ರಟ್ಟೀಹಳ್ಳಿ: ಮಾಯಾದಂತ ಮಳೆ ಬಂತಣ್ಣ ಮದಗಾದ ಕೆರೆಗೆ ಎಂಬ ಜಾನಪದ ಗೀತೆಯ ಐತಿಹಾಸಿಕ ಹಿನ್ನಲೆಯುಳ್ಳ ಮದಗ ಮಾಸೂರು ಕೆರೆ ನಿರಂತರ ಮಳೆಯಿಂದಾಗಿ ತುಂಬಿ ನಿಸರ್ಗದ ಮಡಿಲಲ್ಲಿ ಪ್ರಕೃತಿ ಮಧ್ಯೆ ಗುಡ್ಡ-ಬೆಟ್ಟಗಳ ಮಧ್ಯೆ ಹಾದು ಭೋರ್ಗರೆಯುತ್ತಿರುವ ಜಲಪಾತ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ರಟ್ಟೀಹಳ್ಳಿ ತಾಲ್ಲೂಕು ಕೇಂದ್ರದಿಂದ ಕೇವಲ 8 ಕಿ.ಮೀ ದೂರದಲ್ಲಿರುವ ಮಾಸೂರು ಗ್ರಾಮ, ಮಾಸೂರು-ಶಿಕಾರಿಪುರ ಮುಖ್ಯರಸ್ತೆ ಮಾರ್ಗದಿಂದ ಒಳಗೆ 2 ಕಿ.ಮೀ. ಸಾಗಿದರೆ ಮದಗ– ಮಾಸೂರು ಕೆರೆ ಹಾಗೂ ಇಲ್ಲಿರುವ ಜಲಪಾತ ವೀಕ್ಷಣೆ ಮಾಡಬಹುದಾಗಿದೆ. ತಾಲ್ಲೂಕಿನಾದ್ಯಂತ ಕಳೆದ 4-5 ದಿನಗಳಿಂದ ಮಳೆ ಸುರಿಯುತ್ತಿದ್ದು ಮದಗ ಮಾಸೂರು ಕೆರೆ ಭರ್ತಿಯಾಗಿ ಕೆರೆ ಕೋಡಿ ಒಡೆದು ನಂತರ ಬೃಹತ್ ಕಲ್ಲು ಬಂಡೆಗಳ ಮಧ್ಯ ಕೆರೆ ನೀರು ಭೋರ್ಗರೆಯುತ್ತ ಎತ್ತರದ ಬಂಡೆಯಿಂದ ಜಲಪಾತ ಸೃಷ್ಟಿಯಾಗಿರುವುದು ಪ್ರವಾಸಿಗರಿಗೆ ರೋಮಾಂಚನ ಉಂಟಾಗುತ್ತದೆ.
ಮುಂದೆ ಜಲಪಾತದಿಂದ ನೀರು ಕುಮಧ್ವತಿ ನದಿ ಮೂಲಕ ಹಾದು ಮಾಸೂರು, ರಾಮತೀರ್ಥ, ಚಿಕ್ಕಮೊರಬ, ರಟ್ಟೀಹಳ‍್ಳಿ ಮೂಲಕ ಸಾಗಿ ರಾಣೇಬೆನ್ನೂರ ತಾಲ್ಲೂಕಿನ ಹಳ‍್ಳಿಗಳಿಗೆ ಸಾಗುತ್ತದೆ. ಪ್ರತಿ ವರ್ಷ ಜೂನ್, ಜುಲೈ, ಅಗಸ್ಟ, ಸೆಪ್ಟೆಂಬರ್ ತಿಂಗಳುಗಳ ಮಳೆಗಾಲದಲ್ಲಿ ಇಲ್ಲಿ ಜಲಪಾತ ಸೃಷ್ಟಿಗೊಂಡು ಪ್ರವಾಸಿಗರ ಅತ್ಯಂತ ನೆಚ್ಚಿನ ತಾಣವಾಗಿದೆ.
ಮದಗ–ಮಾಸೂರು ಕೆರೆ, ಮತ್ತು ಜಲಪಾತ ರಾಜ್ಯದ ಸುಂದರ ಪ್ರವಾಸಿ ತಾಣವಾಗಿದೆ. ಮಳೆಗಾಲದಲ್ಲಿ ಇಲ್ಲಿಗೆ ರಾಜ್ಯದಿಂದ ಅಲ್ಲದೇ ಹೊರರಾಜ್ಯದಿಂದ ಪ್ರಕೃತಿಯ ಸೌಂದರ್ಯ ಸವಿಯಲು ಪ್ರವಾಸಿಗರ ಹಿಂಡೆ ಆಗಮಿಸುತ್ತದೆ.
‘ಸರ್ವಜ್ಞನ ನಾಡು ಎಂಬ ಹೆಗ್ಗಳಿಕೆಗೆ ಪಾತ್ರವಾದ ಮಾಸೂರಿಗೆ ಹೆಚ್ಚಿನ ಅನುದಾನ ನೀಡಿ ಮದಗ– ಮಾಸೂರುಕೆರೆಯನ್ನು ಪ್ರವಾಸಿತಾಣವನ್ನಾಗಿಸಬೇಕು’ ಈ ಗ್ರಾಮದ ಜನರು.
ನಿರ್ಸಗದ ಮಡಿಲಲ್ಲಿ ಧುಮುಕ್ಕುತ್ತಿರುವ ಜಲಪಾತ ವೀಕ್ಷಣೆಗೆ ನಿತ್ಯ ಸಾವಿರಾರು ಪ್ರವಾಸಿಗರು ಸುಂದರ ಪ್ರವಾಸಿ ತಾಣ
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯವರು ಇಲ್ಲಿ ಬರುವ ಪ್ರವಾಸಿಗರಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬೇಕುಮಲ್ಲೇಶಣ್ಣ ಗ್ರಾಮ ನಿವಾಸಿ
ಕೆರೆಗೆ ಹೋಗುವುದು ಹೇಗೆ?
ಮಾಸೂರು-ಶಿಕಾರಿಪುರ ರಸ್ತೆಯ ಮುಖ್ಯರಸ್ತೆಯಿಂದ 2 ಕಿ.ಮೀ. ಒಳಗೆ ಕಾರು ಬೈಕ್ ಅಥವಾ ನಡೆದುಕೊಂಡೇ ಸಾಗಬೇಕು. ದಟ್ಟ ಅರಣ್ಯದ ಮಧ್ಯೆ ದೊಡ್ಡದಾದ ಬೃಹತ್ ಆಕಾರದ ಮದಗದ ಕೆರೆ ನೋಡಲು ಬಹಳಷ್ಟು ಆಕರ್ಷಣೀಯವಾಗಿದೆ. ಕೆರೆಯ ದಂಡೆಗೆ ಹೊಂದಿಕೊಂಡು ಮದಗದ ಕೆಂಚಮ್ಮನ ದೇವಸ್ಥಾನವಿದೆ. ದೇವಸ್ಥಾನದ ಸುತ್ತಲೂ ಮಕ್ಕಳಿಗೆ ಉದ್ಯಾನ ನಿರ್ಮಾಣ ಮಾಡಲಾಗಿದೆ. ಕೆರೆಯಿಂದ ಮುಂದೆ ಸಾಗಿದಲ್ಲಿ ಜಲಪಾತ ನೋಡಲು ಹೆಚ್ಚು ಆಕರ್ಷಣೆಯವಾಗಿದೆ. ಜಲಪಾತದ ಸ್ಥಳದವರೆಗೂ ಖಾಸಗಿ ವಾಹನದಲ್ಲಿ ಹೋಗಿಬರಲು ಸಾಕಷ್ಟು ಸ್ಥಳಾವಕಾಶವಿದೆ. ಸುತ್ತಲೂ ಬೆಟ್ಟ-ಗುಡ್ಡಗಳಿದ್ದು ಪ್ರಕೃತಿಯ ರಮ್ಯತೆಯನ್ನು ಮೈತುಂಬಿಕೊಳ್ಳಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.