ADVERTISEMENT

ಹಾವೇರಿ: ಮೆಕ್ಕೆಜೋಳ ಬೆಲೆ ಕುಸಿತ– ₹3,000 MSP ನೀಡದಿದ್ದರೆ ಅಹೋರಾತ್ರಿ ಧರಣಿ

ಮೆಕ್ಕೆಜೋಳ ಬೆಲೆ ಕುಸಿದ: ಕಂಗಾಲಾದ ರೈತರಿಂದ ಮನವಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 2:56 IST
Last Updated 18 ನವೆಂಬರ್ 2025, 2:56 IST
<div class="paragraphs"><p>ಮೆಕ್ಕೆಜೋಳದೊಂದಿಗೆ ರೈತರು</p></div>

ಮೆಕ್ಕೆಜೋಳದೊಂದಿಗೆ ರೈತರು

   

ಹಾವೇರಿ: ‘ಜಿಲ್ಲೆಯಾದ್ಯಂತ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು. ಪ್ರತಿ ಕ್ವಿಂಟಲ್‌ಗೆ ₹ 3,000 ಬೆಂಬಲ ಬೆಲೆ ನೀಡಬೇಕು. ಇಲ್ಲದಿದ್ದರೆ, ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಾಗುವುದು’ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

ಇಲ್ಲಿಯ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿ ಹಾಗೂ ರಾಜ್ಯ ಸರ್ಕಾರಕ್ಕೆ ಸೋಮವಾರ ಮನವಿ ಸಲ್ಲಿಸಿದ ರೈತರು, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು.

ADVERTISEMENT

‘ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ’ ತಾಲ್ಲೂಕು ಘಟಕದ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ.

‘ಪ್ರಸಕ್ತ ಮುಂಗಾರಿನಲ್ಲಿ ಬೆಳೆಗಳು ಹಾಳಾಗಿವೆ. ಹಿಂಗಾರು ಹಂಗಾಮಿನಲ್ಲೂ ಬೆಳೆಗಳು ಮೊಳಕೆಯೊಡೆಯದೇ ಹಾನಿಯ ಭಯ ಶುರುವಾಗಿದೆ. ಇದರ ನಡುವೆಯೇ ಅಲ್ಪಸ್ವಲ್ಪ ಕೈಗೆ ಸಿಕ್ಕ ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ಸಿಗುತ್ತಿಲ್ಲ. ಬೀಜ, ಗೊಬ್ಬರ, ಯಂತ್ರೋಪಕರಣ ಸೇರಿದಂತೆ ಕೃಷಿ ಕೆಲಸಕ್ಕೆ ಮಾಡಿದ ಸಾಲವೂ ಹೆಚ್ಚಾಗಿದೆ. ಆದರೆ, ಮೆಕ್ಕೆಜೋಳಕ್ಕೆ ಮಾರುಕಟ್ಟೆಯಲ್ಲಿ ₹1,600ರಿಂದ ₹1,700- ದರವಿದೆ’ ಎಂದು ರೈತರು ಅಳಲು ತೋಡಿಕೊಂಡರು.

‘ಕಳೆದ ವರ್ಷ ಪ್ರತಿ ಕ್ವಿಂಟಲ್ ಮೆಕ್ಕೆಜೋಳಕ್ಕೆ ₹ 2,400ರಿಂದ ₹2,800 ಬೆಲೆ ಸಿಕ್ಕಿತ್ತು. ಆದರೆ, ಈ ವರ್ಷ ಬೆಲೆ ತೀರಾ ಕುಸಿದಿದೆ. ಸಾಲ ತೀರಿಸಲಾಗದೇ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥ ಸಮಯದಲ್ಲಿ ಸರ್ಕಾರವು ಪ್ರತಿ ತಾಲ್ಲೂಕಿನಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಂ.ಎಸ್.ಪಿ ದರ ₹2,400 ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹ ಧನ ₹600 ಸೇರಿಸಿ ₹3,000 (ಕ್ವಿಂಟಲ್‌ಗೆ) ದರ ನಿಗದಿಪಡಿಸಬೇಕು’ ಎಂದು ರೈತರು ಕೋರಿದರು.

‘ಜಿಲ್ಲೆಯ ಎಲ್ಲ ತಾಲ್ಲೂಕಿನ ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ರೈತರ ಬಗ್ಗೆ ಕಿಂಚಿತ್ತು ಕಾಳಜಿ ತೋರುತ್ತಿಲ್ಲ. ಬರ ಪರಿಹಾರ, ಗೋವಿನ ಜೋಳ ದರ ನಿಗದಿ, ಖರೀದಿ ಕೇಂದ್ರ, ರೈತಪರ ಚಿಂತನೆಗಳನ್ನು ಜನಪ್ರತಿನಿಧಿಗಳು ಮಾಡುತ್ತಿಲ್ಲ. ನಮ್ಮ ಬೇಡಿಕೆಗಳನ್ನು ನ. 24ರೊಳಗಾಗಿ ಈಡೇರಿಸಬೇಕು. ಬಗೆಹರಿಸದಿದ್ದರೆ ಅನಿವಾರ್ಯವಾಗಿ ರಸ್ತೆಯಲ್ಲಿ ವಾಹನ ತಡೆ, ಹೆದ್ದಾರಿಗಳಲ್ಲಿ ವಾಹನ ಬಂದ್‌ನಂಥ ಗಂಭೀರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದರು.

ದಿಳ್ಳೆಪ್ಪ ಮಣ್ಣೂರು, ಶಿವಯೋಗಿ ಹೊಸಗೌಡ್ರ, ರಾಜು ತರ್ಲಗಟ್ಟ., ಈರಣ್ಣ ಚಕ್ರಸಾಲಿ, ಹರ್ಷ ಕಡೇಮನಿ, ಹರೀಶ ಪಾಟೀಲ, ಶಿವನಗೌಡ ಕರೇಗೌಡ್ರ, ಬೀರಪ್ಪ ಮನ್ನಂಗಿ, ಪುಟ್ಟಪ್ಪ ಕೂರಗುಂದ, ಯಲ್ಲಪ್ಪ ಮಲ್ಲೂರು ಇದ್ದರು.

‘ಹಾವೇರಿ ಜಿಲ್ಲೆಯಾದ್ಯಂತ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕು. ಕ್ವಿಂಟಲ್‌ಗೆ ₹ 3,000 ಬೆಂಬಲ ಬೆಲೆ ನೀಡಬೇಕು’ ಎಂದು ಆಗ್ರಹಿತಿ ರೈತರು ತಹಶೀಲ್ದಾರ್ ಕಚೇರಿ ಅಧಿಕಾರಿಗಳಿಗೆ ಸಸೋಮವಾರ ಮನವಿ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.