ADVERTISEMENT

ಧರ್ಮ ಮಾರ್ಗದಿಂದ ಸಾಮರಸ್ಯದ ಬದುಕು

ದಾನಮ್ಮ ದೇವಿ ಜಾತ್ರಾ ಮಹೋತ್ಸವ: ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 15:03 IST
Last Updated 23 ನವೆಂಬರ್ 2022, 15:03 IST
ಹಾವೇರಿ ನಗರದ ದಾನಮ್ಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ನಡೆದ ಸಭಾ ಕಾರ್ಯಕ್ರಮವನ್ನು ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಎಂ.ಎಸ್‌.ಕೋರಿಶೆಟ್ಟರ್‌, ಶೋಭಾತಾಯಿ ಮಾಗಾವಿ, ಮಾರುತಿ ಶಿಡ್ಲಾಪೂರ ಇದ್ದಾರೆ 
ಹಾವೇರಿ ನಗರದ ದಾನಮ್ಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ನಡೆದ ಸಭಾ ಕಾರ್ಯಕ್ರಮವನ್ನು ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಎಂ.ಎಸ್‌.ಕೋರಿಶೆಟ್ಟರ್‌, ಶೋಭಾತಾಯಿ ಮಾಗಾವಿ, ಮಾರುತಿ ಶಿಡ್ಲಾಪೂರ ಇದ್ದಾರೆ    

ಹಾವೇರಿ:ಬಸವಾದಿ ಶಿವಶರಣರು ತಮಗಾಗಿ ಬದುಕಲಿಲ್ಲ. ಜಗದ ಅಂಧಕಾರವನ್ನು ಕಳೆಯಲು ನಡೆ ಹಾಗೂ ನುಡಿಯನ್ನು ಕಲಿಸಿದರು. ಧರ್ಮ ಮನಸ್ಸನ್ನು ಶುದ್ಧಗೊಳಿಸಿ, ಕೂಡಿ ಬಾಳುವುದಕ್ಕೆ ಪ್ರೇರೇಪಿಸುತ್ತದೆ. ಎಲ್ಲರೂ ಧರ್ಮ ಮಾರ್ಗದಲ್ಲಿ ಸಾಗಿದಾಗಲೇ ಜೀವನ ಶಾಂತಿ ನೆಮ್ಮದಿಯಿಂದ ಕೂಡಿರಲು ಸಾಧ್ಯವಾಗುತ್ತದೆ ಎಂದುಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಹೇಳಿದರು.

ನಗರದ ದಾನಮ್ಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 12ನೇ ಶತಮಾನದಲ್ಲಿ ದಾನಮ್ಮ ನೀಡಿದ ಉದಾತ್ತವಾದ ಸಮಾಜೋಧಾರ್ಮಿಕ ಸಿದ್ಧಾಂತಗಳನ್ನು ಆಚರಿಸುವ ಅಗತ್ಯವಿದೆ. ಆಧುನಿಕ ಭರಾಟೆಯಲ್ಲಿ ಅವುಗಳು ಕಳೆದು ಹೋಗುವುದು ಬೇಡ ಎಂದು ಸಲಹೆ ನೀಡಿದರು.

ಹಾವೇರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್‍ ಅಧ್ಯಕ್ಷ ಮಾರುತಿ ಶಿಡ್ಲಾಪೂರ ಉಪನ್ಯಾಸ ನೀಡಿ, ‘ಮನುಷ್ಯನ ಅಹಂಕಾರದ ನಾಶಕ್ಕೆ ಧರ್ಮ ಅವಶ್ಯ. ಧರ್ಮಯುಗದ ಪುನರುತ್ಥಾನ ಆರಂಭವಾಗಿದ್ದು ಬಸವಾದಿ ಶಿವಶರಣರ, ದಾರ್ಶನಿಕರ ಚಿಂತನೆಗಳು ಹೆಚ್ಚು ಮಾನ್ಯವಾಗುತ್ತಿವೆ. ದ್ವೇಷ ಜೀವನದಿಂದ ಮುಕ್ತವಾಗಿ ಧರ್ಮದ ನಡೆಯು ಅತ್ಯಗತ್ಯವಾಗಿದೆ. ಪ್ರೀತಿ, ಪರೋಪಕಾರಗಳು ಜೀವನದ ಅಂಗವಾಗಬೇಕಿದೆ. ದಾನಮ್ಮ ಬಸವಾದಿ ಪ್ರಮಥರ ವೈಚಾರಿಕ ಮತ್ತು ಮಾನವೀಯ ತತ್ವ ಸಿದ್ಧಾಂತಗಳನ್ನು ಸಮಾಜಕ್ಕೆ ಅರುಹಿದ ಶ್ರೇಷ್ಠ ಶರಣೆಯಾಗಿದ್ದಾರೆ’ ಎಂದು ಬಣ್ಣಿಸಿದರು.

ADVERTISEMENT

ನಗರಸಭೆಯ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಾವೇರಿ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್. ಕೋರಿಶೆಟ್ಟರ್‌, ನಗರಸಭಾ ಸದಸ್ಯ ಮಲ್ಲಿಕಾರ್ಜುನ ಸಾತೇನಹಳ್ಳಿ, ಗಿರೀಶ ತುಪ್ಪದ ಅವರನ್ನು ಸನ್ಮಾನಿಸಲಾಯಿತು.

ದೇವಸ್ಥಾನ ಟ್ರಸ್ಟ್ ಕಮಿಟಿಯ ಅಧ್ಯಕ್ಷೆ ಶೋಭಾತಾಯಿ ಮಾಗಾವಿ ಪ್ರಾಸ್ತಾವಿಕವಾಗಿ ಮಾತನಾಡಿ, ದೇವಸ್ಥಾನವು ಹಮ್ಮಿಕೊಳ್ಳುವ ಧಾರ್ಮಿಕ ಮತ್ತು ಸಮಾಜಮುಖಿ ಕಾರ್ಯಗಳನ್ನು ಪರಿಚಯಿಸಿದರು.ಮಲ್ಲಿಕಾರ್ಜುನ ಹಿಂಚಿಗೇರಿ ಕಾರ್ಯಕ್ರಮ ನಿರೂಪಿಸಿದರು. ಶೋಭಾ ತಾಂಡೂರ ವಂದಿಸಿದರು.

ಪಲ್ಲಕ್ಕಿ ಉತ್ಸವ:

ಹಾವೇರಿಯ ಗುರುಪಾದೇಶ್ವರ ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಹರಸೂರು ಬಣ್ಣದ ಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ದಾನಮ್ಮ ದೇವಿಯ ಪಲ್ಲಕ್ಕಿ ಉತ್ಸವ ಶ್ರದ್ಧಾಭಕ್ತಿಯಿಂದ ನೂರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

ಮಂಜುನಾಥ ಹಾಗೂ ಚನ್ನಪ್ಪ ಹಳಕೊಪ್ಪ ಸಂಗೀತ ಸೇವೆ ನೀಡಿದರು. ಮಕ್ಕಳು ನ್ಯತ್ಯ ಕಾರ್ಯಕ್ರಮ ನೀಡಿದರು.

ಕಾರ್ತಿಕ ದೀಪೋತ್ಸವ ಇಂದು

ಹಾವೇರಿ: ತಾಲ್ಲೂಕಿನ ನೆಗಳೂರಿನ ಸಂಸ್ಥಾನ ಹಿರೇಮಠದ ಗುರುಶಾಂತ ಶಿವಯೋಗಿಗಳ ಗದ್ದುಗೆಯ ಕಾರ್ತಿಕ ದೀಪೋತ್ಸವವು ನ.24ರಂದು ಸಂಜೆ 7 ಗಂಟೆಗೆ ಶ್ರೀ ಮಠದ ಗುರುಶಾಂತೇಶ್ವರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿಯ ಸಾನ್ನಿಧ್ಯದಲ್ಲಿ ಜರಗುವುದು.

ಬೆಳಿಗ್ಗೆ 7 ಗಂಟೆಗೆ ಉಭಯ ಶ್ರೀಗಳ ಗದ್ದುಗೆಗಳಿಗೆ ರುದ್ರಾಭಿಷೇಕ ಬಿಲ್ವಾರ್ಚನೆ ಮಹಾ ಮಂಗಳಾರತಿ ಜರಗುವುದು. ನಾಡಿನ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯ ಸದ್ಭಕ್ತರ ಸಮ್ಮುಖದಲ್ಲಿ ಸಂಜೆ ಶ್ರೀಗಳು ದೀಪೋತ್ಸವಕ್ಕೆ ಚಾಲನೆ ನೀಡುವರು.

ದೀಪೋತ್ಸವ ನಾಳೆ :

ಹಾವೇರಿ ನಗರದ ಶಿವಲಿಂಗ ನಗರದಲ್ಲಿರುವ ಬನಶಂಕರಿ ದೇವಿಯ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ನ.25ರ ಶುಕ್ರವಾರ ರಾತ್ರಿ 7.30ಕ್ಕೆ ಜರುಗಲಿದೆ ಎಂದು ಹಾವೇರಿ ದೇವಾಂಗ ಸಮಾಜದ ಅಧ್ಯಕ್ಷ ಸೋಮಣ್ಣ ಕುದರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.