
ಹಾನಗಲ್ ತಹಶೀಲ್ದಾರ್ ಕಚೇರಿ ಮುಂದೆ ಬುಧವಾರ ರೈತ ಸಂಘದಿಂದ ಪ್ರತಿಭಟನೆ ನಡೆಸಿ ಗೊವಿನಜೋಳ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಲಾಯಿತು.
ಹಾನಗಲ್: ಗೋವಿನಜೋಳ ಬೆಳೆಗೆ ಬೆಲೆ ನಿಗದಿ ಮತ್ತು ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ಬುಧವಾರ ರೈತ ಸಂಘದಿಂದ ತಹಶೀಲ್ದಾರ್ ರೇಣುಕಾ.ಎಸ್ ಅವರಿಗೆ ಮನವಿ ಸಲ್ಲಿಸಲಾಯಿತು.
ಸತತ ಮಳೆಯಿಂದ ಬೆಳೆಗಳು ಹಾನಿಯಾಗಿ ರೈತರ ಕೈಗೆ ಸಿಗದಂತಾಗಿವೆ. ಸಾಲ ಮಾಡಿ ರೈತರು ಕಂಗಾಲಾಗಿದ್ದಾರೆ. ಅಲ್ಪಸ್ವಲ್ಪ ಬೆಳೆದ ಗೋವಿಜೋಳ ಬೆಳೆಗೆ ಸದ್ಯ ಕ್ವಿಂಟಲ್‌ಗೆ ₹ 1500 ರಿಂದ ₹ 1800 ತನಕ ದರ ಇದೆ. ಕಳೆದ ವರ್ಷ ₹ 2800 ತನಕ ಬೆಲೆ ಸಿಕ್ಕಿತ್ತು. ಈ ವರ್ಷ ರೈತರು ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದೇ ಚಿಂತಾಜಕ ಸ್ಥಿತಿಯಲ್ಲಿದ್ದಾರೆ.
ಹೀಗಾಗಿ ರೈತರ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲ್ಲೂಕಿನಲ್ಲಿ ಖರೀದಿ ಕೇಂದ್ರ ತೆರೆಯಬೇಕು. ಎಂಎಸ್‌ಪಿ ದರ ₹ 2400 ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹಧನ ₹ 600 ಸೇರಿಸಿ ಒಟ್ಟು ₹3 ಸಾವಿರ ಪ್ರತಿ ಕ್ವಿಂಟಲ್‌ಗೆ ದರ ನಿಗದಿ ಮಾಡಿ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಲಾಗಿದೆ.
ಈ ವೇಳೆ ಮಾತನಾಡಿದ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ, ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಬೆಳಗಾವಿ ಮಾದರಿಯಲ್ಲಿ ಪ್ರತಿಭಟನೆಯ ಹಾದಿ ಹಿಡಿಯಬೇಕಾಗಿದೆ. ನ.24ರ ಒಳಗಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ, ಹಾವೇರಿಯಲ್ಲಿ ಹೆದ್ದಾರಿ ತಡೆಗೆ ಮುಂದಾಗುತ್ತೇವೆ ಎಂದರು.
ಗೌರವಾಧ್ಯಕ್ಷ ಮಾಲತೇಶ ಪರಪ್ಪನವರ, ಜಿಲ್ಲಾ ಘಟಕದ ಉಪಾಧ್ಯಕ್ಷ ಅಡಿವೆಪ್ಪ ಆದಲಕಟ್ಟಿ, ಪ್ರಮುಖರಾದ ಮಹೇಶ ವಿರುಪಣ್ಣನವರ, ಶ್ರೀಕಾಂತ ದುಂಡಣ್ಣನವರ, ರುದ್ರಪ್ಪ ಹಣ್ಣಿ, ವಾಸುದೇವ ಕಮಾಟಿ, ರಾಜೀವ ದಾನಪ್ಪನವರ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.