ADVERTISEMENT

ಹಾವೇರಿ | ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಕೊರತೆ: ಜನರಿಗೆ ನಿತ್ಯ ನರಕ

ಸಂತೋಷ ಜಿಗಳಿಕೊಪ್ಪ
Published 2 ಡಿಸೆಂಬರ್ 2024, 4:58 IST
Last Updated 2 ಡಿಸೆಂಬರ್ 2024, 4:58 IST
ಹಾವೇರಿಯ ರಜಪೂತ ಗಲ್ಲಿ ಬಳಿ ಶೌಚಾಲಯ ನಿರ್ಮಾಣ ಕೆಲಸ ಅರ್ಧಕ್ಕೆ ನಿಂತಿರುವುದು
ಹಾವೇರಿಯ ರಜಪೂತ ಗಲ್ಲಿ ಬಳಿ ಶೌಚಾಲಯ ನಿರ್ಮಾಣ ಕೆಲಸ ಅರ್ಧಕ್ಕೆ ನಿಂತಿರುವುದು   

ಹಾವೇರಿ: ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳು ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆ ಎದ್ದು ಕಾಣುತ್ತಿದೆ. ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಕೆಲ ಕಡೆಗಳಲ್ಲಿ ಶೌಚಾಲಯಗಳು ಪಾಳು ಬಿದ್ದಿವೆ. ಹಲವು ಕಡೆಗಳಲ್ಲಿ ನೀರಿಲ್ಲದೇ ದುರ್ನಾತ ಬೀರುತ್ತಿವೆ. ಕೆಲಸ ನಿಮಿತ್ತ ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಾಡುವ ಜನರು, ನಿತ್ಯವೂ ಯಾತನೆ ಅನುಭವಿಸುತ್ತಿದ್ದಾರೆ.

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸುಲಭ ಶೌಚಾಲಯಗಳನ್ನು ನಿರ್ಮಿಸಲು ಕೇಂದ್ರ–ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಈ ಯೋಜನೆಯಡಿ ನಿರ್ಮಿಸುವ ಶೌಚಾಲಯಗಳು ಕೆಲವೇ ದಿನಗಳಲ್ಲಿ ಪಾಳು ಬೀಳುತ್ತಿವೆ. ಜೊತೆಗೆ, ನಿರ್ವಹಣೆ ಕೊರತೆಯಿಂದ ಬಾಗಿಲು ಬಂದ್ ಆಗುತ್ತಿವೆ.

ಜಿಲ್ಲಾ ಕೇಂದ್ರವಾದ ಹಾವೇರಿ ನಗರಕ್ಕೆ ನಿತ್ಯವೂ ಸಾವಿರಾರು ಮಂದಿ ಬಂದು ಹೋಗುತ್ತಾರೆ. ಇದರಲ್ಲಿ ಮಹಿಳೆಯರ ಸಂಖ್ಯೆಯೂ ಹೆಚ್ಚಿರುತ್ತದೆ. ಮಹಿಳೆಯರ ಬಳಕೆಗೆಂದು ನಗರದಲ್ಲಿ ಸುಸಜ್ಜಿತ ಶೌಚಾಲಯವಿಲ್ಲ. ಈ ಹಿಂದೆ ನಿರ್ಮಿಸಿದ್ದ ಶೌಚಾಲಯಗಳು ಶಿಥಿಲಗೊಂಡು, ಕಟ್ಟಡ ಸಮೇತ ಕುಸಿದು ಬಿದ್ದಿವೆ. ಶೌಚಾಲಯಗಳಿಲ್ಲದೇ ಮಹಿಳೆಯರು ಹೆಚ್ಚು ಪರದಾಡುತ್ತಿದ್ದಾರೆ.

ADVERTISEMENT

ಬಸ್‌ ನಿಲ್ದಾಣ, ಜಿಲ್ಲಾ ಆಸ್ಪತ್ರೆ ಬಳಿ ಸುಲಭ ಶೌಚಾಲಯಗಳಿವೆ. ಇವುಗಳ ನಿರ್ವಹಣೆಯನ್ನು ಖಾಸಗಿಯವರು ವಹಿಸಿಕೊಂಡಿದ್ದಾರೆ. ತಕ್ಕಮಟ್ಟಿಗೆ ಈ ಶೌಚಾಲಯಗಳು ಬಳಕೆಗೆ ಲಭ್ಯವಾಗುತ್ತಿವೆ. ಆದರೆ, ನಗರಸಭೆಯಿಂದ ನಿರ್ಮಿಸಿರುವ ಬಹುತೇಕ ಶೌಚಾಲಯಗಳು ಬಳಕೆಗೆ ಲಭ್ಯವಾಗುತ್ತಿಲ್ಲ. ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ.

‘ಹಾವೇರಿ ಹೆಸರಿಗಷ್ಟೇ ಜಿಲ್ಲಾ ಕೇಂದ್ರ. ಆದರೆ, ಇಲ್ಲಿ ಮೂಲ ಸೌಕರ್ಯಗಳ ಕೊರತೆ ಸಾಕಷ್ಟಿದೆ. ಕೆಲಸ ನಿಮಿತ್ತ ನಗರಕ್ಕೆ ಬರುವ ಜನರಿಗೆ ಸುಲಭ ಶೌಚಾಲಯವಿಲ್ಲ. ಇದು ಒಂದು ದಿನದ ಸಮಸ್ಯೆಯಲ್ಲ. ಹಲವು ವರ್ಷಗಳ ಸಮಸ್ಯೆ. ಯಾರಿಗೆ ಹೇಳಿದರೂ ಸಮಸ್ಯೆ ಬಗೆಹರಿಯುತ್ತಿಲ್ಲ’ ಎಂದು ಗುತ್ತಲ ನಿವಾಸಿ ಆನಂದ್ ಆಕ್ರೋಶ ವ್ಯಕ್ತಪಡಿಸಿದರು.

‘ಕಾಗದ ಪತ್ರಗಳ ಕೆಲಸವಿದ್ದಾಗ ಹಾವೇರಿಗೆ ಬಂದು ಹೋಗುತ್ತೇನೆ. ಮಾರುಕಟ್ಟೆಗೂ ಭೇಟಿ ನೀಡುತ್ತೇನೆ. ಮೂತ್ರ ಬಂದಾಗ, ಎಲ್ಲಿ ಹೋಗಬೇಕೆಂಬ ಪ್ರಶ್ನೆ ಎದುರಾಗುತ್ತದೆ. ಮೂತ್ರ ತಡೆಹಿಡಿದರೆ, ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಹೀಗಾಗಿ, ಕೆಲ ಬಾರಿ ಬಯಲಿನಲ್ಲಿಯೇ ಮೂತ್ರ ಮಾಡಿದ್ದೇನೆ’ ಎಂದು ಹೇಳಿದರು.

‘ಈ ಹಿಂದೆ ಅಗತ್ಯವಿಲ್ಲದ ಕಡೆಗಳಲ್ಲಿ ಶೌಚಾಲಯ ನಿರ್ಮಿಸಲಾಗಿತ್ತು. ಆದರೆ, ಆ ಶೌಚಾಲಯಗಳು ಈಗ ಪಾಳು ಬಿದ್ದಿವೆ. ಪಾಳು ಬಿದ್ದ ಸ್ಥಳದಲ್ಲಿಯೇ ಜನರು ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದಕ್ಕೆ ಆಡಳಿತ ವ್ಯವಸ್ಥೆ ಕಾರಣ. ಕನಿಷ್ಠ ಬೇಡಿಕೆಯಾದ ಸುಲಭ ಶೌಚಾಲಯವನ್ನೂ ನಿರ್ಮಿಸದ ಆಡಳಿತ ವ್ಯವಸ್ಥೆಗೆ ನಾಚಿಕೆಯಾಗಬೇಕು’ ಎಂದು ಅವರು ಕಿಡಿಕಾರಿದರು.

ಹದಗೆಟ್ಟ ಶೌಚಾಲಯಗಳ ಸ್ಥಿತಿ: ಹಾವೇರಿ ನಗರದ ಹಲವು ಕಡೆಗಳಲ್ಲಿ ಸುಲಭ ಶೌಚಾಲಯಗಳ ಸ್ಥಿತಿ ಹದಗೆಟ್ಟಿದೆ. ಕೆಲವರು ಅನಿವಾರ್ಯವಾಗಿ, ಅದೇ ಶೌಚಾಲಯಗಳ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದಾಗಿ, ಈ ಜಾಗ ದುರ್ವಾಸನೆಯ ತಾಣವಾಗಿ ಮಾರ್ಪಟ್ಟಿದೆ.

ಸುಭಾಷ್ ಸರ್ಕಲ್‌ನಲ್ಲಿರುವ ಶೌಚಾಲಯ ಸಂಪೂರ್ಣ ಹಾಳಾಗಿದ್ದು, ಗೋಡೆಗಳೆಲ್ಲವೂ ಕುಸಿದು ಬಿದ್ದಿವೆ. ಹುಕ್ಕೇರಿಮಠದ ಹತ್ತಿರ ಸಾರ್ವಜನಿಕ ಶೌಚಾಲಯವಿದ್ದು, ನೀರು ಇಲ್ಲದಿದ್ದರಿಂದ ಬಳಕೆಗೆ ಸಾಧ್ಯವಾಗುತ್ತಿಲ್ಲ. ನಿರ್ವಹಣೆ ಕೊರತೆಯಿಂದ ಶೌಚಾಲಯಗಳು ಹಾಳಾಗುತ್ತಿರುವುದಾಗಿ ಜನರು ದೂರುತ್ತಿದ್ದಾರೆ.

ರಜಪೂತ ಗಲ್ಲಿ ಬಳಿ ಶೌಚಾಲಯ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಇದರಿಂದಾಗಿ, ನಿರ್ಮಾಣ ಹಂತದ ಶೌಚಾಲಯದ ಪಕ್ಕದ ಖುಲ್ಲಾ ಜಾಗದಲ್ಲಿಯೇ ಜನರು ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.

‘ಹಾವೇರಿ ನಗರದಲ್ಲಿ ಎಲ್ಲೆಲ್ಲಿ ಶೌಚಾಲಯಗಳ ಅಗತ್ಯವಿದೆ ಎಂಬುದನ್ನು ಸಮೀಕ್ಷೆ ಮಾಡಬೇಕು. ಅಗತ್ಯವಿರುವ ಕಡೆಗಳಲ್ಲಿ ಸುಲಭ ಶೌಚಾಲಯಗಳನ್ನು ನಿರ್ಮಿಸಬೇಕು. ಜೊತೆಗೆ, ನಿರ್ವಹಣೆ ಸಮರ್ಪಕವಾಗಿ ಆಗಬೇಕು’ ಎಂದು ಅಗಡಿಯ ಮಾರುತಿ ಆಗ್ರಹಿಸಿದರು.

ನಗರಸಭೆ ಎದುರು ಶೌಚಾಲಯಕ್ಕೆ ಬೀಗ: ಮಹಾತ್ಮ ಗಾಂಧಿ ಸರ್ಕಲ್‌ ಬಳಿ ಇರುವ ನಗರಸಭೆ ಕಚೇರಿ ಎದುರು ಶೌಚಾಲಯ ನಿರ್ಮಿಸಲಾಗಿದೆ. ಮೇಲೊಂದು ಟ್ಯಾಂಕ್ ಸಹ ಇರಿಸಲಾಗಿದೆ. ಆದರೆ, ಈ ಶೌಚಾಲಯದ ಬಾಗಿಲಿಗೆ ಬೀಗ ಹಾಕಲಾಗಿದೆ. ಶೌಚಾಲಯ ಕಟ್ಟಿ ಹಲವು ತಿಂಗಳಾದರೂ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿಲ್ಲ. ಫಲಕವನ್ನೂ ಹಾಕಿಲ್ಲ. ಇದರ ಪಕ್ಕದ ಖಾಲಿ ಜಾಗದಲ್ಲಿಯೇ ಜನರು ಮೂತ್ರ ಮಾಡುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.

‘ಹಾವೇರಿ ನಗರಸಭೆ ಎದುರೇ ಶೌಚಾಲಯ ಸುಸ್ಥಿತಿಯಲ್ಲಿಲ್ಲ. ಇನ್ನು ನಗರದ ಇತರೆ ಸ್ಥಳಗಳ ಶೌಚಾಲಯ ಸ್ಥಿತಿ ಹೇಗಿರಬೇಕು ? ಇಲ್ಲಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು, ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದರು.

ರಾಣೆಬೆನ್ನೂರಿನಲ್ಲೂ ಯಾತನೆ: ತಾಲ್ಲೂಕು ಕೇಂದ್ರವಾದ ರಾಣೆಬೆನ್ನೂರಿನಲ್ಲೂ ಸುಲಭ ಶೌಚಾಲಯಗಳ ಕೊರತೆ ಇದೆ. ದೇವರಗುಡ್ಡ ಸರ್ಕಲ್, ಮೆಡ್ಲೇರಿ ರಸ್ತೆ, ಹಲಗೇರಿ ವೃತ್ತ ಹಾಗೂ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಶೌಚಾಲಯ ನಿರ್ಮಿಸಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.

ನಗರದ ಶಂಕರ್ ಚಿತ್ರಮಂದಿರ, ಹಳೇ ಹವಾಲ್ದಾರ ಹೊಂಡ, ಗ್ರಾಮೀಣ ಪೊಲೀಸ್ ಠಾಣೆ ಬಳಿ ಸುಲಭ ಶೌಚಾಲಯಗಳಿವೆ. ಇದರ ನಿರ್ವಹಣೆ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸಲಾಗಿದೆ. ತಕ್ಕಮಟ್ಟಿಗೆ ಬಳಕೆಗೆ ಯೋಗ್ಯವಾಗಿವೆ.

ಚತುರ್ಮುಖಿ ದೇವಸ್ಥಾನ ಬಳಿ ಇರುವ ಶೌಚಾಲಯದಲ್ಲಿ ನೀರಿಲ್ಲದೇ ತೊಂದರೆ ಆಗುತ್ತಿದೆ. ಜನರು ಆಗಾಗ ಒತ್ತಾಯ ಮಾಡಿದರಷ್ಟೇ, ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತಿದೆ. ಉಳಿದ ದಿನಗಳಲ್ಲಿ ಅದೇ ಸಮಸ್ಯೆ ಮುಂದುವರಿಯುತ್ತಿದೆ.

‘ಬ್ಯಾಡಗಿ, ಶಿಗ್ಗಾವಿ, ಸವಣೂರು, ಹಾನಗಲ್, ರಟ್ಟೀಹಳ್ಳಿ, ಹಿರೇಕೆರೂರು ತಾಲ್ಲೂಕು ಕೇಂದ್ರಗಳು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸುಲಭ ಶೌಚಾಲಯಗಳ ಅಗತ್ಯವಿದೆ. ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು, ಗಮನ ಹರಿಸಬೇಕು’ ಎಂದು ಜನರು ಒತ್ತಾಯಿಸುತ್ತಿದ್ದಾರೆ.

(ಪೂರಕ ಮಾಹಿತಿ: ಮುಕ್ತೇಶ್ವರ ಪಿ. ಕೂರಗುಂದಮಠ)

ಹಾವೇರಿ ಸುಭಾಷ್ ಸರ್ಕಲ್‌ನಲ್ಲಿರುವ ಶೌಚಾಲಯದ ಸ್ಥಿತಿ – ಪ್ರಜಾವಾಣಿ ಚಿತ್ರಗಳು / ಮಾಲತೇಶ ಇಚ್ಚಂಗಿ
ಹೆಸರಿಗಷ್ಟೇ ಜಿಲ್ಲಾ ಕೇಂದ್ರವೆಂದು ಆಕ್ರೋಶ ನೀರಿಲ್ಲದ ಶೌಚಾಲಯಗಳು ಖಾಲಿ ಜಾಗದಲ್ಲಿ ಮೂತ್ರ ವಿಸರ್ಜನೆ
ಸಾರ್ವಜನಿಕ ಶೌಚಾಲಯ ಇಲ್ಲದಿದ್ದರಿಂದ ಕೆಲವರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ದುರ್ನಾತ ಹೆಚ್ಚಾಗಿ ಪರಿಸರ ಹಾಳಾಗುತ್ತಿದೆ
ರಾಮಣ್ಣ ಗಾಂಧಿ ಸರ್ಕಲ್ ಬೀದಿಬದಿ ವ್ಯಾಪಾರಿ
‘ಲಕ್ಷ ಲಕ್ಷ ಖರ್ಚಾದರೂ ಸಿಗದ ಪರಿಹಾರ’
‘ಹಾವೇರಿ ನಗರದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕಾಗಿ ಲಕ್ಷ ಲಕ್ಷ ಖರ್ಚು ಮಾಡಲಾಗುತ್ತಿದೆ. ಆದರೆ ಬಳಕೆಗೆ ಯೋಗ್ಯವಾದ ಶೌಚಾಲಯಗಳಿಲ್ಲ’ ಎಂದು ನಗರಸಭೆಯ ಸದಸ್ಯರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು. ‘ಕೆಲ ವರ್ಷಗಳ ಹಿಂದೆ ₹ 50 ಲಕ್ಷ ಖರ್ಚು ಮಾಡಿ ನಗರದ ಹಲವು ಕಡೆಗಳಲ್ಲಿ ಶೌಚಾಲಯ ನಿರ್ಮಿಸಲಾಗಿತ್ತು. ಆದರೆ ಯಾವ ಶೌಚಾಲಯವೂ ಸುಸ್ಥಿತಿಯಲ್ಲಿಲ್ಲ. ಕೆಲ ಕಡೆಗಳಲ್ಲಿ ಶೌಚಾಲಯಗಳ ಗೋಡೆಗಳು ಕುಸಿದಿವೆ. ಕೆಲ ಶೌಚಾಲಯಗಳು ಬಾಗಿಲು ಮುಚ್ಚಿವೆ’ ಎಂದು ಹೇಳಿದರು. ‘ಶೌಚಾಲಯ ನಿರ್ಮಾಣ ಮಾಡಿದ್ದೇವೆಂದು ಹೇಳಿ ಹಣ ಮಂಜೂರಾಗಿದೆ. ಆದರೆ ಶೌಚಾಲಯಗಳ ಸ್ಥಿತಿ ಹದಗೆಟ್ಟಿದೆ. ಶೌಚಾಲಯ ನಿರ್ಮಾಣದ ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವ ಅನುಮಾನವಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಶೌಚಾಲಯದ ಹೆಸರಿನಲ್ಲಿ ಹಣ ತಿಂದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಅಧ್ಯಕ್ಷರು ಹಾಗೂ ಪೌರಾಯುಕ್ತರ ಬಳಿ ಒತ್ತಾಯಿಸುತ್ತೇನೆ’ ಎಂದು ತಿಳಿಸಿದರು.
‘ಹೈಟೆಕ್ ಶೌಚಾಲಯ ನಿರ್ಮಾಣ’
‘ಹಾವೇರಿ ನಗರದಲ್ಲಿ ಈ ಹಿಂದೆ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯಗಳ ಸ್ಥಿತಿ ಶೋಚನೀಯವಾಗಿರುವುದು ಗಮನದಲ್ಲಿದೆ. ಇದಕ್ಕೆ ಕಾರಣ ಯಾರು? ಎಂಬುದು ಜನರಿಗೆ ಗೊತ್ತಿದೆ. ನಾನು ಅಧಿಕಾರ ವಹಿಸಿಕೊಂಡ ನಂತರ ಹೈಟೆಕ್ ಶೌಚಾಲಯ ನಿರ್ಮಿಸಲು ಒತ್ತು ನೀಡಿದ್ದೇನೆ’ ಎಂದು ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ಹೇಳಿದರು. ಶೌಚಾಲಯ ಸಮಸ್ಯೆ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಸ್ವಚ್ಛ ಭಾರತ ಯೋಜನೆಯಡಿ ಲಾಲ್‌ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆ ಬಳಿ ₹ 12 ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಕೆಲಸ ಆರಂಭವಾಗಿದೆ’ ಎಂದರು. ‘ನಗರದ ಯಾವ ಭಾಗದಲ್ಲಿ ಶೌಚಾಲಯಗಳ ಅಗತ್ಯವಿದೆ ಎಂಬುದನ್ನು ಅಧಿಕಾರಿಗಳ ಮೂಲಕ ತಿಳಿದುಕೊಳ್ಳುತ್ತಿದ್ದೇನೆ. ಅಗತ್ಯವಿರುವ ಕಡೆಗಳನ್ನು ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.