ADVERTISEMENT

ಹಾನಗಲ್ | ಲಾರಿ ಪಲ್ಟಿ: ತಂಪು ಪಾನೀಯ ಬಾಟಲ್‌ಗಳು ದಾರಿಹೋಕರ ಪಾಲು

​ಪ್ರಜಾವಾಣಿ ವಾರ್ತೆ
Published 16 ಮೇ 2025, 14:47 IST
Last Updated 16 ಮೇ 2025, 14:47 IST
ಹಾನಗಲ್ ತಾಲ್ಲೂಕಿನ ಹಿರೂರ ಕ್ರಾಸ್‌ ಸಮೀಪ ಗುರುವಾರ ರಾತ್ರಿ ಲಾರಿ ಪಲ್ಟಿಯಾಗಿ ಬಿದ್ದಿರುವುದು
ಹಾನಗಲ್ ತಾಲ್ಲೂಕಿನ ಹಿರೂರ ಕ್ರಾಸ್‌ ಸಮೀಪ ಗುರುವಾರ ರಾತ್ರಿ ಲಾರಿ ಪಲ್ಟಿಯಾಗಿ ಬಿದ್ದಿರುವುದು   

ಹಾನಗಲ್: ತಾಲ್ಲೂಕಿನ ಹಿರೂರ ಕ್ರಾಸ್‌ ಸಮೀಪ ಹಾವೇರಿ–ಶಿರಸಿ ರಸ್ತೆಯಲ್ಲಿ ಗುರುವಾರ ತಡರಾತ್ರಿ ತಂಪು ಪಾನೀಯ ತುಂಬಿಕೊಂಡು ಹೊರಟಿದ್ದ ಲಾರಿ ಮಗುಚಿ ಬಿದ್ದಿದ್ದು, ಬೆಳಗಾಗುವಷ್ಟರಲ್ಲಿ ಲಾರಿಯಲ್ಲಿದ್ದ ಅರ್ಧಕ್ಕಿಂತ ಹೆಚ್ಚು ತಂಪು ಪಾನೀಯ ಬಾಟಲ್‌ಗಳು ದಾರಿಹೋಕರ ಪಾಲಾಗಿವೆ.

ಬೆಂಗಳೂರಿನ ಬಿಡದಿಯಿಂದ ಶಿರಸಿಗೆ ಪಾನೀಯ ಸಾಗಿಸುತ್ತಿದ್ದ ಲಾರಿಯಲ್ಲಿ ವಿವಿಧ ಕಂಪನಿಯ ತಂಪು ಪಾನೀಯ ಬಾಟಲ್‌, ಟೆಟ್ರಾಪ್ಯಾಕೆಟ್‌ ಇದ್ದವು. ರಾತ್ರಿ ಸುರಿದ ಮಳೆಯಿಂದ ರಸ್ತೆಯ ಬದಿಯಲ್ಲಿ ತೇವ ಆವರಿಸಿದ್ದ ಕಾರಣಕ್ಕಾಗಿ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಾರಿ ಚಾಲಕ ಅವಿನಾಶ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹಾನಗಲ್‌ಗೆ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು ಪೊಲೀಸ್‌ ಠಾಣೆಯನ್ನು ಸಂಪರ್ಕಿಸಿದ್ದಾರೆ. ಈ ನಡುವೆ, ರಸ್ತೆ ಬದಿಯಲ್ಲಿ ಬಿದ್ದಿದ್ದ ಲಾರಿಯಲ್ಲಿ ಪಾನೀಯ ನೋಡಿದ ಜನರು ಬಾಟಲಿಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಕೆಲವರು ತಮ್ಮ ವಾಹನದಲ್ಲಿ ಬಾಟಲಿಗಳನ್ನು ತುಂಬಿಕೊಂಡು ಹೋದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ADVERTISEMENT

ಶುಕ್ರವಾರ ಬೆಳಿಗ್ಗೆ ಸ್ಥಳಕ್ಕೆ ಬಂದ ಪೊಲೀಸರು ಲಾರಿ ಮತ್ತು ಉಳಿದ ಪಾನೀಯ ಬಾಟಲ್‌ಗಳ ರಕ್ಷಣೆಗೆ ಮುಂದಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.