, ಸೇಂದಿಯ ನೈವೇದ್ಯ!
ಮಾನವನ ರೂಪದಲ್ಲಿದ್ದ ಕೊರಗ ತನಿಯ ಮಾಯಾ ರೂಪವನ್ನು ಪಡೆದು ದೈವೀ ಪುರುಷನಾಗುತ್ತಾನೆ. ಹೀಗಾಗಿ ಮನುಷ್ಯರು ತಿನ್ನುವ ವಸ್ತುಗಳನ್ನೇ ಹರಕೆಯ ರೂಪದಲ್ಲಿ ಅಜ್ಜನಿಗೆ ನೀಡಲಾಗುತ್ತದೆ. ವೀಳ್ಯದೆಲೆ, ಅಡಿಕೆ, ಸುಣ್ಣ, ಚಕ್ಕುಲಿ, ಬೀಡಿ, ಸೇಂದಿಯನ್ನು ಹೆಚ್ಚಾಗಿ ಭಕ್ತರು ನೈವೇದ್ಯಕ್ಕೆ ಇಡುತ್ತಾರೆ.

ದೇಗುಲ ಉದ್ಘಾಟನೆ
‘ಐವರು ಸ್ನೇಹಿತರು ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ ₹5 ಲಕ್ಷ ವೆಚ್ಚದಲ್ಲಿ ಕೊರಗಜ್ಜನಿಗೆ 45 ದಿನಗಳಲ್ಲಿ ಗುಡಿ ಕಟ್ಟಿದೆವು. ಅ.10ರಂದು ಮಂಗಳೂರಿನ ಪ್ರಸಿದ್ಧ ಕೋಲ ಸೇವೆ ಮಾಡುವ ರಘು ಅಜ್ಜನವರು ಬಂದು ಕೋಲಸೇವೆ ಮಾಡಿ, ಧಾರ್ಮಿಕ ಕೈಂಕರ್ಯಗಳನ್ನು ನಡೆಸಿಕೊಟ್ಟರು.ಸಾವಿರಾರು ಭಕ್ತರ ಸಮ್ಮುಖದಲ್ಲಿ ಕೊರಗಜ್ಜನ ಸನ್ನಿಧಿ ಉದ್ಘಾಟನೆಗೊಂಡಿತು’ ಎಂದು ಅರ್ಚಕ ಫಕ್ಕೀರೇಶ ಮರಿಯಣ್ಣನವರ್‌ ತಿಳಿಸಿದರು.

ಕನಸಿಗೆ ಬಂದ ಕೊರಗಜ್ಜ!
‘ನಮ್ಮ ತಂದೆಗೆ ಅನಾರೋಗ್ಯವಾಗಿತ್ತು. ಮಂಗಳೂರಿನ ಎನ್‌ಎಫ್‌ಐ ಆಸ್ಪತ್ರೆಗೆ ಕರೆದೊಯ್ದಿದ್ದೆವು. ಆಗ ಭಕ್ತರೊಬ್ಬರ ಸಲಹೆಯಂತೆ ಕುತ್ತಾರಿನಲ್ಲಿದ್ದ ಕೊರಗಜ್ಜನ ದರ್ಶನ ಮಾಡಿ, ಪೂಜೆ ಸಲ್ಲಿಸಿದೆ. ಕಷ್ಟಗಳು ಪರಿಹಾರವಾದವು.ಕೆರಿಮತ್ತಿಹಳ್ಳಿಗೆ ಹಿಂತಿರುಗಿದ ಒಂದು ತಿಂಗಳ ನಂತರ ಅಜ್ಜ ಕನಸಿಗೆ ಬಂದರು. ಕುತ್ತಾರಿನಲ್ಲಿ ಪ್ರಶ್ನೆ ಹಾಕಿದಾಗ ಕೆರಿಮತ್ತಿಹಳ್ಳಿಯ ಹೊರವಲಯದಲ್ಲಿ ಕೊರಗಜ್ಜನ ಕಲ್ಲು ಇದೆ. ಅದನ್ನು ತಂದು ಮನೆಯಲ್ಲಿ ಪೂಜಿಸು ಎಂಬ ವಾಣಿ ಮೊಳಗಿತು. ಆ ಕಲ್ಲನ್ನು ಮನೆಗೆ ತಂದು ಪ್ರತಿಷ್ಠಾಪಿಸಿದ ನಂತರ ಕಷ್ಟಗಳು ಪರಿಹಾರವಾದವು’ ಎಂದುಕೆರಿಮತ್ತಿಹಳ್ಳಿಯ ಕೊರಗಜ್ಜನ ಸನ್ನಿಧಿಯ ಅರ್ಚಕ ಫಕ್ಕೀರೇಶ ಮರಿಯಣ್ಣನವರ್‌ ತಿಳಿಸಿದರು.

‘ಪ್ರಶ್ನೆ ಹಾಕಿದ ಸಂದರ್ಭ, ಕೆರಿಮತ್ತಿಹಳ್ಳಿಯಲ್ಲಿ 38 ವರ್ಷದ ಹಿಂದೆ ತೀರಿ ಹೋಗಿರುವ ಬಾಲಮ್ಮ ಊರಿನ ದೈವ ಮಗಳು. ಆ ಅಜ್ಜಿ ಊರಿನವರಿಗೆ ಹುಷಾರಿಲ್ಲದಿದ್ದಾಗ ದಾರ ಕೊಡುತ್ತಿದ್ದರು. ಜತೆಗೆ ಕೊರಗಜ್ಜನಿಗೆ ನಡೆದುಕೊಳ್ಳುತ್ತಿದ್ದರು ಎಂಬುದು ತಿಳಿಯಿತು. ಹೀಗಾಗಿ ಗ್ರಾಮದೇವತೆ ಒಪ್ಪಿಗೆ ಪಡೆದ ನಂತರ ಕೆರಿಮತ್ತಿಹಳ್ಳಿಯಲ್ಲಿ ಕೊರಗಜ್ಜನ ಮೂರ್ತಿ ಪ್ರತಿಷ್ಠಾಪನೆ ಮಾಡಿದೆವು’ ಎಂದು ಮಾಹಿತಿ ನೀಡಿದರು.

**

ಉತ್ತರ ಕರ್ನಾಟಕ ಭಾಗದಲ್ಲಿ ಪ್ರಥಮ ಬಾರಿಗೆ ಕೊರಗಜ್ಜನ ಗುಡಿ ನಿರ್ಮಿಸಿದ್ದೇವೆ. ಅಜ್ಜನ ದರ್ಶನಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ ಜನರು ಬರುತ್ತಿದ್ದಾರೆ.
– ಫಕ್ಕಿರೇಶ ಮರಿಯಣ್ಣನವರ್‌, ಅರ್ಚಕರು, ಸ್ವಾಮಿ ಕೊರಗಜ್ಜ ಸನ್ನಿಧಿ, ಕೆರಿಮತ್ತಿಹಳ್ಳಿ

**

ಕರಾವಳಿ ದೈವ ಹಾವೇರಿಗೆ ಬಂದು ನೆಲೆಸಿದ್ದು ನಮ್ಮ ಸುದೈವ. ಕೊರಗಜ್ಜನನ್ನು ಭಕ್ತಿಯಿಂದ ಬೇಡಿಕೊಂಡರೆ ಇಷ್ಟಾರ್ಥಗಳು ನೆರವೇರುತ್ತವೆ.
– ಪ್ರತಿಭಾ ಸಾದರ್‌, ಕೆರಿಮತ್ತಿಹಳ್ಳಿ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.