ADVERTISEMENT

ಲಾಕ್‌ಡೌನ್‌: ಕೋವಿಡ್‌ ನಿಯಮ ಪಾಲಿಸಿ

ಬೆಳಿಗ್ಗೆ 4 ತಾಸು ಅಗತ್ಯ ವಸ್ತುಗಳ ಖರೀದಿಗೆ ಅವಕಾಶ: ಬಸ್‌, ಆಟೊ ಸಂಚಾರವಿಲ್ಲ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 16:54 IST
Last Updated 27 ಏಪ್ರಿಲ್ 2021, 16:54 IST
ಕರ್ಫ್ಯೂ ಜಾರಿಗೂ ಮುನ್ನ ಊರು ತಲುಪಲು ಹಾವೇರಿ ನಗರ ಸಾರಿಗೆ ಬಸ್‌ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು –ಪ್ರಜಾವಾಣಿ ಚಿತ್ರ  
ಕರ್ಫ್ಯೂ ಜಾರಿಗೂ ಮುನ್ನ ಊರು ತಲುಪಲು ಹಾವೇರಿ ನಗರ ಸಾರಿಗೆ ಬಸ್‌ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು –ಪ್ರಜಾವಾಣಿ ಚಿತ್ರ     

ಹಾವೇರಿ: ಕೊರೊನಾ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ಮೇ 12ರವರೆಗೆ (14 ದಿನಗಳವರೆಗೆ) ರಾಜ್ಯದಾದ್ಯಂತ ಲಾಕ್‌ಡೌನ್‌ ಜಾರಿಗೊಳಿಸಿದೆ. ಸಾರ್ವಜನಿಕರು ಜಿಲ್ಲೆಯಾದ್ಯಂತ ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

144 ಸೆಕ್ಷನ್‌ ಅನ್ವಯ ಜಿಲ್ಲೆಯಾದ್ಯಂತ ವಿನಾಯಿತಿ ಪಡೆದ ಉದ್ದೇಶಗಳನ್ನು ಹೊರತುಪಡಿಸಿ ಅಥವಾ ಸರ್ಕಾರದ ಆದೇಶದಲ್ಲಿ ಈಗಾಗಲೇ ವ್ಯಕ್ತಿಗಳ ಸಂಖ್ಯೆಯನ್ನು ನಿರ್ದಿಷ್ಟ ಪಡಿಸಿರುವುದನ್ನು ಹೊರತುಪಡಿಸಿ, ಸಾರ್ವಜನಿಕ ಸ್ಥಳಗಳಲ್ಲಿ ನಾಲ್ಕು ಮಂದಿಗೂ ಹೆಚ್ಚು ಜನರು ಗುಂಪುಗೂಡುವುದನ್ನು ನಿಷೇಧಿಸಿದೆ.

ಸರ್ಕಾರದ ಮಾರ್ಗಸೂಚಿ:

ADVERTISEMENT

ಜೀವನಾವಶ್ಯಕವಾದ ಆಹಾರಧಾನ್ಯ, ಹಣ್ಣು, ಹಾಲು, ಮಾಂಸ ಹಾಗೂ ಮೀನು ಮಳಿಗೆಗಳಿಗೆ ಪ್ರತಿದಿನ ಬೆಳಿಗ್ಗೆ 6ರಿಂದ 10 ಗಂಟೆವರೆಗೆ ಅವಕಾಶವಿರುತ್ತದೆ. ಹೊಟೇಲ್, ಬಾರ್ ಮತ್ತು ರೆಸ್ಟೋರೆಂಟ್‍ಗಳಿಗೆ ಪಾರ್ಸಲ್‍ಗೆ ಅವಕಾಶ ಕಲ್ಪಿಸಲಾಗಿದೆ. ಮೆಡಿಕಲ್ ಶಾಪ್, ಲ್ಯಾಬ್, ರಕ್ತನಿಧಿ, ಆಸ್ಪತ್ರೆಗಳು ತೆರೆದಿರುತ್ತವೆ. ಸರ್ಕಾರಿ ಕಚೇರಿ, ಬ್ಯಾಂಕ್ ಎಟಿಎಂ ತೆರೆದಿರುತ್ತವೆ. ಕಟ್ಟಡ ನಿರ್ಮಾಣ ಕೆಲಸಗಳಿಗೆ ಅನುಮತಿ ಇದೆ. ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ನಿರ್ಬಂಧ ಇರುವುದಿಲ್ಲ. ಗಾರ್ಮೆಂಟ್ ಹೊರತುಪಡಿಸಿ ಕೈಗಾರಿಕಾ ಉತ್ಪಾದನಾ ಘಟಕಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಖಾಸಗಿ, ಸರ್ಕಾರಿ ಬಸ್‍ ಸಂಚಾರ ಇರುವುದಿಲ್ಲ. ಟ್ಯಾಕ್ಸಿ, ಕ್ಯಾಬ್, ಆಟೊ ಸೇವೆ ಇರುವದಿಲ್ಲ. ಚಿತ್ರಮಂದಿರ, ಶಾಪಿಂಗ್ ಮಾಲ್, ಜಿಮ್, ಕ್ರೀಡಾ ಮೈದಾನ, ಈಜುಕೊಳ, ಕ್ಲಬ್, ರಂಗಮಂದಿರ, ಸಭಾಂಗಣ ನಿಷೇಧವಿರುತ್ತದೆ. ಸಾಮಾಜಿಕ, ರಾಜಕೀಯ, ಮನರಂಜನಾ, ಧಾರ್ಮಿಕ, ಸಾಂಸ್ಕೃತಿಕ ಸಮಾರಂಭಕ್ಕೆ ಅವಕಾಶವಿರುವದಿಲ್ಲ ಎಂದು ತಿಳಿಸಲಾಗಿದೆ.

ಖರೀದಿಗೆ ಮುಗಿಬಿದ್ದ ಜನರು:

ಲಾಕ್‌ಡೌನ್‌ ಜಾರಿ ಹಿನ್ನೆಲೆಯಲ್ಲಿ ಜನರು ಸಾಮಗ್ರಿ ಖರೀದಿಸಲು ದಿನಸಿ ಅಂಗಡಿ, ಬೇಕರಿ, ಚಾಟ್ಸ್‌ ಸೆಂಟರ್‌, ಮೆಡಿಕಲ್‌ ಶಾಪ್‌, ಹಾರ್ಡ್‌ವೇರ್‌, ಬಟ್ಟೆ ಮುಂತಾದ ಮಳಿಗೆಗಳಲ್ಲಿ ಜನದಟ್ಟಣೆ ಕಂಡು ಬಂತು. ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ತರಕಾರಿ, ಹಣ್ಣು ಖರೀದಿಸು ಹೆಚ್ಚಿನ ಸಂಖ್ಯೆಯ ಗ್ರಾಹಕರು ನೆರೆದಿದ್ದರು.

ಲಾಕ್‌ಡೌನ್‌ಗೂ ಮುನ್ನ ಊರುಗಳನ್ನು ತಲುಪಲು ನಗರ ಸಾರಿಗೆ ಬಸ್‌ ನಿಲ್ದಾಣಕ್ಕೆ ಹೆಚ್ಚಿನ ಪ್ರಯಾಣಿಕರು ಲಗೇಜುಗಳ ಸಮೇತ ಬಂದಿದ್ದರು. ವಿದ್ಯಾರ್ಥಿಗಳು, ನೌಕರರು ಪಟ್ಟಣ ಮತ್ತು ನಗರಗಳಿಂದ ಸ್ವ–ಗ್ರಾಮಗಳಿಗೆ ತೆರಳಿದ ದೃಶ್ಯ ಕಂಡು ಬಂತು. ಬ್ಯಾಂಕ್‌ ಮತ್ತು ಎಟಿಎಂ ಸೆಂಟರ್‌ಗಳ ಮುಂಭಾಗ ಗ್ರಾಹಕರ ಸರದಿ ಸಾಲಿನಲ್ಲಿ ಬಿಸಿಲಿನಲ್ಲಿ ನಿಂತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.