ADVERTISEMENT

ಬೇಡ್ತಿ– ವರದಾ | ಹಾವೇರಿಗೇ ನೀರಿಲ್ಲ: ‘ಪಿಎಫ್‌ಆರ್’ ವರದಿಗೆ ಮಾಜಿ ಸಂಸದ ವಿರೋಧ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 2:35 IST
Last Updated 3 ಮಾರ್ಚ್ 2026, 2:35 IST
ಮಂಜುನಾಥ ಕುನ್ನೂರು
ಮಂಜುನಾಥ ಕುನ್ನೂರು   

ಹಾವೇರಿ: ‘ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ಬೇಡ್ತಿ–ವರದಾ ನದಿ ಜೋಡಣೆ ಯೋಜನೆ ಜಾರಿಗೆ ಹೋರಾಟ ಮಾಡುತ್ತಿದ್ದೇನೆ. ಪ್ರತಿಯೊಂದು ದಾಖಲೆ ಸಂಗ್ರಹಿಸಿದ್ದೇನೆ. ಯೋಜನೆಯ ಪೂರ್ವ ಕಾರ್ಯಸಾಧ್ಯತೆ ವರದಿ (ಪಿಎಫ್‌ಆರ್) ಗಮನಿಸಿದರೆ, ಬೇಡ್ತಿ ನೀರು ವರದಾ ನದಿಗೆ ಸೇರುವುದಿಲ್ಲ. ಹಾವೇರಿ ನಗರ ಹಾಗೂ ಜಿಲ್ಲೆಯ ಬಹುತೇಕ ಹಳ್ಳಿಗಳಿಗೆ ನೀರು ಸಿಗುವುದಿಲ್ಲ. ಯೋಜನೆ ಜಾರಿಯಾದರೂ ಜಿಲ್ಲೆಗೆ ಅನ್ಯಾಯವಾಗಲಿದೆ’ ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರು ದೂರಿದರು.

ಶಿಗ್ಗಾವಿ ತಾಲ್ಲೂಕಿನ ಶ್ಯಾಡಂಬಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಿಎಫ್‌ಆರ್ ವರದಿ ಪರಿಗಣಿಸಿ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿದರೆ, ಕೆಲವೇ ಗ್ರಾಮಗಳಿಗೆ ನೀರು ಸಿಗಲಿದೆ. ಉಳಿದವರಿಗೆ ಅನ್ಯಾಯವಾಗಲಿದೆ. ಜಿಲ್ಲೆಯ ಬಹುತೇಕ ನಗರ, ಪಟ್ಟಣ ಹಾಗೂ ಹಳ್ಳಿಗಳಿಗೆ ನೀರು ಸಿಗುವ ರೀತಿಯಲ್ಲಿ ಡಿಪಿಆರ್‌ ಸಿದ್ಧಪಡಿಸಬೇಕು. ನೀರಾವರಿ ತಜ್ಞರು, ಸಾರ್ವಜನಿಕರು, ಜನಪ್ರತಿನಿಧಿಗಳು, ರೈತ ಮುಖಂಡರು ಹಾಗೂ ಅನುಭವಿಗಳ ಅಭಿಪ್ರಾಯ ಪಡೆದುಕೊಂಡು ಪಾಲಿಸಬೇಕು’ ಎಂದು ಆಗ್ರಹಿಸಿದರು.

‘1995ರಿಂದ ಯೋಜನೆ ಜಾರಿ ಬಗ್ಗೆ ಪ್ರಕ್ರಿಯೆ ನಡೆದಿದೆ. ಪರ್ಯಾಯ–1 ಹಾಗೂ ಪರ್ಯಾಯ–2ರ ಮಾದರಿಯಲ್ಲಿ  ರೂಪುರೇಷೆ ಸಿದ್ಧಪಡಿಸಲಾಗಿದೆ. ಪರಿಸರಕ್ಕೆ ಹಾನಿಯಾಗಬಾರದೆಂದು ಪೈಪ್‌ ಮೂಲಕ ನೀರು ಕೊಂಡೊಯ್ಯುವ ಬದಲಾವಣೆ ಮಾಡಲಾಗಿದೆ. ಪರ್ಯಾಯ 2ರಲ್ಲಿ ಬೇಡ್ತಿ ನದಿಯಿಂದ ನೀರನ್ನು ಎತ್ತಿ, ಪೈಪ್‌ ಮೂಲಕ ಮುಂಡಗೋಡ ತಾಲ್ಲೂಕಿನ ಮಳಗಿಯಲ್ಲಿರುವ ಧರ್ಮಾ ಜಲಾಶಯಕ್ಕೆ ಹರಿಸಲು ಪಿಎಫ್‌ಆರ್‌ನಲ್ಲಿ ಉಲ್ಲೇಖಿಸಲಾಗಿದೆ’ ಎಂದರು.

ADVERTISEMENT

‘ಮಳಗಿ ಜಲಾಶಯದಿಂದ ಪಾಳಾ, ಶಿರಸಿ ತಾಲ್ಲೂಕಿನ ದಾಸನಕೊಪ್ಪ, ಹಾನಗಲ್ ತಾಲ್ಲೂಕಿನ ಕೆಲವರಕೊಪ್ಪ, ಯಲಿವಾಳ, ಶಿಗ್ಗಾವಿ ತಾಲ್ಲೂಕಿನ ತೋರೂರು, ಚಂದಾಪುರ, ನೀರಲಕಟ್ಟಿ, ಮಾದಾಪೂರ, ಗೊಟಗೋಡಿ, ಬೆಳವಲಕೊಪ್ಪ, ಪಾಣಿಗಟ್ಟಿ, ಹುಲಗೂರು, ಬಸನಾಳ, ಶಿಶುವಿನಹಾಳ, ರಟ್ಟಿಗೇರಿ, ಗೌಡಗೇರಿ, ಸಂಕ್ಲಿಪೂರ, ಗದಗ ಜಿಲ್ಲೆಯ ಗುಲಗಂಜಿಕೊಪ್ಪ, ಲಕ್ಷ್ಮೇಶ್ವರ, ಅಕ್ಕಿಗುಂದ, ಪರಸಾಪುರ, ವರವಿ, ಗುಡ್ಡಾಪುರ, ಕಡಕೋಳ, ಹೊಸಳ್ಳಿ, ಚಿಕ್ಕ ವಡ್ಡಟ್ಟಿ ಮೂಲಕ ಸುಮಾರು 170 ಕಿ.ಮೀ. ಪೈಪ್‌ ಹಾದು ಹೋಗಲಿದೆ. ಹಿರೇವಡ್ಡಟ್ಟಿಯಲ್ಲಿ ಜಲಾಶಯ ನಿರ್ಮಿಸಲು ಉದ್ದೇಶಿಸಲಾಗಿದೆ. ಹಾನಗಲ್– ಶಿಗ್ಗಾವಿ ತಾಲ್ಲೂಕಿನ ಕೆಲ ಗ್ರಾಮಗಳಿಗೆ ಮಾತ್ರ ಈ ಯೋಜನೆಯಿಂದ ನೀರು ಸಿಗಲಿದೆ. ನೀರಿಗಾಗಿ ಹಾಹಾಕಾರ ಅನುಭವಿಸುತ್ತಿರುವ ಹಾವೇರಿ, ಸವಣೂರು, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ, ರಾಣೆಬೆನ್ನೂರು ತಾಲ್ಲೂಕಿನ ಹಳ್ಳಿಗಳಿಗೆ ನೀರು ಸಿಗುವುದಿಲ್ಲ’ ಎಂದು ಹೇಳಿದರು.

‘ಇಡೀ ಹಾವೇರಿ ಜಿಲ್ಲೆಗೆ ನೀರು ಸಿಗುವುದಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಇದೊಂದು ಜನರ ಯೋಜನೆ. ರಾಜಕೀಯ ಮಾಡಬಾರದು. ಜನರು ಸಹ ಯೋಜನೆ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಪ್ರತಿ ಗ್ರಾಮದಲ್ಲಿಯೂ ಜನಜಾಗೃತಿ ಸಭೆ ನಡೆಯಬೇಕು. ಜನರು ಹೋರಾಟದ ಮೂಲಕ ಸರ್ಕಾರಗಳ ಮೇಲೆ ಒತ್ತಡ ಹಾಕಬೇಕು’ ಎಂದರು.

ಅಗತ್ಯವಿರುವ ಕಡೆ ಡ್ಯಾಂ ನಿರ್ಮಿಸಿ: ‘ಬೇಡ್ತಿ ಹಾಗೂ ವರದಾ ನದಿಗಳು ಹರಿದು ಹೋಗಿರುವ ಜಾಗದ ನಡುವೆ ಕೇವಲ 23.5 ಕಿ.ಮೀ. ಅಂತರವಿದೆ. ಈ ಮಾರ್ಗದಲ್ಲಿ ನದಿ ಜೋಡಣೆ ಮಾಡಬೇಕು. ಹಾವೇರಿ ಜಿಲ್ಲೆಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ಡ್ಯಾಂಗಳನ್ನು ನಿರ್ಮಿಸಿ ನೀರು ಸಂಗ್ರಹಿಸಿಟ್ಟುಕೊಳ್ಳಬೇಕು. ಅದನ್ನು ಬಿಟ್ಟು 170 ಕಿ.ಮೀ. ದೂರದವರೆಗೆ ಪೈಪ್‌ ಲೈನ್ ಮಾಡಿದರೆ, ಯಾರಿಗೂ ಅನುಕೂಲವಾಗುವುದಿಲ್ಲ’ ಎಂದು ತಿಳಿಸಿದರು.

‘ಶಿಗ್ಗಾವಿ ತಾಲ್ಲೂಕಿನ ಗಂಗಿಭಾವಿ, ನೀರಲಗಿ ಕುಂದೂರು, ಹಾವೇರಿ ಹೆಗ್ಗೇರಿ ಕೆರೆ, ಗುಡ್ಡದಮಲ್ಲಾಪುರ, ಅಸುಂಡಿ ಸೇರಿದಂತೆ ವಿವಿಧ ಕಡೆಗಳಲ್ಲಿ ಡ್ಯಾಂ ನಿರ್ಮಿಸಲು ಆಗ್ರಹಿಸಲಾಗುತ್ತಿದೆ. ಜನರ ಬೇಡಿಕೆಗಳನ್ನು ಪರಿಗಣಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಡಿಪಿಆರ್ ಸಿದ್ಧಪಡಿಸಬೇಕು’ ಎಂದು ಅವರು ಆಗ್ರಹಿಸಿದರು.

ನದಿ ಜೋಡಣೆಗೆ ₹ 45 ಸಾವಿರ ಕೋಟಿ: ‘ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶ ರಾಜ್ಯಗಳ ನಡುವೆ ಕೆನ್–ಬೇಟ್ವಾ ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ ₹45 ಸಾವಿರ ಕೋಟಿ ನೀಡಿದೆ. ಬೇಡ್ತಿ–ವರದಾ ನದಿ ಜೋಡಣೆಗೂ ಹಣ ನೀಡಲಿದೆ. ಆದರೆ, ಜಿಲ್ಲೆಗೆ ಅನುಕೂಲವಾಗುವ ರೀತಿಯಲ್ಲಿ ಡಿಪಿಆರ್ ಆಗಬೇಕು’ ಎಂದು ಕುನ್ನೂರು ಒತ್ತಾಯಿಸಿದರು.

ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ‘ಬೇಡ್ತಿ–ವರದಾ ನದಿ ಜೋಡಣೆ ಯೋಜನೆ ಜಾರಿಗಾಗಿ ಹೋರಾಟ ನಡೆಸಲು ಸಮಿತಿ ರಚಿಸಲಾಗಿದೆ. ಸದ್ಯದಲ್ಲೇ ನಿಯೋಗದ ಮೂಲಕ ದೆಹಲಿಗೆ ಹೋಗಿ ಕೇಂದ್ರ ಸರ್ಕಾರದ ಪ್ರಮುಖರನ್ನು ಭೇಟಿ ಮಾಡುತ್ತೇವೆ. ಜಿಲ್ಲೆಗೆ ಅನುಕೂಲವಾಗುವ ರೀತಿಯಲ್ಲಿ ಡಿಪಿಆರ್‌ ಮಾಡುವಂತೆ  ಒತ್ತಾಯಿಸುತ್ತೇವೆ’ ಎಂದರು.

ರೈತ ಮುಖಂಡ ರಾಮಣ್ಣ ಕೆಂಚಳ್ಳೇರ ಹಾಗೂ ಇತರರು ಇದ್ದರು.

ಇದು ಜನರ ಕುಡಿಯುವ ನೀರಿನ ಯೋಜನೆ. ಉತ್ತರ ಕನ್ನಡ ಜಿಲ್ಲೆಯ ಕೆಲವರು ಸುಖಾಸುಮ್ಮನೇ ವಿರೋಧ ಮಾಡಿ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಡಿಪಿಆರ್ ಆಗುವವರೆಗೂ ಕಾಯಬೇಕು
ಮಂಜುನಾಥ ಕುನ್ನೂರು, ಮಾಜಿ ಸಂಸದ 

‘ಮೂರು ತಿಂಗಳಿಗೆ ನಿವೃತ್ತಿ: ತರಾತುರಿ’

‘ಬೇಡ್ತಿ–ವರದಾ ನದಿ ಜೋಡಣೆ ಯೋಜನೆ ಜಾರಿ ಮಾಡಬೇಕಾದ ಇಲಾಖೆಯೊಂದರ ಉನ್ನತ ಅಧಿಕಾರಿಗಳು ಮೂರು ತಿಂಗಳಿನಲ್ಲಿ ನಿವೃತ್ತರಾಗಲಿದ್ದಾರೆ. ಅವರು ನಿರ್ಗಮಿಸುವ ಮುನ್ನವೇ ₹ 10 ಸಾವಿರ ಕೋಟಿಯ ಯೋಜನೆಗೆ ಅನುಮತಿ ನೀಡಲು ತುದಿಗಾಲಿನಲ್ಲಿ ನಿಂತಿರುವ ಮಾಹಿತಿ ಸಿಕ್ಕಿದೆ. ಅದಕ್ಕಾಗಿ ಎಲ್ಲವೂ ತರಾತುರಿಯಲ್ಲಿ ಕೆಲಸ ನಡೆಯುತ್ತಿರುವ ಮಾಹಿತಿಯಿದೆ’ ಎಂದು ಮಂಜುನಾಥ್ ಕುನ್ನೂರು ತಿಳಿಸಿದರು. ‘ಹಳೇ ಪಿಎಫ್‌ಆರ್ ವರದಿ ಆಧರಿಸಿ ಮಳಗಿ ಜಲಾಶಯದಿಂದ ಹಿರೇವಡ್ಡಟ್ಟಿಯವರೆಗೆ ಪೈಪ್‌ ಮೂಲಕ ನೀರು ತಂದರೆ ಹಾವೇರಿ ಜಿಲ್ಲೆಗೆ ಉಪಯೋಗವಾಗುವುದಿಲ್ಲ. ಅಧಿಕಾರಿ ನಿವೃತ್ತರಾಗುತ್ತಿರುವ ಕಾರಣಕ್ಕೆ ತರಾತುರಿಯಲ್ಲಿ ಡಿಪಿಆರ್ ಮಾಡಿ ಹಣ ಬಿಡುಗಡೆ ಮಾಡಿಸಿ ಟೆಂಡರ್‌ ನೀಡಿದರೆ ನಡೆಯುವುದಿಲ್ಲ. ಜನರಿಗೆ ಅನುಕೂಲವಾದರೆ ಮಾತ್ರ ಯೋಜನೆ ಯಶಸ್ವಿಯಾಗುತ್ತದೆ. ತರಾತುರಿ ಯೋಜನೆ ಜಾರಿ ಮಾಡಿದರೆ ನಾನು ಬಿಡುವುದಿಲ್ಲ. ಇಡೀ ಜಿಲ್ಲೆಗೆ ನೀರು ಸಿಗುವವರೆಗೂ ಹೋರಾಟ ಮಾಡುತ್ತೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.