ADVERTISEMENT

ಮೆಕ್ಕೆಜೋಳ | ರೈತರ ಹೋರಾಟಕ್ಕೆ ಮಣಿದ ಸರ್ಕಾರ: ಕ್ವಿಂಟಲ್‌ಗೆ ₹2,400 ಬೆಲೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 4:03 IST
Last Updated 4 ಡಿಸೆಂಬರ್ 2025, 4:03 IST
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಕೋಣನಕೇರಿ ಬಳಿ ತಡಸ–ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ರೈತರು ಒಣಗಲು ಹಾಕಿರುವ ಮೆಕ್ಕೆಜೋಳ
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಕೋಣನಕೇರಿ ಬಳಿ ತಡಸ–ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ರೈತರು ಒಣಗಲು ಹಾಕಿರುವ ಮೆಕ್ಕೆಜೋಳ   

ಹಾವೇರಿ: ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಮೆಕ್ಕೆಜೋಳ ಖರೀದಿ ಮಾಡಲು ಏಳು ಕಡೆಗಳಲ್ಲಿ ಕೇಂದ್ರಗಳನ್ನು ತೆರೆಯಲಾಗಿದ್ದು, ಡಿ. 4ರಿಂದಲೇ ರೈತರ ನೋಂದಣಿ ಪ್ರಕ್ರಿಯೆ ಶುರುವಾಗಲಿದೆ.

‘ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಲ್‌ಗೆ ₹ 3,000 ಬೆಂಬಲ ಬೆಲೆ ನೀಡಬೇಕು. ಖರೀದಿ ಕೇಂದ್ರ ತೆರೆಯಬೇಕು’ ಎಂದು ಒತ್ತಾಯಿಸಿ ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಅಹೋರಾತ್ರಿ ಧರಣಿ ನಡೆಸಿದ್ದರು. ಜೊತೆಗೆ, ರಾಜ್ಯದ ಹಲವು ಕಡೆಗಳಲ್ಲಿಯೂ ರೈತರ ಹೋರಾಟ ಜೋರಾಗಿತ್ತು.

ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ, ‘ಪ್ರತಿಯೊಬ್ಬ ರೈತರಿಂದ 5 ಕ್ವಿಂಟಲ್ ಮೆಕ್ಕೆಜೋಳ ಖರೀದಿಸಲಾಗುವುದು’ ಎಂದು ಮೊದಲ ಆದೇಶ ಹೊರಡಿಸಿತ್ತು. ಈ ಆದೇಶವನ್ನೂ ಖಂಡಿಸಿದ್ದ ರೈತರು, ಆದೇಶ ಪ್ರತಿ ಸುಟ್ಟು ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಪರಿಷ್ಕೃತ ಆದೇಶ ಹೊರಡಿಸಿರುವ ಸರ್ಕಾರ, ‘1 ಎಕರೆಗೆ 12 ಕ್ವಿಂಟಲ್ ಹಾಗೂ ಒಬ್ಬ ರೈತರಿಂದ ಗರಿಷ್ಠ 20 ಕ್ವಿಂಟಲ್ ಮೆಕ್ಕೆಜೋಳ ಖರೀದಿಲಾಗುವುದು. ಕ್ವಿಂಟಲ್‌ಗೆ ₹2,400 ನೀಡಲಾಗುವುದು’ ಎಂದು ಹೇಳಿದೆ.

ADVERTISEMENT

ಸರ್ಕಾರದ ಪರಿಷ್ಕೃತ ಆದೇಶದ ಅನ್ವಯ ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸಭೆ ನಡೆಸಿದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಆರಂಭಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಸರ್ಕಾರದ ಆದೇಶದಂತೆ ಜಿಲ್ಲೆಯ 7 ಕಡೆಗಳಲ್ಲಿ ಖರೀದಿ ಕೇಂದ್ರ ತೆರೆಯಲು ತೀರ್ಮಾನಿಸಲಾಗಿದೆ. ಡಿಸೆಂಬರ್ 3ರಿಂದಲೇ ರೈತರು ನೋಂದಣಿ ಮಾಡಿಕೊಳ್ಳಬಹುದಾಗಿದೆ. ನೋಂದಣಿಯಾದ ನಂತರ, ನಿಗದಿತ ದಿನದೊಳಗೆ ಮೆಕ್ಕೆಜೋಳ ಖರೀದಿ ಆರಂಭವಾಗಲಿದೆ. ರೈತರ ಬೇಡಿಕೆ ಆಧರಿಸಿ, ಮುಂಬರುವ ದಿನಗಳಲ್ಲಿ ಮತ್ತಷ್ಟು ಕಡೆ ಖರೀದಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ತಿಳಿಸಿದರು.

‘ಆರಂಭದಲ್ಲಿ ಒಬ್ಬ ರೈತರಿಂದ 5 ಕ್ವಿಂಟಲ್ ಮೆಕ್ಕೆಜೋಳ ಖರೀದಿಸುವ ಬಗ್ಗೆ ಸರ್ಕಾರದ ಆದೇಶದಲ್ಲಿ ತಿಳಿಸಿತ್ತು. ಈಗ ಪರಿಷ್ಕೃತ ಆದೇಶ ಹೊರಬಿದ್ದಿದ್ದು, ಒಬ್ಬರ ರೈತರಿಂದ 20 ಕ್ವಿಂಟಲ್ ಮೆಕ್ಕೆಜೋಳ ಖರೀದಿಸಲು ಅವಕಾಶವಿದೆ. ಇದೇ ಆದೇಶದಂತೆ ಏಳು ಕೇಂದ್ರಗಳಲ್ಲಿ ಖರೀದಿ ಪ್ರಕ್ರಿಯೆ ಶುರುವಾಗಲಿದೆ’ ಎಂದು ಹೇಳಿದರು.

‘ಹಾವೇರಿ ತಾಲ್ಲೂಕಿನ ಹಾವನೂರು, ಗುತ್ತಲ, ಬೆಳವಿಗಿ, ನೆಗಳೂರು, ರಾಣೆಬೆನ್ನೂರು ತಾಲ್ಲೂಕಿನ ಕಮದೋಡ, ಕರೂರ ಹಾಗೂ ಇಟಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮೆಕ್ಕೆಜೋಳ ಖರೀದಿ ಶುರುವಾಗಲಿದೆ. ಪ್ರಸಕ್ತ ಮುಂಗಾರಿನಲ್ಲಿ ಬೆಳೆದ ಮೆಕ್ಕೆಜೋಳವನ್ನು ಮಾರಲು ಇಚ್ಛಿಸುವ ರೈತರು, ಸಮೀಪದ ಸಹಕಾರ ಸಂಘಕ್ಕೆ ಹೋಗಿ ಆರ್‌ಟಿಸಿ ಪ್ರಕಾರ ನೋಂದಣಿ ಮಾಡಿಕೊಳ್ಳಬೇಕು’ ಎಂದು ಅವರು ಕೋರಿದರು.

‘ಮೆಕ್ಕೆಜೋಳ ಖರೀದಿಯ ನೋಂದಣಿ, ಖರೀದಿ ಹಾಗೂ ಹಣ ಪಾವತಿ ಸೇರಿದಂತೆ ಸಂಪೂರ್ಣ ಪ್ರಕ್ರಿಯೆ ಸಂಬಂಧ ಸಂಘದ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಸದ್ಯಕ್ಕೆ ನೋಂದಣಿ ಮಾತ್ರ ಶುರುವಾಗಿದ್ದು, ಹಂತ ಹಂತವಾಗಿ ಎಲ್ಲ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಹೇಳಿದರು.

ಎಲ್ಲೆಲ್ಲಿ ಖರೀದಿ ಕೇಂದ್ರ

ಹಾವೇರಿ ತಾಲ್ಲೂಕಿನ ಹಾವನೂರು ಗುತ್ತಲ ಬೆಳವಿಗಿ ನೆಗಳೂರು ಹಾಗೂ ರಾಣೆಬೆನ್ನೂರು ತಾಲ್ಲೂಕಿನ ಕಮದೋಡ ಕರೂರ ಇಟಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.