ADVERTISEMENT

ಲಿಂಗಾಯತ ಮಠಗಳಿಂದ ಶೈಕ್ಷಣಿಕ ಕ್ರಾಂತಿ: ಸಚಿವ ಶಿವಾನಂದ ಪಾಟೀಲ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 4:41 IST
Last Updated 4 ನವೆಂಬರ್ 2025, 4:41 IST
ಹಾವೇರಿ ತಾಲ್ಲೂಕಿನ ಕುಳೇನೂರ ಗ್ರಾಮದಲ್ಲಿ ನಿರ್ಮಿಸಲಾಗಿರುವ ಬಸವೇಶ್ವರ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಧರ್ಮಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಾತನಾಡಿದರು
ಹಾವೇರಿ ತಾಲ್ಲೂಕಿನ ಕುಳೇನೂರ ಗ್ರಾಮದಲ್ಲಿ ನಿರ್ಮಿಸಲಾಗಿರುವ ಬಸವೇಶ್ವರ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಧರ್ಮಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಾತನಾಡಿದರು   

ಹಾವೇರಿ: ‘ಧರ್ಮ ಜಾಗೃತಿಯ ಜೊತೆಗೆ ತ್ರಿವಿಧ ದಾಸೋಹದ ಮೂಲಕ ಮಾನವೀಯ ಮೌಲ್ಯದ ಸಮಾಜ ಕಟ್ಟುವಲ್ಲಿ ವೀರಶೈವ ಲಿಂಗಾಯತ ಮಠಗಳ ಪಾತ್ರ ಮಹತ್ವದ್ದಾಗಿದೆ. ಇಂಥ ಮಠಗಳಿಂದ ಶೈಕ್ಷಣಿಕ ಕ್ರಾಂತಿ ಆಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಬಣ್ಣಿಸಿದರು.

ತಾಲ್ಲೂಕಿನ ಕುಳೇನೂರ ಗ್ರಾಮದಲ್ಲಿ ನಿರ್ಮಿಸಲಾಗಿರುವ ಬಸವೇಶ್ವರ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಜಗತ್ತಿನಲ್ಲಿ ಹಲವು ಧರ್ಮಗಳಿದ್ದರೂ ಯಾವ ಧರ್ಮದಲ್ಲೂ ಮೇಲು-ಕೀಳಿಲ್ಲ. ವೀರಶೈವ ಲಿಂಗಾಯತ ಧರ್ಮದ ಮಠಗಳು, ಧರ್ಮ ಜಾಗೃತಿಯ ಜೊತೆಗೆ ವಸತಿ ಸಹಿತ ಅನ್ನ, ಜ್ಞಾನ ದಾಸೋಹ ಮಾಡುತ್ತಿವೆ. ವಿಜಯಪುರ ಜಿಲ್ಲೆಯಲ್ಲಿ ಬಂಥನಾಳ ಶಿವಯೋಗಿಯವರು, ಸಿದ್ಧಗಂಗೆಯ ಶಿವಕುಮಾರ ಶ್ರೀ, ಸುತ್ತೂರು ಶ್ರೀಗಳು... ಹೀಗೆ ವೀರಶೈವ ಲಿಂಗಾಯತ ಮಠಗಳು ಜಾತಿ, ಮತ-ಪಂಥ, ಬಡವ–ಶ್ರೀಮಂತ ಎಂಬ ಭೇದವಿಲ್ಲದೇ ಸಾವಿರಾರೂ ಮಕ್ಕಳಿಗೆ ಜ್ಞಾನ, ಅನ್ನ, ಅರಿವು, ಆಚಾರ, ಸಂಸ್ಕೃತಿ ಸಹಿತ ಅಕ್ಷರ ದಾಸೋಹ ನೀಡುವ ಮೂಲಕ ಉತ್ತಮ ಸಂಸ್ಕಾರದ ಸಮಾಜ ಕಟ್ಟುವ ಸೇವೆ ಮಾಡುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

‘ವೀರಶೈವ ಲಿಂಗಾಯತ ಮಠಗಳಲ್ಲಿ ಜ್ಞಾನ ಪಡೆದವರು, ಇಂದು ಐಎಎಸ್, ಐಪಿಎಸ್ ಮಾತ್ರವಲ್ಲದೇ ಜಗತ್ತಿನಾದ್ಯಂತ ಉನ್ನತ ಸ್ಥಾನದಲ್ಲಿದ್ದಾರೆ. ಇದಕ್ಕೆಲ್ಲ ಸಿದ್ಧಗಂಗಾ ಸೇರಿದಂತೆ ನಾಡಿನ ವೀರಶೈವ ಲಿಂಗಾಯತ ಧರ್ಮಗಳ ಮಠಾಧೀಶರ ಮಾನವೀಯ ಮೌಲ್ಯದ ಜ್ಞಾನ ಸಂಸ್ಕಾರವೇ ಕಾರಣ’ ಎಂದರು.

ಹಾವೇರಿಯ ಹರಸೂರು ಬಣ್ಣದ ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಉಪ್ಪುಣಸಿಯ ಮುರುಘಾಮಠದ ಜಯಬಸವ ಸ್ವಾಮೀಜಿ, ಕುಳೇನೂರ ಶಿವಲಿಂಗೇಶ್ವರ ಮಠದ ವಾಗೀಶ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಅವರು ಅಧ್ಯಕ್ಷತೆ ವಹಿಸಿದ್ದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ವೀರೇಶ ಮತ್ತಿಹಳ್ಳಿ, ಎಂ.ಎಂ.ಹಿರೇಮಠ, ಶಂಭನಗೌಡ ಪಾಟೀಲ, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಶಶಿಧರ ಮತ್ತಿಹಳ್ಳಿ, ಚಿನ್ನವ್ವ ಬಡವಣ್ಣವರ, ಮಲ್ಲೇಶ ಮತ್ತಿಹಳ್ಳಿ, ಬಸಲಿಂಗಪ್ಪ ಬಂಕಾಪುರ, ಚಂದ್ರಪ್ಪ ನೆಗಳೂರು, ವೀರಣ್ಣ ಹಾವೇರಿ, ಸಿ.ಬಿ. ಶೀಗಿಹಳ್ಳಿ, ಎಂ.ಎಂ. ಮೈದೂರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.