ADVERTISEMENT

ಹಾವೇರಿ: ಗ್ರಾಮಗಳಲ್ಲಿ ಗಾಡಾ ಸ್ಪರ್ಧೆಯ ಮಿಂಚು

ರೋಮಂಚನಕಾರಿ ಸ್ಪರ್ಧೆಗೆ ಅಣಿಯಾದ ಎತ್ತುಗಳು: ಬಲಾಬಲ ಪ್ರದರ್ಶನಕ್ಕೆ ಸೈ ಎಂದ ಸ್ಪರ್ಧಿಗಳು

ಸುರೇಖಾ ಪೂಜಾರ
Published 4 ಸೆಪ್ಟೆಂಬರ್ 2021, 19:30 IST
Last Updated 4 ಸೆಪ್ಟೆಂಬರ್ 2021, 19:30 IST
ಗಾಡಾ ಸ್ಪರ್ಧೆಯ ರೋಮಾಂಚನಕಾರಿ ದೃಶ್ಯ 
ಗಾಡಾ ಸ್ಪರ್ಧೆಯ ರೋಮಾಂಚನಕಾರಿ ದೃಶ್ಯ    

ಅಕ್ಕಿಆಲೂರ: ಸುಗ್ಗಿ ಮುಗಿಸಿ, ಹೊಲ ಖಾಲಿ ಮಾಡಿ ರೈತರು ಮತ್ತು ರಾಸುಗಳು ವಿಶ್ರಮಿಸಿಕೊಳ್ಳುವ ಹೊತ್ತಿನಲ್ಲಿ ಹಾನಗಲ್ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಜೋಡೆತ್ತಿನ ಖಾಲಿ ಗಾಡಾ ಸ್ಪರ್ಧೆ ಆರಂಭವಾಗುತ್ತದೆ.

ನಿಟಗಿನಕೊಪ್ಪ, ಉಪ್ಪುಣಸಿ, ಬೆಳಗಾಲಪೇಟೆ, ಹೇರೂರು, ಕೂಸನೂರು, ಅರಳೇಶ್ವರ ಮುಂತಾದ ಗ್ರಾಮಗಳಲ್ಲಿ ಪ್ರತಿವರ್ಷ ಗಾಡಾ ಸ್ಪರ್ಧೆಯ ಮಿಂಚು ಕಾಣುತ್ತದೆ. ಸ್ಪರ್ಧೆಗೆ ಎತ್ತುಗಳು ಮತ್ತು ಸ್ಪರ್ಧಿಗಳು ಅಣಿಯಾಗುತ್ತಿದ್ದಾರೆ.

ಈ ಗಾಡಾ ಸ್ಪರ್ಧೆಯಲ್ಲಿ ಗಾಡಾಕ್ಕೆ ಕಟ್ಟಿದ ಜೋಡೆತ್ತುಗಳು ಚಿನ್ನಾಟದೊಂದಿಗೆ ಮಿಂಚಿನ ಓಟಕ್ಕೆ ಅಣಿಯಾಗುತ್ತಿದ್ದಂತೆಯೇ ನೆರೆದ ಸಹಸ್ರಾರು ಸಂಖ್ಯೆಯ ಪ್ರೇಕ್ಷಕರು ಹರ್ಷೋದ್ಗಾರ ಮಾಡುತ್ತಾರೆ. ರೋಮಾಂಚನಕಾರಿ ಈ ಸ್ಪರ್ಧೆಗೆ ಇದೀಗ ಹಲವು ಗ್ರಾಮಗಳಲ್ಲಿ ಸಿದ್ಧತೆ ನಡೆಯುತ್ತಿದೆ.

ADVERTISEMENT

ಚಿನ್ನ–ಬೆಳ್ಳಿ ಬಹುಮಾನ

ಬೆಳಿಗ್ಗೆ ಬೇಗ ಆರಂಭವಾಗುವ ಈ ಸ್ಪರ್ಧೆ ಸಂಜೆ ಕತ್ತಲಾಗುವವರೆಗೂ ಮುಂದುವರಿದಿರುತ್ತದೆ. ಹಾವೇರಿ ಮಾತ್ರವಲ್ಲದೇ ಸುತ್ತಲಿನ ಹಲವು ಜಿಲ್ಲೆಗಳಿಂದ ಜೋಡೆತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿ ನೆರೆದವರಿಗೆ ರಸದೌತಣ ಉಣ ಬಡಿಸುತ್ತವೆ. ಸ್ಪರ್ಧೆ ತೆರೆ ಕಂಡ ಬಳಿಕ ಕಡಿಮೆ ಸಮಯದಲ್ಲಿ ಅಖಾಡದಲ್ಲಿ ದೂಳೆಬ್ಬಿಸಿ ನಿಗದಿತ ಗುರಿ ತಲುಪಿದ ಜೋಡೆತ್ತುಗಳಿಗೆ ಬೈಕ್, ಚಿನ್ನ, ಬೆಳ್ಳಿ, ಹಣ ಹೀಗೆ ಬಹುಮಾನ ನೀಡಲಾಗುತ್ತದೆ.

ಬೆಳಗ್ಗೆಯಿಂದ ಓಡುವ ಜೋಡೆತ್ತುಗಳಲ್ಲಿ ಕೆಲವು ಒಂದು ನಿಮಿಷದಲ್ಲಿ 1900 ಅಡಿವರೆಗೆ ಓಡಿದರೆ, ಇನ್ನಷ್ಟು 1500, 1600 ಅಡಿಗಳವರೆಗೆ ಓಡಿ ಗಮನ ಸೆಳೆಯುತ್ತವೆ. ಕೆಲ ಜೋಡೆತ್ತುಗಳ ಅಭಿಮಾನಿಗಳು ಅಖಾಡದಲ್ಲಿ ಜೋಡೆತ್ತುಗಳು ಮಿಂಚಿನ ಓಟ ಓಡುತ್ತಿದ್ದಂತೆ ಅವುಗಳ ಜೊತೆ ಓಡಿ ಹುರುಪು ತುಂಬುತ್ತಾರೆ.

ಪ್ರೇಕ್ಷಕರಿಗೆ ರಂಜನೆ

‘ಇನ್ನು ಗಾಡಾ ಓಡುವ ಅಖಾಡದ ಅಕ್ಕಪಕ್ಕದಲ್ಲಿ ನಿಂತಿರುವ ಅಭಿಮಾನಿಗಳು ಹಾಗೂ ಪ್ರೇಕ್ಷಕರ ಕೇಕೆ, ಸಿಳ್ಳೆ, ಚಪ್ಪಾಳೆಗಳ ಸಂಭ್ರಮವೂ ಹೆಚ್ಚಿರುವುದರಿಂದ ಜೋಡೆತ್ತುಗಳು ಶರವೇಗದಿಂದ ಓಡಿ ರಂಜಿಸುತ್ತವೆ’ ಎನ್ನುತ್ತಾರೆ ಸ್ಪರ್ಧೆಯ ಸಂಘಟಕರಲ್ಲಿ ಒಬ್ಬರಾದ ಬೆಳಗಾಲಪೇಟೆಯ ವಾಸುದೇವ.

ಕರಪತ್ರ ಮುದ್ರಣ

‘ಸ್ಪರ್ಧೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ಖಾಲಿ ಹೊಲ ಅಥವಾ ಕೆರೆಯ ಬಯಲು ಸ್ವಚ್ಛಗೊಳಿಸಿ, ರೋಣಗಲ್ಲು ಹೊಡೆದು ಒಂದು ಗಾಡಾ ನಿಲ್ಲುವಷ್ಟು ಅಗಲ ಹಾಗೂ 2 ಸಾವಿರ ಅಡಿ ಉದ್ದದಷ್ಟು ಟ್ರ್ಯಾಕ್ ಸಜ್ಜುಗೊಳಿಸಲಾಗುತ್ತದೆ. ಟ್ರ್ಯಾಕ್‍ನ ಎರಡೂ ಬದಿ ಅಳತೆಯ ಗುರುತುಗಳ ಬೋರ್ಡ್ ಹಾಕಲಾಗಿರುತ್ತದೆ. ಸ್ಪರ್ಧೆಯ ದಿನಾಂಕ, ಸ್ಥಳ, ಪ್ರವೇಶ ಶುಲ್ಕ, ನಿಯಮ, ಬಹುಮಾನಗಳ ವಿವರ ಸೇರಿದಂತೆ ಇತರ ಎಲ್ಲ ಮಾಹಿತಿಗಳನ್ನು ಒಳಗೊಂಡ ಕರಪತ್ರ ಮುದ್ರಿಸಿ 15-20 ದಿನ ಮೊದಲೇ ಆಸಕ್ತರಿಗೆ ತಲುಪಿಸಲಾಗುತ್ತದೆ’ ಎನ್ನುತ್ತಾರೆ ಸ್ಪರ್ಧೆಯ ಅಭಿಮಾನಿ ಕೂಸನೂರಿನ ಗುರು.

ಗಾಡಾ ಸ್ಪರ್ಧೆ ಬರೀ ಮನರಂಜನೆಗೆ ಸೀಮಿತವಾಗಿರದೇ ಸುಖ-ದುಃಖಗಳ ವಿನಿಮಯ ಹಾಗೂ ಪರಸ್ಪರ ಬಾಂಧವ್ಯ ಬೆಸುಗೆಗೂ ಕಾರಣವಾಗುತ್ತಿದೆ. ಮಳೆ-ಬೆಳೆ ಸಂಗತಿ, ಕೃಷಿ ಕಾರ್ಯ, ಹೊಸ ಸಂಶೋಧನೆ, ತಳಿಗಳ ಕುರಿತು ವಿಚಾರ ವಿನಿಮಯಗಳೂ ಇಲ್ಲಿ ಆಗುತ್ತವೆ. ಚಹಾ-ಚೂಡಾ ಆತಿಥ್ಯವೂ ಇಲ್ಲಿ ಸಾಮಾನ್ಯ. ಎಲೆ-ಅಡಕೆ ವಿನಿಮಯ ಮಾಡಿಕೊಂಡು ತಾಂಬೂಲ ಮೆಲ್ಲುತ್ತ ಸ್ಪರ್ಧೆಯ ಹಬ್ಬದೂಟ ಸವಿಯಲು ಮತ್ತೀಗ ಹಲವು ಗ್ರಾಮಸ್ಥರು ಅಣಿಯಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.