ADVERTISEMENT

ಮೋದಿ ವಿರುದ್ಧ ಚುನಾವಣಾ ಆಯೋಗ ಕ್ರಮ ಜರುಗಿಸಲಿ: ಬಿ.ಕೆ.ಹರಿಪ್ರಸಾದ್‌

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2024, 12:41 IST
Last Updated 22 ಏಪ್ರಿಲ್ 2024, 12:41 IST
<div class="paragraphs"><p>ಬಿ.ಕೆ.ಹರಿಪ್ರಸಾದ್‌</p></div>

ಬಿ.ಕೆ.ಹರಿಪ್ರಸಾದ್‌

   

ಹಾವೇರಿ: ‘ತೆರಿಗೆ ಹಣ ಯಾವುದೋ ಒಂದು ಸಮುದಾಯಕ್ಕೆ ಹೋಗುತ್ತದೆ’ ಎಂದು ಪ್ರಧಾನಿ ಮೋದಿಯವರು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿದ್ದಾರೆ. ಚುನಾವಣಾ ಆಯೋಗ ನಿಷ್ಪಕ್ಷಪಾತ ಚುನಾವಣೆ ಮಾಡುವುದಾದರೆ ಮೋದಿಯವರ ಮೇಲೆ ಕ್ರಮ ಜರುಗಿಸಲಿ. ಪ್ರಚೋದನಕಾರಿಯಾಗಿ ಮಾತನಾಡಿದರೆ ಪೊಲೀಸರು ಸ್ವಯಂಪ್ರೇರಿತರಾಗಿ ಎಫ್‌ಐಆರ್‌ ದಾಖಲಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು. 

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನರೇಂದ್ರ ಮೋದಿ ಹಾಗೆ ಮಾತನಾಡಲು ಯಾವುದೋ ಪಂಚಾಯಿತಿ ಸದಸ್ಯ ಅಲ್ಲ, ಅವರು ಪ್ರಧಾನ ಮಂತ್ರಿ. ಎಲ್ಲ ನಾಗರಿಕರ ಜೀವ ಕಾಪಾಡುವ ಮೂಲಭೂತ ಜವಾಬ್ದಾರಿ ಅವರ ಮೇಲಿದೆ. ತೆರಿಗೆ ಕಟ್ಟಬೇಕಾದರೆ ಒಂದೇ ಧರ್ಮ, ಭಾಷೆಯವರು ತೆರಿಗೆ ಕಟ್ಟಿರುವುದಿಲ್ಲ. ಸರ್ವರಿಗೂ ಸಮಪಾಲು, ಸಮಬಾಳು ಆಶಯದ ಮೇಲೆ ತೆರಿಗೆ ಹಣ ಹಂಚಬೇಕು ಎಂದು ನುಡಿದರು. 

ADVERTISEMENT

ಬಿಜೆಪಿಯವರು ಜಾಹೀರಾತಿನಲ್ಲಿ ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಬಿಹಾರ್‌ದಲ್ಲಿ ಮೀಸಲಾತಿ ಬಗ್ಗೆ ಮಾತನಾಡಿದ್ದಕ್ಕೆ ಸೋತರು. ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ಮಾಡಬೇಕು ಎಂದಿದ್ದರು. ಸಂವಿಧಾನದಲ್ಲಿರುವ ಸಮಾನ ಅವಕಾಶ ಹಕ್ಕಿಗೆ ವಿರುದ್ಧ ಇರುವವರು ಬಿಜೆಪಿಯವರು ಎಂದು ವಾಗ್ದಾಳಿ ನಡೆಸಿದರು. 

ನಕ್ಸಲ್‌ ದಾಳಿ ಬಗ್ಗೆ ಬಿಜೆಪಿಯವರು ಮಾತನಾಡುತ್ತಾರೆ. ಹಿಂದೆ ನಡೆದ ನಕ್ಸಲ್‌ ದಾಳಿಯಲ್ಲಿ 27 ಕಾಂಗ್ರೆಸ್‌ ನಾಯಕರನ್ನು ಕಳೆದುಕೊಂಡಿದ್ದೇವೆ. ನಕ್ಸಲ್‌ ಹಾಗೂ ಬಿಜೆಪಿ ಸೂತ್ರದಾರರ ನಡುವೆ ಒಳ್ಳೆ ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡಿದ್ದಾರೆ. ಮೋದಿಯವರು ಅಮೃತ ಕಾಲ ಎಂದು ದೊಡ್ಡದಾಗಿ ಭಾಷಣ ಮಾಡುತ್ತಾರೆ. 10 ವರ್ಷ ಏನು ಮಾಡಿದ್ದಾರೆ ಎಂಬುದನ್ನು ಜಾಹೀರಾತಿನಲ್ಲಿ ಹೇಳಿಲ್ಲ. ಸಾಲ ಯಾರಿಗಾಗಿ ಮಾಡಿದ್ದಾರೆ ಎಂದು ಪ್ರಣಾಳಿಕೆಯಲ್ಲಿ ಹೇಳಿಲ್ಲ ಎಂದು ಜರಿದರು. 

ಬರೀ ಪಾಕಿಸ್ತಾನ , ಹಿಂದೂ– ಮುಸ್ಲಿಂ, ಪಾಳು ಬಿದ್ದಿರುವ ದೇವಸ್ಥಾನ, ಮಸೀದಿ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಬದುಕುವುದಕ್ಕೆ ಏನು ಮಾಡಬೇಕು ಅದನ್ನು ಮಾಡಿಲ್ಲ. ಕೇಂದ್ರದಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇವೆ. ಅದನ್ನು ಭರ್ತಿ ಮಾಡಿಲ್ಲ. ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣದಲ್ಲಿ ಹೆಣದ ಮೇಲೆ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದು, ಇದರಲ್ಲಿ ಕುಖ್ಯಾತಿ ಪಡೆದಿದ್ದಾರೆ. ಯಾರೋ ಒಬ್ಬ ಹತ್ಯೆ ಮಾಡಿದ್ದಕ್ಕೆ ಇಡೀ ಸಮುದಾಯ ದೂಷಿಸುವುದು ಸರಿಯಲ್ಲ. ಆಪರೇಷನ್ ಕಮಲ ಮಾಡುವುದರಲ್ಲಿ ಇಡೀ ಪ್ರಪಂಚದಲ್ಲಿ ಇವರಷ್ಟು ಕುಖ್ಯಾತಿ ಪಡೆದವರಿಲ್ಲ. ಮುಂದೆಯೂ ಆಪರೇಷನ್ ಕಮಲ ಮಾಡುತ್ತಾರೆ, ಆದರೆ ಅದು ಯಶಸ್ವಿ ಆಗಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.