ADVERTISEMENT

ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಬಿದ್ದ ಕೆರೆ ಅಭಿವೃದ್ಧಿ ಪ್ರಾಧಿಕಾರದ ನೌಕರ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 13:57 IST
Last Updated 1 ಏಪ್ರಿಲ್ 2023, 13:57 IST
ಶಿವಲಿಂಗಸ್ವಾಮಿ ಹಲಗಲಿಮಠ
ಶಿವಲಿಂಗಸ್ವಾಮಿ ಹಲಗಲಿಮಠ    

ಹಾವೇರಿ: ಕೆರೆ ಅಭಿವೃದ್ಧಿ ಕಾಮಗಾರಿಗಳ ಹಣ ಸಂದಾಯ ಮಾಡಲು ₹2.20 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ, ಹಾವೇರಿಯ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಪ್ರಭಾರ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ ಶಿವಲಿಂಗಸ್ವಾಮಿ ಹಲಗಲಿಮಠ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಸವಣೂರಿನ ಹೊರಕೇರಿ ಓಣಿಯ ಗುತ್ತಿಗೆದಾರ ಸುರೇಶ ಕಳಸೂರು ಅವರಿಗೆ ಕೆರೆ ಅಭಿವೃದ್ಧಿ ಕಾಮಗಾರಿಗಳ ಹಣ ಸಂದಾಯಕ್ಕೆ ಬೇಕಾಗಿರುವ ಪ್ರಾಧಿಕಾರದ ಪತ್ರಗಳನ್ನು ನೀಡಲು ಶಿವಲಿಂಗಸ್ವಾಮಿ ಅವರು ಮುಂಗಡವಾಗಿ ₹1 ಲಕ್ಷ ಲಂಚ ಪಡೆದುಕೊಂಡಿದ್ದರು. ಉಳಿದ ₹1.20 ಲಕ್ಷ ಕೊಡುವಂತೆ ಬೇಡಿಕೆ ಇಟ್ಟು, ಖಾಲಿ ಚೆಕ್‌ ಅನ್ನು ಪಡೆದುಕೊಂಡಿದ್ದರು.

ಬಾಕಿ ಹಣ ಪಡೆದುಕೊಳ್ಳಲು ಗುತ್ತಿಗೆದಾರ ಸುರೇಶ ಅವರನ್ನು ಶುಕ್ರವಾರ ಧಾರವಾಡದ ಎಸ್‌ಡಿಎಂ ಆಸ್ಪತ್ರೆ ಬಳಿಗೆ ಕರೆದಿದ್ದರು. ಅಲ್ಲಿಂದ ಸುರೇಶ ಅವರನ್ನು ತಮ್ಮ ಕಾರಿನಲ್ಲಿ ಕರೆದೊಯ್ದ ಶಿವಲಿಂಗಸ್ವಾಮಿ, ಕಾರಿನಲ್ಲೇ ಲಂಚದ ಹಣ ಪಡೆದಿದ್ದರು. ನಂತರ ಧಾರವಾಡದ ವಿದ್ಯಾಗಿರಿಯಲ್ಲಿ ಸುರೇಶ ಅವರನ್ನು ಇಳಿಸಿ, ವಿನಾಯಕ ನಗರದ 4ನೇ ಕ್ರಾಸ್‌ನಲ್ಲಿರುವ ನವಲೂರಿನ ತಮ್ಮ ಮನೆಗೆ ಹೋಗುತ್ತಾರೆ.

ADVERTISEMENT

ಆರೋಪಿಯ ಬೆನ್ನು ಹತ್ತಿದ್ದ ಲೋಕಾಯುಕ್ತ ಪೊಲೀಸರ ತಂಡ ಶಿವಲಿಂಗಸ್ವಾಮಿ ಅವರ ಮನೆಗೆ ಶುಕ್ರವಾರ ರಾತ್ರಿ 9.30ರ ಸುಮಾರಿಗೆ ಹೋಗಿ, ಕಪಾಟಿನಲ್ಲಿಟ್ಟಿದ್ದ ಲಂಚದ ಹಣದ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಶಿವಲಿಂಗಸ್ವಾಮಿ ಒಳಗುತ್ತಿಗೆ ನೌಕರನಾಗಿದ್ದು, ಹಾವೇರಿ, ಧಾರವಾಡ, ಉತ್ತರ ಕನ್ನಡ ಜಿಲ್ಲೆಗಳ ಪ್ರಭಾರ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಬೇಲೂರು ಗ್ರಾಮದವರಾಗಿದ್ದಾರೆ.

ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಮುಷ್ತಾಕ್‌ ಅಹಮದ್‌ ಶೇಖ್‌ ಮತ್ತು ಮಂಜುನಾಥ ನಡುವಿನಮಠ ಅವರ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಕಚೇರಿ ಮತ್ತು ಮನೆಯಲ್ಲಿ ದಾಖಲೆಗಳ ಶೋಧ ಕಾರ್ಯ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.