ADVERTISEMENT

ರಾಣೆಬೆನ್ನೂರು: ನಯನ ಮನೋಹರ ಮಲ್ಲಿಕಾರ್ಜುನ ಬೆಟ್ಟ

ಸಾಹಸಿಗಳಿಗೆ ಚಾರಣ; ನಿಸರ್ಗಪ್ರೇಮಿಗಳಿಗೆ ರಸದೌತಣ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 2:39 IST
Last Updated 31 ಆಗಸ್ಟ್ 2025, 2:39 IST
ರಾಣೆಬೆನ್ನೂರು ತಾಲ್ಲೂಕಿನ ಬೆಟ್ಟದ ಮಲ್ಲಿಕಾರ್ಜುನ ಗುಡ್ಡದ ರಮಣೀಯ ನೋಟದ ದೃಶ್ಯಗಳು
ರಾಣೆಬೆನ್ನೂರು ತಾಲ್ಲೂಕಿನ ಬೆಟ್ಟದ ಮಲ್ಲಿಕಾರ್ಜುನ ಗುಡ್ಡದ ರಮಣೀಯ ನೋಟದ ದೃಶ್ಯಗಳು   

ರಾಣೆಬೆನ್ನೂರು: ಎರಡನೇ ಶ್ರೀಶೈಲ ಎಂದೇ ಖ್ಯಾತಿ ಪಡೆದ ಬೆಟ್ಟದ ಮಲ್ಲಿಕಾರ್ಜುನ ದೇವಸ್ಥಾನ ಧಾರ್ಮಿಕ, ಸಾಹಿತ್ಯ, ಸಾಮಾಜಿಕವಾಗಿ ಪ್ರಸಿದ್ಧಿ ಪಡೆದಿದೆ.

ಮಳೆಗಾಲದಲ್ಲಿ ಮಧುವಣಗಿತ್ತಿಯಂತೆ ಸಿಂಗಾರಗೊಂಡು, ಪರಿಸರ ಪ್ರೇಮಿಗಳನ್ನು ಮತ್ತು ಯಾತ್ರಾರ್ಥಿಗಳನ್ನು ಕೈ ಬೀಸಿ ಕರೆಯುತ್ತದೆ. ತನ್ನ ಒಡಲಾಳದಲ್ಲಿ ಅನೇಕ ವಿಸ್ಮಯ, ಕೌತುಕ, ಔಷಧಿ ಸಸ್ಯಗಳನ್ನು ಇಟ್ಟುಕೊಂಡಿದೆ. ಚಾರಣಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಪಶ್ಚಿಮ ಘಟ್ಟದ ಸಹ್ಯಾದ್ರಿ, ಬಯಲುಸೀಮೆಯ ಕಪೋತಗಿರಿಯಂತೆ ರಾಣೆಬೆನ್ನೂರಿನ ಸಹ್ಯಾದ್ರಿ ಎಂದೇ ಪ್ರಸಿದ್ಧಿಯಾಗಿದೆ.

ಗುಡ್ಡದ ತುತ್ತತುದಿ ಮುಟ್ಟಿದಾಗ ಮೋಡಗಳು ಬಂದು ಅಪ್ಪಳಿಸುವ ತಣ್ಣನೆ ಗಾಳಿ ವಿಶೇಷ ಅನುಭವ ನೀಡುತ್ತದೆ. ಬೆಟ್ಟದ ಮೇಲಿನ ದೊಡ್ಡ, ದೊಡ್ಡ ಬಂಡೆಗಳು. ಕಲ್ಲಿನಿಂದ ಕಟ್ಟಿದ ದೇವಸ್ಥಾನ. ಕಲ್ಲಿನ ಸ್ತಂಭ, ಕಲ್ಲಿನ ಗೋಡೆ, ಕಲ್ಲಿನ ನೆಲಹಾಸು ಮತ್ತು ಕಲ್ಲಿನ ಚಾವಣಿ ವಿಶಾಲ ಪ್ರಾಂಗಣ ಗುಡ್ಡ ದೈವೀ ಕಳೆ ನೀಡಿವೆ.

ADVERTISEMENT

ಬೆಟ್ಟದ ತುದಿಯಿಂದ ಕೆಳಗೆ ನೋಡಿದಾಗ ಹಳ್ಳಿ, ಗದ್ದೆ, ಕೆರೆ, ರಸ್ತೆಭೂದೃಶ್ಯ ರಮಣೀಯವಾಗಿ ಕಾಣುತ್ತದೆ. ಸುಕ್ಷೇತ್ರ ಐರಣಿ ಹೊಳೆಮಠದ ಎದುರಿಗೆ ಇರುವ ಈ ಗುಡ್ಡದಲ್ಲಿ ಹುಬ್ಬಳ್ಳಿ ಸಿದ್ಧಾರೂಢರು, ಐರಣಿ ಮುಪ್ಪಿನಾರ್ಯ ಪರಮಹಂಸರು ತಪೋಗೈದ ಪುಣ್ಯಭೂಮಿ. ಇಲ್ಲಿ ಗುರುಕೊಟ್ಟೂರೇಶ್ವರ ಸ್ವಾಮಿಯ ಗದ್ದುಗೆ ಇದೆ. ದಿನಾಲು ಎರಡು ಹೊತ್ತು ಪೂಜೆ ಸಲ್ಲಿಸಲಾಗುತ್ತದೆ. ಬೆಟ್ಟದ ತುದಿಯಲ್ಲಿ ಶಿವನಿಗೆ ಮಲ್ಲಿಕಾರ್ಜುನನ ರೂಪದಲ್ಲಿ ಸಮರ್ಪಿತವಾದ ದೇವಾಲಯವಿದೆ. ಮಂದಿರದ ಒಳಭಾಗದಲ್ಲಿ ಲಿಂಗರೂಪಿ ಮಲ್ಲಿಕಾರ್ಜುನ ದೇವರ ಸನ್ನಿಧಾನದಲ್ಲಿ ಜೋಡು ನಂದಿಯ ವಿಗ್ರಹಗಳು ಸಹ ಇವೆ. ಬೆಟ್ಟದ ಮೇಲೊಂದು ಸಿಹಿ ನೀರಿನ ಬಾವಿ ಇದೆ.

ಐರಣಿ ಹೊಳೆಮಠದ ಬಸವರಾಜದೇಶೀಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಎರಡು ಎಕರೆ ಜಾಗೆಯಲ್ಲಿ ದೇವಾಲಯದ ಜೀರ್ಣೋದ್ದಾರ ಕೆಲಸ ಭರದಿಂದ ಸಾಗಿದೆ. ಕೆಲವು ನಂದಿ ವಿಗ್ರಹಗಳು, ಮಂಟಪಗಳಿಗೆ ಮರುನಿರ್ಮಾಣ ಸೇರಿದಂತೆ ಅನೇಕ ಕೆಲಸ ಮಾಡಲಾಗಿದೆ. ಮೆಟ್ಟಿಲು ಜೋಡಿಸುವ ಕಾಮಗಾರಿ ಭರದಿಂದ ಸಾಗಿದೆ.

ಶ್ರಾವಣ ಮಾಸದ ಕೊನೆಯ ಶ್ರಾವಣ ಸೋಮವಾರ ಗುರು ಕೊಟ್ಟೂರೇಶ್ವರ ಸ್ವಾಮಿಗೆ ಅಭಿಷೇಕ, ಪಾಲಕಿ ಉತ್ಸವವು ಐರಣಿ ಹೊಳೆಮಠದಿಂದ ಪಾಲಕಿ ಮೆರವಣಿಗೆ, ಪರವು ನಡೆಯುತ್ತದೆ.

ರಾಣೆಬೆನ್ನೂರು ತಾಲ್ಲೂಕಿನ ಬೆಟ್ಟದ ಮಲ್ಲಿಕಾರ್ಜುನ ಗುಡ್ಡದ ರಮಣೀಯ ನೋಟದ ದೃಶ್ಯಗಳು
ಬೆಟ್ಟದ ಮಲ್ಲಿಕಾರ್ಜುನ ಗುಡ್ಡವು ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳ. ಇದನ್ನು ಸುಂದರ ಪ್ರವಾಸಿ ತಾಣವಾಗಿ ರೂಪಿಸಬೇಕು
ಬೀರಪ್ಪ ಲಮಾಣಿ. ಯುವ ಸಾಹಿತಿ
ಬೆಟ್ಟದಲ್ಲಿ ಪ್ರಸಾದ ನಿಲಯ ಸಮುದಾಯ ಭವನ ಸೇರಿದಂತೆ ಮುಂತಾದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ
ಗುರುಬಸಪ್ಪ ಐರಣಿಶೆಟ್ಟರ ಕಾರ್ಯದರ್ಶಿ ಐರಣಿಮಠ

‘ಬೆಟ್ಟದ ಅಭಿವೃದ್ಧಿಗೆ ಯೋಜನೆ’:

‘ಬೆಟ್ಟದ ಮಲ್ಲಿಕಾರ್ಜುನ ಗುಡ್ಡಕ್ಕೆ ಹೋಗಲು ಪ್ರವಾಸೋದ್ಯಮ ಇಲಾಖೆಯಿಂದ ಹೊಸ ಜೀಪ್‌ ಖರೀದಿಸಲಾಗಿದೆ. ಪ್ರವಾಸಿಗರನ್ನು ಕರೆದೊಯ್ಯಲು ಇದು ಸಹಾಯಕವಾಗಲಿ’ ಎಂದು ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದರು. ‘ಈಗಾಗಲೇ ರಾಣೆಬೆನ್ನೂರಿನ ದೊಡ್ಡಕೆರೆ ಬೋಟಿಂಗ್‌ ವ್ಯವ್ಯಸ್ಥೆಗೆ ಚಾಲನೆ ನೀಡಲಾಗಿದೆ. ಹೊಸ ವಾಹನಗಳಿಗೆ ಆರ್‌ಟಿಒ ರೆಸಿಸ್ಟ್ರೇಶನ್‌ ಮತ್ತು ವಾಹನ ವಿಮೆ ಚಾಲಕರಿಗೆ ತರಬೇತಿ ಪ್ರವಾಸಿಗರಿಗೆ ಸುರಕ್ಷತೆ ಕ್ರಮಗಳು ಅಲ್ಲಿಗೆ ಹೋಗಿ ಬರಲು ತಗಲುವ ಪ್ರಯಾಣ ವೆಚ್ಚ ನಕಾಶೆ ಆನ್‌ ಲೈನ್‌ ಬುಕಿಂಗ್‌ ವ್ಯವಸ್ಥೆಯನ್ನು ಪ್ರವಾಸೋದ್ಯಮ ಇಲಾಖೆಯಿಂದ ಮಾಡಲಾಗುತ್ತಿದೆ. ಸಂಪೂರ್ಣ ಕಾರ್ಯಾಚರಣೆಯಾಗಲು ಇನ್ನು ಒಂದು ವಾರಬೇಕು’ ಎಂದು ತಿಳಿಸಿದರು. ಈಚೆಗೆ ಶಾಸಕರು ತಮ್ಮ ಸಹಪಾಠಿಗಳೊಂದಿಗೆ ಗುಡ್ಡವನ್ನು ಏರಿ ಹೋದಾಗ ಅಲ್ಲಿನ ನಿಸರ್ಗ ಕಂಡು ‘ಯಾವ ಮಡಿಕೇರಿಗೂ ಇಲ್ಲಿನ ಸೊಬಗು ಹೋಲಿಸಲಾಗದು. ಅಷ್ಟೊಂದು ಸುಂದರ. ಕಡಿದಾದ ರಸ್ತೆ ಪಕ್ಷಿಗಳ ಇಂಚರ ಬೆಟ್ಟಗಳ ಸಾಲು ಮನಮೋಹಕ‘ ಎಂದು ಹೇಳಿದ್ದರು. ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ ಅವರನ್ನು ಕರೆಸಿ ಗುಡ್ಡಕ್ಕೆ ಹೋಗಿ ಬರಲು ಆ.15 ರಂದು ಇಲಾಖೆಯಿಂದ 5 ಹೊಸ ಜೀಪುಗಳಿಗೆ ಚಾಲನೆ ನೀಡಲಾಗಿದೆ. ಇದನ್ನು ಕಂಡು ಪ್ರವಾಸಿಗರು ಶನಿವಾರ ಭಾನುವಾರ ಉತ್ಸಾಹದಿಂದ ತೆರಳಿದರು.

ಹೋಗುವುದು ಹೇಗೆ:

ರಾಷ್ಟ್ರೀಯ ಹೆದ್ದಾರಿಯ ಮಾಕನೂರು ಕ್ರಾಸ್‌ನಿಂದ 10 ಕಿಮೀ ದೂರದಲ್ಲಿ ರಾಣೆಬೆನ್ನೂರಿನಿಂದ 22 ಕಿಮೀ ಆರೇಮಲ್ಲಾಪುರ ಚಳಗೇರಿಯಿಂದ 4 ಕಿಮೀ ಅಂತರದಲ್ಲಿದೆ. ಅಲ್ಲಿ ಸ್ವಾಮಿ ದೇವಸ್ಥಾನದ ಹಿಂದೆ ಸಿದ್ಧಾರೂಢರು ಮತ್ತು ಮುಪ್ಪಿನಾರ್ಯರ ಗದ್ದುಗೆಗಳಿವೆ. ಹೆಸರೇ ಹೇಳುವಂತೆ ಈ ಊರಿಗೆ ತಾಗಿದಂತೆ ಬೆಟ್ಟವೊಂದಿದೆ. ಸುಮಾರು 950 ಮೆಟ್ಟಿಲು ಏರಿದರೆ ದೇವರ ದರ್ಶನವಾಗುತ್ತದೆ. ರಾಣೆಬೆನ್ನೂರು ಬಸ್‌ ನಿಲ್ದಾಣದಿಂದ ಐರಣಿ ಮಲ್ಲಿಕಾರ್ಜುನ ಬೆಟ್ಟಕ್ಕೆ 22 ಕಿ.ಮೀ ಹಾವೇರಿ ಜಿಲ್ಲಾ ಕೇಂದ್ರದಿಂದ 55 ಕಿ.ಮೀ ಬೆಂಗಳೂರಿನಿಂದ 350 ಕಿಮೀ ಅಂತರದಲ್ಲಿದೆ. ಹರಿಹರ ರೈಲ್ವೆ ಜಂಕ್ಸನ್‌ ಮತ್ತು ರಾಣೆಬೆನ್ನೂರು ರೈಲ್ವೆ ನಿಲ್ದಾಣದಿಂದ 22 ಕಿಮೀ ದೂರದಲ್ಲಿದೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ. ಖನಿಜ ನೈಸರ್ಗಿಕ ಸಂಪತ್ತು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.