ನಾಗರಾಜ ಸೂರ್ಯವಂಶಿ, ಕಿರಣ ಮುದಕಣ್ಣನವರ
ಹಾವೇರಿ: ವಂಶವೃಕ್ಷ ನೀಡಲು ಲಂಚ ಪಡೆದ ಆರೋಪದಡಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿಯ ಉಪ ತಹಶೀಲ್ದಾರ್ ನಾಗರಾಜ ಸೂರ್ಯವಂಶಿ ಹಾಗೂ ಕಂಪ್ಯೂಟರ್ ಆಪರೇಟರ್ ಕಿರಣ ಮುದಕಣ್ಣನವರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಹಾನಗಲ್ ತಾಲ್ಲೂಕಿನ ಯಳವಟ್ಟಿ ಗ್ರಾಮದ ಗಂಗಾಧರ ರಾಮಪ್ಪ ಕ್ಯಾತನಕೇರಿ ಎಂಬುವವರು ಲಂಚದ ಬಗ್ಗೆ ಲೋಕಾಯುಕ್ತ ಜಿಲ್ಲಾ ಪೊಲೀಸರಿಗೆ ದೂರು ನೀಡಿದ್ದರು. ಅದನ್ನು ದಾಖಲಿಸಿಕೊಂಡಿದ್ದ ಪೊಲೀಸರು, ಕಾರ್ಯಾಚರಣೆ ನಡೆಸಿ ಲಂಚದ ಹಣದ ಸಮೇತ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.
‘ದೂರುದಾರ ಗಂಗಾಧರ ಅವರ ಸಂಬಂಧಿ ದಯಾನಂದ ರುದ್ರಪ್ಪ ಯಲಿಗಾರ ಅವರು ತಮ್ಮ ವಂಶವೃಕ್ಷ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ್ದ ಉಪ ತಹಶೀಲ್ದಾರ್ ನಾಗರಾಜ ಹಾಗೂ ಕಂಪ್ಯೂಟರ್ ಆಪರೇಟರ್ (ಗುತ್ತಿಗೆ ಕೆಲಸ) ಕಿರಣ ಮುದಕಣ್ಣನವರ, ವಂಶವೃಕ್ಷ ನೀಡಲು ₹15 ಸಾವಿರ ಲಂಚಕ್ಕೆ ಬೇಡಿಕೆ ಇರಿಸಿದ್ದರು.’
‘ಇಬ್ಬರೂ ಆರೋಪಿಗಳು, ನಾಡಕಚೇರಿಯಲ್ಲಿಯೇ ದೂರುದಾರರಿಂದ ಗುರುವಾರ ₹2,000 ಲಂಚ ಪಡೆದಿದ್ದರು. ಇದೇ ಸಂದರ್ಭದಲ್ಲಿ ದಾಳಿ ಮಾಡಿ, ಹಣದ ಸಮೇತ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ಇಬ್ಬರನ್ನೂ ಬಂಧಿಸಿ ತನಿಖೆ ಮುಂದುವರಿಸಲಾಗಿದೆ’ ಎಂದು ಲೋಕಾಯುಕ್ತ ಪೊಲೀಸ್ ಡಿವೈಎಸ್ಪಿ ಮಧುಸೂದನ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.