ADVERTISEMENT

ನಿಮ್ಮ ಡಿಗ್ರಿ ಸರ್ಟಿಫಿಕೇಟ್‌ಗಳನ್ನು ಬೊಮ್ಮಾಯಿಗೆ ಪೋಸ್ಟ್‌ ಮಾಡಿ: ಡಿ.ಕೆ.ಶಿ

ಪ್ರಚಾರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 14:06 IST
Last Updated 18 ಅಕ್ಟೋಬರ್ 2021, 14:06 IST
ಹಾನಗಲ್‌ ತಾಲ್ಲೂಕು ಕೆಲವರಕೊಪ್ಪ ಗ್ರಾಮದಲ್ಲಿ ಸೋಮವಾರ ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಚುನಾವಣಾ ಪ್ರಚಾರ ನಡೆಸಿದರು 
ಹಾನಗಲ್‌ ತಾಲ್ಲೂಕು ಕೆಲವರಕೊಪ್ಪ ಗ್ರಾಮದಲ್ಲಿ ಸೋಮವಾರ ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಚುನಾವಣಾ ಪ್ರಚಾರ ನಡೆಸಿದರು    

ಹಾವೇರಿ: ‘ಉದ್ಯೋಗ ಸೃಷ್ಟಿಸುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ನಿರುದ್ಯೋಗ ಸೃಷ್ಟಿಸಿತು. ಯುವಕರೇ ನಿಮ್ಮ ಡಿಗ್ರಿ ಸರ್ಟಿಫಿಕೇಟ್‌ಗಳನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪೋಸ್ಟ್‌ ಮಾಡಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

ಹಾನಗಲ್‌ ತಾಲ್ಲೂಕಿನ ಕೆಲವರಕೊಪ್ಪ ಗ್ರಾಮದಲ್ಲಿ ಹಾನಗಲ್‌ ಉಪಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಒಂದು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿದ್ದರು. ಕೊರೊನಾ ಅವಧಿಯಲ್ಲಿ 4 ಕೋಟಿ ಉದ್ಯೋಗ ನಷ್ಟವಾಗಿದೆ. ಯಾವ ಮುಖ ಹೊತ್ತುಕೊಂಡು ಬಂದು ನಿಮ್ಮ ಬಳಿ ಓಟು ಕೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ADVERTISEMENT

ನನ್ನನ್ನು ‘ಡಿಕೆ, ಡಿಕೆ’ ಅಂತ ಕೂಗಬೇಡಿ. ನೀವು ಒತ್ತುವ ಮತಯಂತ್ರದ ಬೀಪ್‌ ಶಬ್ದ ಮೋದಿ ಮತ್ತು ಬೊಮ್ಮಾಯಿ ಅವರಿಗೆ ಕೇಳಿಸಬೇಕು. ಆ ರೀತಿ ಮತ ಚಲಾಯಿಸಿ ಎಂದು ಮನವಿ ಮಾಡಿದರು.

ಯಾವ ಬಾವಿಗೆ ಹಾಕಿದ್ದೀರಿ?:

ಚಾಮುಂಡಿ ಕ್ಷೇತ್ರದ ಜನರುಸಿದ್ದರಾಮಯ್ಯ ಅವರನ್ನು ಸೋಲಿಸಿ, ಕೆಆರ್‌ಎಸ್‌ ಡ್ಯಾಂಗೆ ಒಗೆದಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಹೇಳಿಕೆ ನೀಡಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಬಿ.ಎಸ್‌.ಯಡಿಯೂರಪ್ಪ ಅವರನ್ನು ನೀವು ಯಾವ ಕೆರೆ, ಬಾವಿ, ಸಮುದ್ರಕ್ಕೆ ಹಾಕಿದ್ದೀರಿ ಎಂಬುದನ್ನು ಹೇಳಿ ಎಂದು ಸವಾಲು ಹಾಕಿದರು.

ಇಲಿಗಳ ರೀತಿ ಜನ ಸತ್ರು..:

ಚಾಮರಾಜನಗರದಲ್ಲಿ ಆಕ್ಸಿಜನ್‌ ಸಿಗದೆ 36 ಮಂದಿ ಸತ್ತು ಹೋದ್ರು. ಸರ್ಕಾರ ಅವರಿಗೆ ಸಹಾಯ ಮಾಡೋಕೆ ಆಗಲಿಲ್ಲ. ನಾನು ಮತ್ತು ಸಿದ್ದರಾಮಯ್ಯ ಅವರು ಮೃತರ ಮನೆಗಳಿಗೆ ಭೇಟಿ ನೀಡಿ, ₹1 ಲಕ್ಷ ಕೊಟ್ಟು ಬಂದಿದ್ದೇವೆ. ಹಾಸಿಗೆ, ಆಮ್ಲಜನಕ, ಚಿಕಿತ್ಸೆ ಸಮರ್ಪಕವಾಗಿ ಸಿಗದೆ ಕೋವಿಡ್‌ನಿಂದ ನೂರಾರು ಜನರು ಇಲಿಗಳ ರೀತಿ ನರಳಿ ನರಳಿ ಸತ್ತಿದ್ದಾರೆ. ಕೊರೊನಾ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ಕಗ್ಗತ್ತಲೆಯತ್ತ ಕರ್ನಾಟಕ:

ನಾನು ಇಂಧನ ಸಚಿವನಿದ್ದಾಗ ಒಂದೇ ಒಂದು ದಿನ ವಿದ್ಯುತ್‌ ಕೊರತೆ ಕಾಡಲಿಲ್ಲ. ಕಲ್ಲಿದ್ದಲು ಮಂತ್ರಿ ನಮ್ಮ ರಾಜ್ಯದವರೇ ಇದ್ರೂ, ಕಲ್ಲಿದ್ದಲು ಕೊರತೆ ಕಾಡುತ್ತಿದೆ. ಕಗ್ಗತ್ತಲೆಯತ್ತ ಕರ್ನಾಟಕ ಹೋಗುತ್ತಿದೆ ಎಂಬ ಭೀತಿ ಜನರನ್ನು ಕಾಡುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದೆ ಎಂದು ಸಿಎಂ ಹೇಳಿದ್ದಾರೆ. ಹಾನಗಲ್‌ ರಸ್ತೆಗಳು ನಡೆದಾಡಲು ಯೋಗ್ಯವಾಗಿಲ್ಲ. ಇದೇನಾ ಇವರ ಅಭಿವೃದ್ಧಿ ಎಂದು ತಿರುಗೇಟು ನೀಡಿದರು.

‘ಕೊರಗಿನಿಂದಲೇ ಕೊನೆಯುಸಿರೆಳೆದ ಕಾಯಂ ಸಿಎಂ’

‘ಯಾರೋ ಕೆಲವರು ಸಿ.ಎಂ. ಉದಾಸಿ ಅವರನ್ನು ‘ಕಾಯಂ ಸಿಎಂ’ ಅಂತಿದ್ರು. ಬಿ.ಎಸ್‌.ಯಡಿಯೂರಪ್ಪ ಸರ್ಕಾರದಲ್ಲಿ ಅವರಿಗೆ ಯಾಕೆ ಮಂತ್ರಿ ಸ್ಥಾನ ಕೊಡಲಿಲ್ಲ.ಸಚಿವ ಸ್ಥಾನ ಸಿಗಲಿಲ್ಲ ಎಂಬ ಕೊರಗಿನಿಂದಲೇ ಅವರು ಕೊನೆಯುಸಿರು ಎಳೆದರು ಎಂಬುದು ನನ್ನ ಭಾವನೆ’ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಸಿ.ಎಂ.ಉದಾಸಿ ಅವರ ಬಗ್ಗೆ ನಾನು ಯಾವ ಆಪಾದನೆಯನ್ನೂ ಮಾಡುವುದಿಲ್ಲ. ಅವರು ಸಜ್ಜನ ವ್ಯಕ್ತಿ. ನನಗೆ ಮತ್ತು ಶ್ರೀನಿವಾಸ ಮಾನೆ ಅವರಿಗೆ ಉದಾಸಿ ಅವರ ಬಗ್ಗೆ ಅಪಾರ ಅಭಿಮಾನವಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.