ADVERTISEMENT

ಹಿರೇಕೆರೂರು ತಾಲ್ಲೂಕಿನ ಹಲವು ಬಸ್‌ ತಂಗುದಾಣ ಅವ್ಯವಸ್ಥೆ ಆಗರ

ಹಿರೇಕೆರೂರಿನ ನಿಲ್ದಾಣಗಳ ಸ್ಥಿತಿ ಶೋಚನೀಯ, ದುರ್ನಾತದಲ್ಲೇ ಜನರ ಪ್ರಯಾಣ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 3:18 IST
Last Updated 10 ಅಕ್ಟೋಬರ್ 2025, 3:18 IST
ಹಿರೇಕೆರೂರು ತಾಲ್ಲೂಕಿನ ಕೋಡ ಗ್ರಾಮದ ಬಸ್ ತಂಗುದಾಣದ ದುಃಸ್ಥಿತಿ
ಹಿರೇಕೆರೂರು ತಾಲ್ಲೂಕಿನ ಕೋಡ ಗ್ರಾಮದ ಬಸ್ ತಂಗುದಾಣದ ದುಃಸ್ಥಿತಿ   

ಹಿರೇಕೆರೂರು: ಪಟ್ಟಣ ಹಾಗೂ ತಾಲ್ಲೂಕಿನ ಹಲವು ಬಸ್‌ ನಿಲ್ದಾಣಗಳು ಶೋಚನೀಯ ಸ್ಥಿತಿಯಲ್ಲಿದ್ದು, ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿವೆ.

ಬಿಸಿಲು, ಗಾಳಿ, ಮಳೆಯಿಂದ ರಕ್ಷಿಸಿಕೊಳ್ಳಲು ಪ್ರಯಾಣಿಕರಿಗೆ ಅವಶ್ಯವಿರುವ ತಂಗುದಾಣ–ಬಸ್‌ ನಿಲ್ದಾಣಗಳ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲ್ಲೂಕಿನ ಹಂಸಬಾವಿ, ಚಿಕ್ಕೇರೂರು, ಮತ್ತೂರು, ಬುರುಡಿಕಟ್ಟಿ, ಮತ್ತೂರು ಕ್ರಾಸ್‌ನಲ್ಲಿರುವ ತಂಗುದಾಣಗಳು ನಿಷ್ಪ್ರಯೋಜಕವಾಗಿವೆ. ಕೆಲ ತಂಗುದಾಣಗಳು ಕುಸಿದು ಬೀಳುವ ಹಂತದಲ್ಲಿವೆ. 

ADVERTISEMENT

ಹಂಸಬಾವಿಯ ಬೆಂಗಳೂರು ವೃತ್ತ ಬಳಿಯ ತಂಗುದಾಣ ಮತ್ತು ಕೋಡ ಗ್ರಾಮದ ತಂಗುದಾಣ ಮುಳ್ಳುಕಂಟಿಗಳಲ್ಲಿ ಮುಚ್ಚಿಹೋಗಿವೆ. ಪ್ರಯಾಣಿಕರ ಬಳಕೆಗೆ ಬಾರದ ಸ್ಥಿತಿಯಲ್ಲಿದ್ದು, ಅಕ್ರಮ ಚಟುವಟಿಕೆಗಳ ತಾಣವಾಗಿವೆ.

ಚಿಕ್ಕೇರೂರು ಗ್ರಾಮದ ಹಿರೇಕೆರೂರು ಹಾಗೂ ಶಿರಾಳಕೊಪ್ಪ ರಸ್ತೆ ಪಕ್ಕದಲ್ಲಿ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಅನುದಾನದಲ್ಲಿ ನಿರ್ಮಿಸಿರುವ ತಂಗುದಾಣದಲ್ಲಿ ಕುಳಿತುಕೊಳ್ಳಲು ಅಸನದ ವ್ಯವಸ್ಥೆ ಇಲ್ಲ. ಬಸ್ ಶೆಲ್ಪರ್ ಜಾಹೀರಾತುಗಳ ಗೋಡೆಯಾಗಿದೆ.

ಹಿರೇಕೆರೂರು ಪಟ್ಟಣದ ಬಸ್‌ ನಿಲ್ದಾಣದಲ್ಲಿ ಮೂಲಸೌಕರ್ಯಗಳ ಕೊರತೆ ಹೆಚ್ಚಿದ್ದು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈಗಿರುವ ಬಸ್ ನಿಲ್ದಾಣ, ಹಳೆಯದು ಹಾಗೂ ಚಿಕ್ಕದು. ಬಸ್‌ಗಳ ಸಂಖ್ಯೆ ಹೆಚ್ಚಾಗಿದ್ದು, ಅವುಗಳನ್ನು ನಿಲ್ಲಿಸಲು ಜಾಗದ ಕೊರತೆ ಕಾಡುತ್ತಿದೆ.

ನಿಲ್ದಾಣದ ಪಕ್ಕದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ  ಕುಡಿಯುವ ನೀರಿನ ಘಟಕ ನಿರ್ಮಿಸಿದ್ದು, ನಿರ್ವಹಣೆ ಇಲ್ಲದೆ ಕೆಟ್ಟು ವರ್ಷಗಳಾಗಿವೆ. ಇದರ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲವೆಂಬುದು ಸಾರ್ವಜನಿಕರು ಅಳಲು.

ನಿಲ್ದಾಣದ ಹಲವೆಡೆ ಕಸ ರಾಶಿ ಇದೆ. ಸ್ವಚ್ಛತೆ ಮಾಯವಾಗಿದೆ. ರಜಾ ದಿನಗಳಲ್ಲಿ ಹಣ ಸಂಗ್ರಹ ಕಡಿಮೆ ಎಂಬ ಕಾರಣ ನೀಡಿ ಗ್ರಾಮೀಣ ಭಾಗದ ಹಳ್ಳಿಗಳ ಬಸ್ ಸಂಚಾರವನ್ನು ರದ್ದು ಮಾಡಲಾಗುತ್ತದೆ. ಗ್ರಾಮೀಣ ಪ್ರದೇಶದ ಜನರು, ಅಗತ್ಯ ಕೆಲಸಗಳಿಗಾಗಿ ಖಾಸಗಿ ವಾಹನಗಳ ಮೊರೆ ಹೋಗುವ ಸ್ಥಿತಿ ಎದುರಾಗಿದೆ.

ಹಿರೇಕೆರೂರು ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಬೈಕ್ ನಿಲುಗಡೆ ಮಾಡಿರುವುದು
ಹಿರೇಕೆರೂರು ಬಸ್ ನಿಲ್ದಾಣದಲ್ಲಿ ಹದಗೆಟ್ಟಿರುವ ಶುದ್ಧ ಕುಡಿಯುವ ನೀರಿನ ಘಟಕ 

ಶೌಚಾಲಯದ ಬಾಗಿಲನ್ನು ಬಹುಬೇಗ ಬಂದ್ ಮಾಡುತ್ತಾರೆ. ಜನರು ಬಯಲಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ನಿಲ್ದಾಣದ ಆವರಣ ಶೌಚಾಲಯದಲ್ಲಿ ದುರ್ನಾತವೇ ಹೆಚ್ಚಿದೆ

ನಯಾಜ್ ಖಾನ್ ಹೊನ್ನಾಳಿ ಹಿರೇಕೆರೂರು ನಿವಾಸಿ

‘ನಿಲ್ದಾಣದ ಆವರಣದಲ್ಲಿ ಸಾವು’ ‘ಹಿರೇಕೆರೂರು ನಿಲ್ದಾಣದಲ್ಲಿ ಭದ್ರತೆಗೆ ಸಿಬ್ಬಂದಿ ಇದ್ದಾರೆ. ಆದರೆ ಅವರು ಭದ್ರತೆ ನೀಡುವ ಕೆಲಸ ಮಾಡುತ್ತಿಲ್ಲ. ಅವರು ಇದ್ದೂ ಇಲ್ಲದಂತಾಗಿದೆ. ಸರಿಯಾದ ಭದ್ರತೆ ಇಲ್ಲದೆ ಬಸ್ ನಿಲ್ದಾಣದ ಆವರಣದಲ್ಲಿ ಹೋದ ತಿಂಗಳು ಒಬ್ಬರು ಮೃತಪಟ್ಟಿದ್ದರು. ಆದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಬಸ್‌ ನಿಲ್ದಾಣ; ಆಸನ ಕೊರತೆ

ಪ್ರತಿ ದಿನ ಸಾವಿರಾರು ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಬಂದು ಹೋಗುತ್ತಾರೆ. ಪ್ರಯಾಣಿಕರ ಸಂಖ್ಯೆಗೆ ತಕ್ಕಷ್ಟು ಆಸನಗಳಿಲ್ಲ. ಇರುವ ಆಸನಗಳು ಹಾಳಾಗಿವೆ. ಪ್ರಯಾಣಿಕರು ನಿಂತುಕೊಂಡೇ ಬಸ್‌ಗಾಗಿ ಕಾಯುವ ಸ್ಥಿತಿಯಿದೆ.  ನಿಲ್ದಾಣದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆಯಿಲ್ಲ. ಎಲ್ಲೆಂದರಲ್ಲಿ ಬೈಕ್‌ಗಳನ್ನು ನಿಲ್ಲಿಸಲಾಗುತ್ತಿದ್ದು ಇದರಿಂದಲೂ ಪ್ರಯಾಣಿಕರು ತೊಂದರೆ ಆಗುತ್ತಿದೆ. ನಿಲ್ದಾಣದಲ್ಲಿರುವ ಶೌಚಾಲಯ ತೀರಾ ಹದಗೆಟ್ಟಿದೆ.‌ ಸಾರ್ವಜನಿಕ ಶೌಚಾಲಯದಲ್ಲಿ ನಿಗದಿಗಿಂತ ಹೆಚ್ಚು ಹಣ ಪಡೆಯುತ್ತಿರುವ ಆರೋಪವೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.