
ರಾಣೆಬೆನ್ನೂರು: ರೈತರು ಬೆಳೆದ ಮೆಕ್ಕೆಜೋಳಕ್ಕೆ ಕನಿಷ್ಠ ₹ 3,000 ಬೆಂಬಲ ಬೆಲೆ ಘೋಷಣೆ ಮಾಡಿ ಕೂಡಲೇ ಖರೀದಿ ಕೇಂದ್ರ ಆರಂಭಿಸಬೇಕೆಂದು ಒತ್ತಾಯಿಸಿ ತಾಲ್ಲೂಕಿನ ಹುಲಿಹಳ್ಳಿ- ಕುನಬೇವು ಬಳಿ ಇರುವ ಎಪಿಎಂಸಿ ಮೆಗಾ ಮಾರುಟ್ಟೆ ಎದುರು ಜಿಲ್ಲಾ ರೈತ ಸಂಘಟನೆಗಳ ಒಕ್ಕೂಟದಿಂದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಕೆಲ ಕಾಲ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ‘ಇಲ್ಲಿನ ಎಪಿಎಂಸಿ ಮೆಗಾ ಮಾರುಕಟ್ಟೆಯಲ್ಲಿ ಮೆಕ್ಕೆಜೋಳಕ್ಕೆ ಕ್ಷಿಂಟಲ್‌ಗೆ ಇ–ಟೆಂಡರ್ ಮೂಲಕ ಕ್ವಿಂಟಲ್‌ಗೆ ₹ 1,700ರಿಂದ ₹1,950ಕ್ಕೆ ಖರೀದಿ ಮಾಡುತ್ತಿದ್ದಾರೆ. ಇದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ’ ಎಂದರು.
‘ಮಾರುಕಟ್ಟೆಯಲ್ಲಿ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಿವೆ. ಆದರೆ, ರೈತರು ಬೆವರು ಸುರಿಸಿ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲದಂತಾಗಿದೆ. ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ₹ 2,400 ಬೆಂಬಲ ಬೆಲೆ ಘೋಷಣೆ ಮಾಡಿದೆ. ಆದರೆ ಇದುವರೆಗೂ ಜಿಲ್ಲಾಡಳಿತ ಖರೀದಿ ಕೇಂದ್ರ ಆರಂಭಿಸಿಲ್ಲ. ಹೀಗಾಗಿ ರೈತರು ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ಒದಗಿದೆ’ ಎಂದು ತಿಳಿಸಿದರು.
ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಮಣಕವಾಡದ ಮೃತ್ಯುಂಜಯ ಸ್ವಾಮೀಜಿ, ಕೂಡಲದ ಗುರುನಂಜೇಶ್ವರ ಸ್ವಾಮೀಜಿ ಮಾತನಾಡಿದರು.
ಹೆಸರೂರಿನ ಮಹೇಶ್ವರ ಸ್ವಾಮೀಜಿ, ಹೆರೂರಿನ ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ, ವಿಜಯಪುರದ ಷಣ್ಮುಕಾರೂಢ ಮಠದ ಸಿದ್ದಾರೂಢ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ವಿರುಪಾಕ್ಷ ಶಿವಾಚಾರ್ಯ ಸ್ವಾಮೀಜಿ, ರಾಮಕೃಷ್ಣ ಸ್ವಾಮೀಜಿ ರೈತರ ಹೋರಾಟವನ್ನು ಬೆಂಬಲಿಸಿದರು. ರಾಜೇಶ ಅಂಗಡಿ, ಮಂಜುನಾಥ ಸಂಬೋಜಿ, ಹನುಮಂತಪ್ಪ ದೀವಿಗಿಹಳ್ಳಿ, ಲಲಿತಾ ಲಮಾಣಿ, ಬಸವರಾಜ ಮೇಗಳಗೇರಿ, ನೀಲಮ್ಮ ಮೇಗಳಗೇರಿ, ವಕೀಲ ಯು.ಆರ್. ಗುರುಲಿಂಗಪ್ಪಗೌಡ್ರ, ಮಹೇಶ ಕೊಟ್ಟೂರ, ರಾಜಶೇಖರ ದೀವಿಗಿಹಳ್ಳಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.