ADVERTISEMENT

ಮೆಕ್ಕೆಜೋಳಕ್ಕೆ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ: ₹2,150 ದರ ನಿಗದಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 7:50 IST
Last Updated 9 ಜನವರಿ 2026, 7:50 IST
ರಾಣೆಬೆನ್ನೂರು ತಾಲ್ಲೂಕಿನ ಮುಷ್ಟೂರು ಗ್ರಾಮದಲ್ಲಿ ರೈತರೊಬ್ಬರು ಮೆಕ್ಕೆಜೋಳ ಕಟಾವು ಮಾಡಿ, ಸೂಕ್ತ ಬೆಲೆ ಸಿಕ್ಕಾಗ ಮಾರಬಹುದೆಂದು ತೆನೆಗಳನ್ನು ರಾಶಿ ಮಾಡಿಟ್ಟಿರುವುದು
ರಾಣೆಬೆನ್ನೂರು ತಾಲ್ಲೂಕಿನ ಮುಷ್ಟೂರು ಗ್ರಾಮದಲ್ಲಿ ರೈತರೊಬ್ಬರು ಮೆಕ್ಕೆಜೋಳ ಕಟಾವು ಮಾಡಿ, ಸೂಕ್ತ ಬೆಲೆ ಸಿಕ್ಕಾಗ ಮಾರಬಹುದೆಂದು ತೆನೆಗಳನ್ನು ರಾಶಿ ಮಾಡಿಟ್ಟಿರುವುದು   

ಹಾವೇರಿ: ‘ರೈತರು ಬೆಳೆದಿರುವ ಮೆಕ್ಕೆಜೋಳ ಖರೀದಿಸುವುದಕ್ಕಾಗಿ ರಾಜ್ಯ ಸರ್ಕಾರವು ಎಂಐಎಸ್ (ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ) ಯೋಜನೆಯಡಿ ದರ ನಿಗದಿ ಮಾಡಿದೆ. ಈ ಯೋಜನೆಯಡಿ ಮೆಕ್ಕೆಜೋಳ ಖರೀದಿಸಲು ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳು ಸೇರಿದಂತೆ 9 ಕಡೆಗಳಲ್ಲಿ ಕೇಂದ್ರ ಆರಂಭಿಸಬೇಕು’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ‘ಜಿಲ್ಲಾ ಕಾರ್ಯಪಡೆ’ ಸಭೆಯಲ್ಲಿ ಮಾತನಾಡಿದ ಅವರು, ‘ಎಂಐಎಸ್ ಯೋಜನೆಯಡಿ ಸರ್ಕಾರದ ಮಾರ್ಗಸೂಚಿಯಂತೆ ಮೆಕ್ಕೆಜೋಳ ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಯೋಜನೆ ಅನುಷ್ಠಾನದಲ್ಲಿ ಯಾವುದೇ ಲೋಪದೋಷವಾಗದಂತೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು’ ಎಂದರು.

‘ಹಾವೇರಿ, ರಾಣೆಬೆನ್ನೂರು (ಎಪಿಎಂಸಿ ಮೆಗಾ ಮಾರುಕಟ್ಟೆ ಹಾಗೂ ಮುಖ್ಯ ಮಾರುಕಟ್ಟೆ), ಹಿರೇಕೆರೂರು, ರಟ್ಟೀಹಳ್ಳಿ ತಾಲ್ಲೂಕಿನ ಮಾಸೂರು, ಶಿಗ್ಗಾವಿ, ಸವಣೂರು, ಹಾನಗಲ್ ಹಾಗೂ ಬ್ಯಾಡಗಿ ತಾಲ್ಲೂಕಿನ ಚಿಕ್ಕಬಾಸೂರ ಎಪಿಎಂಸಿ ಯಾರ್ಡ್‌ಗಳಲ್ಲಿ ಕೇಂದ್ರ ಆರಂಭಿಸಬೇಕು’ ಎಂದು ಹೇಳಿದರು.

ADVERTISEMENT

‘ಎಂಐಎಸ್ ಅಡಿ ಪ್ರತಿ ಕ್ವಿಂಟಲ್‌ಗೆ ₹2,150 ನಿಗದಿಪಡಿಸಲಾಗಿದೆ. ಮಾರುಕಟ್ಟೆಯಲ್ಲಿ ರೈತರು ಮೆಕ್ಕೆಜೋಳವನ್ನು ಪ್ರತಿ ಕ್ವಿಂಟಲ್‌ಗೆ ₹1,900 ಅಥವಾ ಅದಕ್ಕಿಂತ ಕಡಿಮೆ ದರಕ್ಕೆ ಮಾರಿದರೆ, ಸರ್ಕಾರದಿಂದ ಪ್ರತಿ ಕ್ವಿಂಟಲ್‌ಗೆ ಗರಿಷ್ಠ ₹250 ಪಾವತಿಸಲಾಗುವುದು. ₹1,950 ದರಕ್ಕೆ ಮಾರಾಟವಾದರೆ ₹ 200, ₹ 2,000 ದರದಲ್ಲಿ ಮಾರಾಟವಾದರೆ ₹150 ಹಾಗೂ ₹2,100ಕ್ಕೆ ಮಾರಾಟವಾದರೆ ₹50 ನೀಡಲಾಗುವುದು. ಮಾರುಕಟ್ಟೆ ದರ ಪ್ರತಿ ಕ್ವಿಂಟಲ್‌ಗೆ ₹2,150 ಮೀರಿದರೆ, ಎಂಐಎಸ್ ಅನ್ವಯ ಆಗುವುದಿಲ್ಲ’ ಎಂದು ತಿಳಿಸಿದರು.

‘ಈ ಯೋಜನೆಯಡಿ ಒಬ್ಬರ ರೈತರಿಂದ ಪ್ರತಿ ಎಕರೆಗೆ 12 ಕ್ವಿಂಟಲ್‌ನಂತೆ ಗರಿಷ್ಠ 50 ಕ್ವಿಂಟಲ್ ಮೆಕ್ಕೆಜೋಳ ಖರೀದಿ ಮಾತ್ರ ಅವಕಾಶವಿದೆ’ ಎಂದರು.

ಬ್ಯಾಂಕ್‌ ಖಾತೆಗೆ ಹಣ ಜಮೆ: ‘ರೈತರಿಂದ ಖರೀದಿಸಿದ ಮೆಕ್ಕೆಜೋಳದ ಎಂಐಎಸ್‌ ಮೊತ್ತವನ್ನು, ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಯಾದ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಜಮೆ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಕೃಷಿ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರುಗಳ ವ್ಯವಹಾರಗಳ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ಇದ್ದರು.

‘12.50 ಮೆಟ್ರಿಕ್ ಟನ್ ಮೆಕ್ಕೆಜೋಳ’

‘ಜಿಲ್ಲೆಯ 258167 ಹೆಕ್ಟೇರ್ ಪ್ರದೇಶದಲ್ಲಿ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಮಾಹಿತಿ ನೀಡಿದರು. ಸಭೆಯಲ್ಲಿ ಮಾತನಾಡಿದ ಅವರು ‘ಸುಮಾರು 12.50 ಮೆಟ್ರಿಕ್ ಟನ್ ಮೆಕ್ಕೆಜೋಳದ ಉತ್ಪನ್ನ ಬರುವ ಸಾಧ್ಯತೆ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.