
ಶಿಗ್ಗಾವಿಯ ಗಂಗಿಭಾವಿ ರಸ್ತೆಯಲ್ಲಿ ನಿರ್ಮಿಸಿರುವ ನೂತನ ಬಸ್ ಡಿಪೊ ಮತ್ತು ಚಾಲನಾ–ಮೆಕ್ಯಾನಿಕ್ ತರಬೇತಿ ಕೇಂದ್ರವನ್ನು ಸಚಿವ ರಾಮಲಿಂಗಾರೆಡ್ಡಿ ಅವರು ಶುಕ್ರವಾರ ಉದ್ಘಾಟಿಸಿದರು
ಶಿಗ್ಗಾವಿ: ‘ರಾಜ್ಯದಲ್ಲಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಿಗೆ (ವಾಕರಸಾಸಂ) ಸುಮಾರು 5,800 ಹೊಸ ಬಸ್‌ಗಳನ್ನು ನೀಡಲಾಗುತ್ತಿದೆ. ಇದರ ಜೊತೆಯಲ್ಲಿ 9 ಸಾವಿರ ನೌಕರರನ್ನು ನೇಮಕಾತಿ ಮಾಡಲಾಗಿದ್ದು, ಅನುಕಂಪದ ಆಧಾರ ದಲ್ಲಿ ಒಂದು ಸಾವಿರ ಸಿಬ್ಬಂದಿಯನ್ನು ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ’ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಪಟ್ಟಣದ ಗಂಗಿಭಾವಿ ರಸ್ತೆಯಲ್ಲಿ ನಿರ್ಮಿಸಿರುವ ನೂತನ ಬಸ್ ಡಿಪೊ ಮತ್ತು ಚಾಲನಾ–ಮೆಕ್ಯಾನಿಕ್ ತರಬೇತಿ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಈಗಾಗಲೇ 300 ಬಸ್‌ಗಳು ಮಂಜೂರಾಗಿವೆ. ಸದ್ಯದಲ್ಲಿ ಹೊಸದಾಗಿ 400 ಹೊಸ ಬಸ್‌ಗಳನ್ನು ಮಂಜೂರಾತಿ ನೀಡಲಾಗುವುದು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ರಾಜ್ಯದ ಹಲವು ಬಸ್ ನಿಲ್ದಾಣಗಳು, ರಸ್ತೆಯಿಂದ ಕೆಳಗಿವೆ. ಇಂಥ ನಿಲ್ದಾಣಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.
‘ಶಿಗ್ಗಾವಿ ಬಳಿಯ ಹುಲಗೂರ, ತಡಸಕ್ಕೆ ನೂತನ ಬಸ್ ನಿಲ್ದಾಣ ಮತ್ತು ಕಾಶಿಪೀಠದ ವಿಶ್ವನಾಥ ದೇವಸ್ಥಾನಕ್ಕೆ ಅನುದಾನ ನೀಡುವ ಕುರಿತು ಪರಿಶೀಲಿಸಲಾಗುವುದು’ ಎಂದರು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಶಾಸಕ ಭರಮಗೌಡ ಕಾಗೆ ಮಾತನಾಡಿ, ‘ಸರ್ಕಾರ ಸದ್ಯದಲ್ಲಿ 700 ಹೊಸ ಬಸ್ ನೀಡುತ್ತಿದೆ. ಹೊಸ ಬಸ್ ಘಟಕಗಳಿಗೆ ತಲಾ 50 ಬಸ್ ನೀಡಲಾಗುವುದು. ಶಿಗ್ಗಾವಿಯಲ್ಲಿ ನೌಕರರ ಸಮಸ್ಯೆಗಳಿದ್ದು, ಈ ಸಭೆ ನಡೆಸಿ ಚರ್ಚಿಸಿದ್ದೇವೆ. ಹೊಸ ನೇಮಕಾತಿಗೂ ಸದ್ಯದಲ್ಲೇ ಚಾಲನೆ ನೀಡಲಾಗುವುದು’ ಎಂದರು.
ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಮಾತನಾಡಿ, ‘ಶಕ್ತಿ ಯೋಜನೆಯು ಗಿನ್ನಿಸ್ ದಾಖಲೆ ಮಾಡಿದೆ. ಈ ಯೋಜನೆಯನ್ನು ದೇಶದ ವಿವಿಧ ರಾಜ್ಯಗಳು ಹಾಗೂ ಅಮೆರಿಕಾದ ನ್ಯೂಯಾರ್ಕ್‌ನಲ್ಲೂ ಸಹ ಜಾರಿಯಾಗಿರುವುದು ಹೆಮ್ಮೆಯ ಸಂಗತಿ’ ಎಂದರು.
‘ಶಿಗ್ಗಾವಿ ಕ್ಷೇತ್ರದ ಹುಲಗೂರ ಹಾಗೂ ತಡಸ ಗ್ರಾಮಗಳು, ಪಟ್ಟಣ ಪಂಚಾಯಿತಿ ಆಗಲಿವೆ. ಈ ಗ್ರಾಮಗಳಲ್ಲಿನ ಬಸ್ ನಿಲ್ದಾಣ, ಸವಣೂರ ಬಸ್ ನಿಲ್ದಾಣ ಸೇರಿದಂತೆ ಗ್ರಾಮೀಣ ಹಾಗೂ ನಗರದ ಪ್ರದೇಶದಲ್ಲಿ ಬಸ್ ನಿಲ್ದಾಣಗಳು ಶಿಥಿಲಗೊಂಡಿವೆ. ಹೊಸ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು’ ಎಂದು ಮನವಿ ಮಾಡಿದರು.
ವಾಕರಸಾಸಂ ಜಿಲ್ಲಾ ನಿಯಂತ್ರಣಾ ಧಿಕಾರಿ ಜಿ. ವಿಜಯಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ವಾಕರಸಾಸಂ ಉಪಾಧ್ಯಕ್ಷ ಸುನೀಲ, ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ., ಗಡಿ ಪ್ರದೇಶ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಮಂಜುನಾಥ ಕುನ್ನೂರ, ಶೇಖಪ್ಪ ಮಣಕಟ್ಟಿ, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಎಸ್‌ಪಿ ಯಶೋಧಾ ವಂಟಗೋಡಿ, ತರಬೇತಿ ಸಂಸ್ಥೆ ಪ್ರಾಂಶುಪಾಲ ಡಿ.ದೇವರಾಜ, ಹಾವೇರಿ ವಿಭಾಗದ ಸಾರಿಗೆ ಅಧಿಕಾರಿ ಅಶೋಕ ಪಾಟೀಲ, ಶಿಗ್ಗಾವಿ ಡಿಪೊ ವ್ಯವಸ್ಥಾಪಕ ಕೃಷ್ಣಾ ರಾಹುತನಕಟ್ಟಿ ಇದ್ದರು.
ನಿರ್ಮಾಣಗೊಂಡು ಹಲವು ತಿಂಗಳಾದರೂ ಡಿಪೊ ಉದ್ಘಾಟನೆಯಾಗದ ಬಗ್ಗೆ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಡಿಪೊ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ‘ಪ್ರಜಾವಾಣಿ’ ವರದಿ ಪ್ರಸ್ತಾಪಿಸಿ ಮಾತನಾಡಿದರು.
‘ನಾನು ನಿತ್ಯವೂ ಬೆಳಗಿನ ಜಾವ ‘ಪ್ರಜಾವಾಣಿ’ ಪತ್ರಿಕೆ ಓದುತ್ತೇನೆ. ಶಿಗ್ಗಾವಿ ಡಿಪೊ ವಿಷಯವಾಗಿ ಪತ್ರಿಕೆಯಲ್ಲಿ ಸವಿಸ್ತಾರವಾಗಿ ಬರೆದಿದ್ದಾರೆ. ಘಟಕಕ್ಕೆ ಬೇಕಾಗುವ ಹೊಸ ಬಸ್, ಸಿಬ್ಬಂದಿ ಹಾಗೂ ಎಲ್ಲ ಸೌಲಭ್ಯಗಳನ್ನು ಶೀಘ್ರವೇ ಮಂಜೂರು ಮಾಡುತ್ತೇನೆ’ ಎಂದು ರಾಮಲಿಂಗಾರೆಡ್ಡಿ ಭರವಸೆ ನೀಡಿದರು.
‘ಶಿಗ್ಗಾವಿ ಡಿಪೊ ನಿರ್ಮಾಣದಲ್ಲಿ ಮಾಜಿ ಮುಖ್ಯಮಂತ್ರಿಯೂ ಆಗಿರುವ ಸಂಸದ ಬಸವರಾಜ ಬೊಮ್ಮಾಯಿ ಅವರ ಪಾತ್ರ ಮುಖ್ಯವಾಗಿದೆ. ಆದರೆ, ಡಿಪೊ ಉದ್ಘಾಟನೆಗೆ ಬೊಮ್ಮಾಯಿ ಅವರಿಗೆ ಆಹ್ವಾನ ನೀಡದೇ ಅಪಮಾನ ಮಾಡಲಾಗಿದೆ’ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಶಿಗ್ಗಾವಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ‘ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿಯೂ ಬೊಮ್ಮಾಯಿ ಹೆಸರು ಹಾಕಿಲ್ಲ. ಈ ವರ್ತನೆ ಖಂಡನೀಯ. ಬೊಮ್ಮಾಯಿ ಮಾಡಿರುವ ಕೆಲಸವನ್ನು ತಮ್ಮ ಕೆಲಸವೆಂದು ಹೇಳುವ ಶಾಸಕ ಹಾಗೂ ಕಾಂಗ್ರೆಸ್ ಸರ್ಕಾರ, ತನ್ನ ಮನ ಸಾಕ್ಷಿಯನ್ನು ಕೇಳಿಕೊಳ್ಳಬೇಕು’ ಎಂದರು.
ಬಿಜೆಪಿಯ ಶಿಗ್ಗಾವಿ ಮಂಡಲದ ಅಧ್ಯಕ್ಷ ವಿಶ್ವನಾಥ ಹರವಿ ಮಾತನಾಡಿ, ‘ಡಿಪೊ ನಿರ್ಮಾಣವಾಗಬೇಕು ಎಂಬುದು ಶಿಗ್ಗಾವಿ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾ ಗಿದ್ದ ಸಂದರ್ಭದಲ್ಲಿ ₹ 28 ಕೋಟಿ ಅನುದಾನ ಮಂಜೂರು ಮಾಡಿದ್ದರು. ಈ ಸಂಗತಿ ಜನರಿಗೂ ಗೊತ್ತಿದೆ. ಯಾರೋ ಮಾಡಿದ ಕೆಲಸವನ್ನು ತಮ್ಮ ಸಾಧನೆ ಎಂದು ತೋರಿಸು ವುದು ಮೂರ್ಖತನ’ ಎಂದರು.
‘ಬೊಮ್ಮಾಯಿ ಅವರು ಮಾಡಿರುವ ಕೆಲಸಗಳನ್ನೇ ಇಂದಿನ ಶಾಸಕರು ಉದ್ಘಾಟನೆ ಮಾಡುತ್ತಿದ್ದಾರೆ. ಅನುದಾನ ತಂದಿರುವುದಾಗಿ ಕೇವಲ ಬಾಯಿ ಮಾತಿನಲ್ಲಷ್ಟೇ ಹೇಳಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಇವರಿಗೆ ಕ್ಷೇತ್ರದ ಜನರೇ ಪಾಠ ಕಲಿಸಲಿದ್ದಾರೆ’ ಎಂದರು.
ಶಿವಯೋಗಿ ಹುಲಸೋಗಿ, ರೇಣುಕನಗೌಡ ಪಾಟೀಲ, ಅನಿಲ ಸಾತಣ್ಣವರ, ಉಮೇಶ ಅಂಗಡಿ, ಸಂತೋಷ ದೊಡ್ಡಮನಿ, ದೇವೆಂದ್ರಪ್ಪ ಸೊರಟೂರ, ಯಶೋಧಾ ಪಾಟೀಲ, ಬಾಹುಬಲಿ ಅಕ್ಕಿ, ಮಂಜುನಾಥ ಮಲ್ಲಾಡದ, ನಿಂಗಪ್ಪ ಕಮ್ಮಾರ, ಪರಶುರಾಮ ಸೊನ್ನದ, ಮಂಜುನಾಥ ಬ್ಯಾಹಟ್ಟಿ, ಕಾಶಿನಾಥ ಕಳ್ಳಿಮನಿ, ಪ್ರತೀಕ ಕೋಲಕಾರ ಇದ್ದರು.
ಹಾವೇರಿ: ‘ಶಿಗ್ಗಾವಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನಾನು ಕಂಡ ಕನಸು, ಡಿಪೊ ಉದ್ಘಾಟನೆ ಮೂಲಕ ಇಂದು ಬಹುತೇಕ ಸಾಕಾರಗೊಂಡಿದೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತು ‘ಎಕ್ಸ್’ ಮಾಡಿರುವ ಅವರು, ‘ಶಿಗ್ಗಾವಿ ಗೊಂದು ನೂತನ ಬಸ್ ಡಿಪೊ, ವಾಹನ ಚಾಲನಾ ಮತ್ತು ತಾಂತ್ರಿಕ ತರಬೇತಿ ಕೇಂದ್ರದ ಅಗತ್ಯವಿತ್ತು. ನಾನು ಸಿಎಂ ಆಗಿದ್ದಾಗ ₹ 28 ಕೋಟಿ ಬಿಡುಗಡೆಗೊಳಿಸಿದ್ದೆ. ಈಗ ಘಟಕ ಲೋಕಾರ್ಪಣೆಯಾಗಿದೆ. ಇದರಿಂದ ಕ್ಷೇತ್ರದ ಜನರು ಮತ್ತು ವಿದ್ಯಾರ್ಥಿಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ತರಬೇತಿ ಮೂಲಕ ಸ್ಥಳೀಯ ಯುವಕರಿಗೂ ಉದ್ಯೋಗ ಸಿಗಲಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.