
ಹಾವೇರಿ: ‘ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಕಾಳಮ್ಮ ನಗರದ ರಂಜಿತಾ ಬನ್ಸೊಡೆ ಅವರನ್ನು ಹತ್ಯೆ ಮಾಡಿರುವುದು ಖಂಡನೀಯ. ಕೃತ್ಯ ಎಸಗಿದ್ದ ಆರೋಪಿ ರಫೀಕ್‌ನ ಹಿಂದೆ ಲವ್ ಜಿಹಾದ್ ಜಾಲವಿದೆ’ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್– ಬಜರಂಗದಳದ ಪದಾಧಿಕಾರಿಗಳು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಎಂ.ಜಿ.ರಸ್ತೆಯ ಗಾಂಧಿ ವೃತ್ತದಲ್ಲಿ ಸೇರಿದ್ದ ಪ್ರತಿಭಟನಕಾರರು, ‘ರಂಜಿತಾ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ತನಿಖೆಗೆ ವಹಿಸಬೇಕು’ ಎಂದು ಆಗ್ರಹಿಸಿದರು.
‘ಬಡತನದ ನಡುವೆ ಬೆಳೆದಿದ್ದ ರಂಜಿತಾ, ಯಲ್ಲಾಪುರದ ರಾಮಾಪುರದ ಶಾಲೆಯಲ್ಲಿ ನೂರಾರು ಮಕ್ಕಳಿಗೆ ಬಿಸಿಯೂಟ ತಯಾರಿಸುವ ಕೆಲಸ ಮಾಡುತ್ತಿದ್ದರು. ಪರಿಶಿಷ್ಟ ಸಮುದಾಯದ ಮಹಿಳೆಯನ್ನು ಮುಸ್ಲಿಂ ಸಮುದಾಯದ ರಫೀಕ್ ಎಂಬಾತ ಕಗ್ಗೊಲೆ ಮಾಡಿರುವುದು ಖಂಡನೀಯ. ಕೃತ್ಯ ಎಸಗಿದ ನಂತರ, ಆರೋಪಿ ರಫೀಕ್ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರ ಹಿಂದೆ, ದೊಡ್ಡ ಜಾಲವೇ ಇರುವ ಅನುಮಾನವಿದೆ. ಸೂಕ್ತ ತನಿಖೆ ನಡೆಯಬೇಕು’ ಎಂದು ಒತ್ತಾಯಿಸಿದರು.
‘ಸಂಸಾರ ನಡೆಸಲು ರಂಜಿತಾ ಅವರು ಬಿಸಿಯೂಟ ತಯಾರಿ ಕೆಲಸ ಮಾಡುತ್ತಿದ್ದರು. ಅವರ ಹಿಂದೆ ಬಿದ್ದಿದ್ದ ಆರೋಪಿ ರಫೀಕ್, ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಅದಕ್ಕೆ ಒಪ್ಪದಿದ್ದಾಗ ಕೊಲೆ ಮಾಡಲು ಸಂಚು ರೂಪಿಸಿದ್ದ. ಜ. 3ರಂದು ರಾಮಾಪುರದ ಮನೆ ಮುಂಭಾಗದಲ್ಲಿ ಮಹಿಳೆಯನ್ನು ಅಡ್ಡಗಟ್ಟಿದ್ದ ಆರೋಪಿ, ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಹಿಂದೂ ಸಮಾಜದ ಆಕ್ರೋಶ ಕಂಡು ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದರು.
‘ಹುಬ್ಬಳ್ಳಿಯ ಕಾಲೇಜೊಂದರಲ್ಲಿ ನೇಹಾ ಹಿರೇಮಠ ಎಂಬುವವರನ್ನು ಮುಸ್ಲಿಂ ಯುವಕ ಫಯಾಜ್ ಎಂಬಾತ ಪ್ರೀತಿಸುವಂತೆ ಪೀಡಿಸಿ ಹಾಡಹಗಲೇ ಕೊಲೆ ಮಾಡಿದ್ದಾನೆ. ಗದಗಿನಲ್ಲೂ ಮಹಿಳೆ ಮೇಲೆ ಮುಸ್ಲಿಂ ವ್ಯಕ್ತಿ ಮಹಮ್ಮದ್ ಇಜಾದ್ ಎಂಬಾತ ಚಾಕುವಿನಿಂದ ಇರಿದಿದ್ದಾನೆ. ವಿಜಯಲಕ್ಷ್ಮಿ ಎಂಬುವವರ ಮೇಲೆ ಅತ್ಯಾಚಾರ ಎಸಗಿದ್ದ ಸದ್ದಾಂ ಎಂಬಾತ ಗರ್ಭಿಣಿ ಮಾಡಿ ಲವ್ ಜಿಹಾದ್ ಮೂಲಕ ಮತಾಂತರ ಮಾಡಲು ಹೊರಟಿದ್ದ. ಹಿಂದೂ ಮಹಿಳೆಯರು ಹಾಗೂ ಯುವತಿಯರ ಮೇಲೆ ಮುಸ್ಲಿಂ ಸಮುದಾಯದವರಿಂದ ಪದೇ ಪದೇ ಅಪರಾಧ ಕೃತ್ಯಗಳು ನಡೆಯುತ್ತಿವೆ. ಇಂಥ ಅಪರಾಧ ಕೃತ್ಯಗಳ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿದರು.
‘ರಂಜಿತಾ ಅವರಿಗೆ ಬಂದ ಸ್ಥಿತಿ ಬೇರೆ ಯಾವ ಹಿಂದೂ ಮಹಿಳೆಗೂ ಬರಬಾರದು. ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಮಹಿಳೆಯರನ್ನು ದಾರಿ ತಪ್ಪಿಸಲಾಗುತ್ತಿದೆ. ಯಲ್ಲಾಪುರ ಪ್ರಕರಣದಲ್ಲಿ ಆರೋಪಿ ರಫೀಕ್ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕು. ಅವನಿಗೆ ಪ್ರೋತ್ಸಾಹ ನೀಡಿದವರನ್ನೂ ಪತ್ತೆ ಮಾಡಿ ಶಿಕ್ಷಿಸಬೇಕು’ ಎಂದು ಒತ್ತಾಯಿಸಿದರು.
₹50 ಲಕ್ಷ ಪರಿಹಾರ ನೀಡಿ’
‘ಬಡತನದಲ್ಲೂ ರಂಜಿತಾ ಅವರು ಕೆಲಸ ಮಾಡಿ ಜೀವನ ಕಟ್ಟಿಕೊಂಡಿದ್ದಾರೆ. ಅವರ ಸಾವಿನಿಂದ ಕುಟುಂಬ ಆರ್ಥಿಕವಾಗಿ ಕುಗ್ಗಿದೆ. ಅವರ ಕುಟುಂಬಕ್ಕೆ ಸರ್ಕಾರ ₹ 50 ಲಕ್ಷ ಪರಿಹಾರ ನೀಡಬೇಕು’ ಎಂದು ವಿಶ್ವ ಹಿಂದೂ ಪರಿಷತ್– ಬಜರಂಗದಳದ ಪದಾಧಿಕಾರಿಗಳು ಆಗ್ರಹಿಸಿದರು. ‘ರಾಜ್ಯ ಸರ್ಕಾರ ಮುಸ್ಲಿಂ ಸಮುದಾಯದವರನ್ನು ಓಲೈಕೆ ಮಾಡುತ್ತಿರುವುದರಿಂದಲೇ ಇಂದು ಇಂಥ ಘಟನೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರಂಜಿತಾ ಪ್ರಕರಣವನ್ನು ಎನ್‌ಐಎಗೆ ಒಪ್ಪಿಸಿದರೆ ಸತ್ಯಾಂಶ ಹೊರಗೆ ಬರುತ್ತದೆ’ ಎಂದು ಒತ್ತಾಯಿಸಿದರು.