ADVERTISEMENT

ಹಾವೇರಿ– ಗದಗ ಲೋಕಸಭಾ ಕ್ಷೇತ್ರ: ಅಪ್ಪನ ಹಾದಿಯಲ್ಲಿ ಪುತ್ರ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2024, 17:08 IST
Last Updated 13 ಮಾರ್ಚ್ 2024, 17:08 IST
<div class="paragraphs"><p>ತಂದೆ ಎಸ್‌.ಆರ್‌. ಬೊಮ್ಮಾಯಿ ಮತ್ತು&nbsp;ಬಸವರಾಜ ಬೊಮ್ಮಾಯಿ</p></div>

ತಂದೆ ಎಸ್‌.ಆರ್‌. ಬೊಮ್ಮಾಯಿ ಮತ್ತು ಬಸವರಾಜ ಬೊಮ್ಮಾಯಿ

   

ಹಾವೇರಿ: ಶಿಗ್ಗಾವಿ ಕ್ಷೇತ್ರದ ಶಾಸಕ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಾವೇರಿ–ಗದಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಒಲಿದಿದೆ. ಇದು ನಿರೀಕ್ಷಿತವೇ ಆದರೂ, ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿರುವ ಬೊಮ್ಮಾಯಿ ಅವರ ನಡೆ ಜನರಲ್ಲಿ ಅಚ್ಚರಿ ಮೂಡಿಸಿದೆ.

ಎರಡು ಬಾರಿ ವಿಧಾನ ಪರಿಷತ್‌ ಸದಸ್ಯರಾಗಿ (1997 ಮತ್ತು 2003) ಹಾಗೂ ಶಿಗ್ಗಾವಿ ಕ್ಷೇತ್ರದಿಂದ (2008ರಿಂದ 2023ರವರೆಗೆ) ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ ಅವರು ಜಲಸಂಪನ್ಮೂಲ ಸಚಿವರಾಗಿ, ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 2021ರ ಜುಲೈ 29ರಂದು ರಾಜ್ಯದ ಮುಖ್ಯಮಂತ್ರಿಯಾಗಿ 2023ರ ಮೇ 13ರವರೆಗೆ ಉನ್ನತ ಹುದ್ದೆ ಅಲಂಕರಿಸಿದ್ದರು.

ADVERTISEMENT

ಅಪ್ಪ– ಮಗ ಸಿಎಂ:

ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್‌.ಆರ್‌. ಬೊಮ್ಮಾಯಿ ಅವರು 1988ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ನಂತರ, ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದ ಅವರು 1992 ಮತ್ತು 1998ರಲ್ಲಿ ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. 1996ರಿಂದ 1998ರವರೆಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ ರಾಷ್ಟ್ರ ರಾಜಕಾರಣದಲ್ಲಿ ಹೆಸರು ಮಾಡಿದ್ದರು.

ತಂದೆಯಂತೆ ಪುತ್ರ ಬಸವರಾಜ ಬೊಮ್ಮಾಯಿ ಅವರು ಕೂಡ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ರಾಜ್ಯದಲ್ಲಿ ಅಪ್ಪ–ಮಗ ಇಬ್ಬರೂ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದವರಲ್ಲಿ ಬೊಮ್ಮಾಯಿ ಅವರ ಜೋಡಿ ಎರಡನೆಯದ್ದು. ಮೊದಲನೇ ಜೋಡಿಯೆಂದರೆ ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ.ಕುಮಾರಸ್ವಾಮಿ. ತಂದೆ ಎಸ್‌.ಆರ್‌.ಬೊಮ್ಮಾಯಿ ಅವರಂತೆ ಈಗ ಪುತ್ರ ಬಸವರಾಜ ಬೊಮ್ಮಾಯಿ ಕೂಡ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದ್ದಾರೆ.

ನಾನು ಆಕಾಂಕ್ಷಿಯಲ್ಲ:

‘ನಾನು ಲೋಕಸಭಾ ಚುನಾವಣೆಯ ಟಿಕೆಟ್‌ ಆಕಾಂಕ್ಷಿಯಲ್ಲ’ ಎಂದು ಮೊದಲಿನಿಂದಲೂ ಹೇಳಿಕೊಂಡೇ ಬಂದಿದ್ದ ಬಸವರಾಜ ಬೊಮ್ಮಾಯಿ ಅವರು, ಸದ್ದಿಲ್ಲದೇ ಚುನಾವಣೆಗೆ ತಾಲೀಮು ನಡೆಸುತ್ತಿದ್ದುದು ಮಾತ್ರ ಗುಟ್ಟಾಗಿ ಉಳಿದಿರಲಿಲ್ಲ.

ಅವರ ಜನ್ಮದಿನದ ಅಂಗವಾಗಿ ಶಿಗ್ಗಾವಿ–ಸವಣೂರು ಕ್ಷೇತ್ರದಲ್ಲಿ ಆರೋಗ್ಯ ಶಿಬಿರ, ನೇತ್ರದಾನ ಶಿಬಿರ, ‘ಶ್ರೇಷ್ಠ ಕನ್ನಡಿಗ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳನ್ನು ಬಹು ಆಸಕ್ತಿಯಿಂದ ಆಯೋಜಿಸಿದ್ದರು. ಹಾನಗಲ್‌ನಲ್ಲಿ ದಿವಂಗತ ಸಿ.ಎಂ.ಉದಾಸಿ ಅವರ ಜನ್ಮದಿನ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಹೀಗೆ ನಿರಂತರವಾಗಿ ಜನಸಂಪರ್ಕದಲ್ಲಿರುವ ಪ್ರಯತ್ನ ಮಾಡಿದ್ದರು.

ಬೊಮ್ಮಾಯಿಗೆ ನಿರಾಸೆ:

ರಾಜ್ಯದ ಮುಖ್ಯಮಂತ್ರಿಯಾದ ನಂತರ, 2023ರಲ್ಲಿ ಎದುರಾದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಗೆಲುವು ಸಾಧಿಸದೇ ಹೋದದ್ದು ಬಸವರಾಜ ಬೊಮ್ಮಾಯಿ ಅವರಿಗೆ ತೀವ್ರ ನಿರಾಸೆ ತಂದಿತ್ತು. ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿದ್ದ ಬೊಮ್ಮಾಯಿ ಅವರು ಬಿಜೆಪಿಯನ್ನು ಮತ್ತೆ ಆಡಳಿತಕ್ಕೆ ತರುವಲ್ಲಿ ಎಡವಿದ್ದು, ಪಕ್ಷದಲ್ಲಿ ಅವರಿಗೆ ದೊಡ್ಡ ಹಿನ್ನಡೆಯಾಗಿತ್ತು. ವಿಧಾನಸಭೆ ವಿರೋಧ ಪಕ್ಷದ ಸ್ಥಾನವೂ ಕೈತಪ್ಪಿ ಹೋದ ನಂತರ ಬೊಮ್ಮಾಯಿ ಅವರು ‘ಶಾಸಕ’ ಸ್ಥಾನಕ್ಕೆ ಮಾತ್ರ ತೃಪ್ತಿ ಪಡುವಂತಾಯಿತು.

ರಾಜ್ಯ ರಾಜಕಾರಣದಲ್ಲಿ ಆದ ದೊಡ್ಡ ಹಿನ್ನಡೆ, ತಂದೆ ಎಸ್‌.ಆರ್‌. ಬೊಮ್ಮಾಯಿ ಅವರು ರಾಷ್ಟ್ರ ರಾಜಕಾರಣದಲ್ಲಿ ಮಿಂಚಿದ ಪ್ರೇರಣೆ, ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗಿನ ಉತ್ತಮ ಬಾಂಧವ್ಯ ಈ ಎಲ್ಲ ಕಾರಣಗಳು ಬಸವರಾಜ ಬೊಮ್ಮಾಯಿ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಿವೆ ಎನ್ನುತ್ತಾರೆ ಬಿಜೆಪಿ ಕಾರ್ಯಕರ್ತರು.

ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಮಾಡಿ ದೇಶವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕೆಂಬ ಬಯಕೆ ಶಿಗ್ಗಾವಿ–ಸವಣೂರು ಕ್ಷೇತ್ರದ ಜನರದ್ದು. ಹೆಚ್ಚು ಮತಗಳಿಂದ ಗೆಲ್ಲಿಸುವ ಭರವಸೆ ಇದೆ
– ಬಸವರಾಜ ಬೊಮ್ಮಾಯಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.