ADVERTISEMENT

ವಿದೇಶದಲ್ಲೂ ಮಾದರ ಚನ್ನಯ್ಯ ಕೈಗಾರಿಕೆ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳ ಛಾಪು!

ಬಸವರಾಜ ಹಲಕುರ್ಕಿ
Published 6 ನವೆಂಬರ್ 2025, 2:45 IST
Last Updated 6 ನವೆಂಬರ್ 2025, 2:45 IST

ನರಗುಂದ ತಾಲ್ಲೂಕಿನ ಶಿರೋಳದ ಮಾದರ ಚನ್ನಯ್ಯ ಕೈಗಾರಿಕೆ ತರಬೇತಿ ಸಂಸ್ಥೆ.

ನರಗುಂದ ತಾಲ್ಲೂಕಿನ ಶಿರೋಳದ ಮಾದರ ಚನ್ನಯ್ಯ ಕೈಗಾರಿಕೆ ತರಬೇತಿ ಸಂಸ್ಥೆ.

ನರಗುಂದ: ನಾಲ್ಕು ದಶಕಗಳಿಂದ ಈ ಭಾಗದ ಯುವಕರಿಗೆ ಕೈಗಾರಿಕಾ ಕೌಶಲದ ತರಬೇತಿ ನೀಡುತ್ತಿರುವ ತಾಲ್ಲೂಕಿನ ಶಿರೋಳದ ತೋಂಟದಾರ್ಯ ವಿದ್ಯಾಪೀಠದ ಮಾದರ ಚನ್ನಯ್ಯ ಕೈಗಾರಿಕೆ ತರಬೇತಿ ಸಂಸ್ಥೆಯು (ಐಟಿಐ) ಕರ್ನಾಟಕ ಸರ್ಕಾರ ನೀಡುವ ‘ಕೌಶಲ್ಯ ಕರ್ನಾಟಕ ಪ್ರಶಸ್ತಿ’ಗೆ ಭಾಜನವಾಗಿದೆ.

ADVERTISEMENT

ಈ ಭಾಗದ ರೈತರು ಹಾಗೂ ಕಾರ್ಮಿಕರ ಮಕ್ಕಳ ಉದ್ಯೋಗದ ದೃಷ್ಟಿಯಿಂದ 1984ರಲ್ಲಿ ಗದುಗಿನ ಲಿಂ. ಸಿದ್ದಲಿಂಗ ಶ್ರೀಗಳು ಮತ್ತು ಶಿರೋಳದ ಲಿಂ. ಗುರುಬಸವ ಶ್ರೀಗಳು ಯೋಚನೆ ಮಾಡಿ, ತೋಂಟದಾರ್ಯ ವಿದ್ಯಾಪೀಠದಿಂದ ಮಾದರ ಚನ್ನಯ ಕೈಗಾರಿಕೆ ತರಬೇತಿ ಸಂಸ್ಥೆ ಪ್ರಾರಂಭಿಸಿದರು. ಇದಕ್ಕೆ ಆರಂಭದಲ್ಲಿ ನೀಲಕಂಠ ಗಣಾಚಾರಿಯವರು ಧನಸಹಾಯ ನೀಡುವ ಮೂಲಕ ಇದೊಂದು ಹೆಮ್ಮರವಾಗಿ ಬೆಳೆಯಲಿಕ್ಕೆ ಬುನಾದಿ ಹಾಕಿದರು.

ಆರಂಭದಲ್ಲಿ ಕೇವಲ 19 ವಿದ್ಯಾರ್ಥಿಗಳಿಂದ (ಎಲೆಕ್ಟ್ರಿಶಿಯನ್ ವಿಭಾಗ) ಆರಂಭಗೊಂಡ ಸಂಸ್ಥೆ ಇಂದು ಡೀಸೆಲ್‌ ಮೆಕ್ಯಾನಿಕ್, ಫಿಟ್ಟರ್ ವಿಭಾಗ ಸೇರಿ ಒಟ್ಟು ನಾಲ್ಕು ತರಬೇತಿ ವಿಭಾಗಗಳು ಹಾಗೂ 164 ವಿದ್ಯಾರ್ಥಿಗಳನ್ನು ಹೊಂದಿದೆ. ವಿದ್ಯಾರ್ಥಿಗಳಿಗೆ ಗುಣಾತ್ಮಕ ತರಬೇತಿ ನೀಡುವ ಮೂಲಕ ಉತ್ತರ ಕರ್ನಾಟಕದ ಅನುದಾನಿತ ಏಕೈಕ ಕೈಗಾರಿಕಾ ತರಬೇತಿ ಸಂಸ್ಥೆಯಾಗಿದೆ. ಇಲ್ಲಿ ಪ್ರತಿ ವರ್ಷ ಉದ್ಯೋಗ ಮೇಳ ಕೂಡ ನಡೆಯುತ್ತದೆ. ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಕಂಪನಿಗಳು ಭಾಗವಹಿಸಿ ಇಲ್ಲಿನ ವಿದ್ಯಾರ್ಥಿಗಳನ್ನು ತಮ್ಮ ಕಂಪನಿಗೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಈ ಕೈಗಾರಿಕಾ ತರಬೇತಿ ಸಂಸ್ಥೆಯು ಸ್ಥಳೀಯ ಕುಶಲ ಯುವಕರಿಗೆ ಉದ್ಯೋಗ ನೀಡುವ ಕಾಮಧೇನುವಾಗಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಪ್ರತಿ ವರ್ಷ ರಾಜ್ಯ ಸರ್ಕಾರ ಕೌಶಲ್ಯಾಭಿವೃದ್ದಿ ಇಲಾಖೆ ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಅವುಗಳ ಗುಣಮಟ್ಟ ಹಾಗೂ ಉದ್ಯೋಗ ಮೇಳದ ಆಧಾರದ ಮೇಲೆ ಅಂಕಗಳನ್ನು ನೀಡುತ್ತದೆ. ಅದರಲ್ಲಿ 10 ಅಂಕಗಳಿಗೆ 8.7 ಅಂಕ ಪಡೆದು ಅನುದಾನಿತ ಮಾದರ ಚನ್ನಯ್ಯ ಐಟಿಐ ಪ್ರಥಮ ಸ್ಥಾನ ಪಡೆದು ಕೌಶಲ ಕರ್ನಾಟಕ ಪ್ರಶಸ್ತಿಗೆ ಭಾಜನವಾಗಿದೆ.

ಇಲ್ಲಿ ತರಬೇತಿ ಪಡೆದು ಶಿಶುಕ್ಷು ತರಬೇತಿ ಮುಗಿಸಿದ ವಿದ್ಯಾರ್ಥಿಗಳು ವಿದೇಶದಲ್ಲಿ ನೌಕರಿ ಗಿಟ್ಟಿಸಿದ್ದಾರೆ. ಅದರಲ್ಲಿ ಕೃಷ್ಣರಡ್ಡಿ ಕಿರೇಸೂರ ಎಂಬ ಯುವಕ ಕುವೈತ್ ದೇಶದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನೊಬ್ಬ ಯುವಕ ಶಿವಾನಂದ ಅಂಕಲಿಮಠ ಬೆಂಗಳೂರಿನ ಇಸ್ರೊದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನೂ ಹಲವರು ಕೈಗಾ ವಿದ್ಯುತ್ ಸ್ಥಾವರದಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವುದು ಈ ಸಂಸ್ಥೆಗೆ ಗರಿ ಮೂಡಿಸಿದೆ.

ಸಂಸ್ಥೆಗೆ ಗರಿ; ಸ್ವಾಮೀಜಿ ಹರ್ಷ

‘ತೋಂಟದಾರ್ಯ ವಿದ್ಯಾಪೀಠದಿಂದ ಆರಂಭಗೊಂಡ ಮಾದರ ಚನ್ನಯ ಕೈಗಾರಿಕೆ ತರಬೇತಿ ಸಂಸ್ಥೆ ಈ ಉನ್ನತ ಹಂತಕ್ಕೆ ತಲುಪಲು ಗದುಗಿನ ಲಿಂ. ಸಿದ್ದಲಿಂಗ ಶ್ರೀಗಳು ಮತ್ತು ಶಿರೋಳದ ಲಿಂ. ಗುರುಬಸವ ಶ್ರೀಗಳ ಸೇವೆ ಅಪಾರ’ ಎಂದು ಶಿರೋಳ ತೋಂಟದಾರ್ಯ ವಿದ್ಯಾಪೀಠದ ಉಪಾಧ್ಯಕ್ಷರಾದ ಶಾಂತಲಿಂಗ ಶ್ರೀಗಳು ತಿಳಿಸಿದ್ದಾರೆ.

‘ಇಲ್ಲಿನ ಸಿಬ್ಬಂದಿ ಹಗಲಿರಳು ಶ್ರಮಿಸಿದ್ದರಿಂದ ಕೌಶಲ ಕರ್ನಾಟಕ ಪ್ರಶಸ್ತಿ ಒಲಿದು ಬಂದಿದೆ. ಇದು ನಮ್ಮ ಸಂಸ್ಥೆಗೆ ಗರಿ ಮೂಡಿಸಿ, ಹರ್ಷ ತಂದಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.