ಶಿಗ್ಗಾವಿ ತಾಲ್ಲೂಕಿನ ಚಿಕ್ಕಬೆಂಡಿಗೇರಿ ಗ್ರಾಮದಲ್ಲಿ ಸತತ ಮಳೆಯಿಂದ ಹತ್ತಿ ಬೆಳೆ ಮಳೆ ನೀರು ನಿಂತು ಜವಳು ಹಿಡಿದು ನಾಶವಾಗಿದೆ
ಶಿಗ್ಗಾವಿ: ಪ್ರಸಕ್ತ ವರ್ಷ ಸತತವಾಗಿ ಮಳೆ ಸುರಿದ ಪರಿಣಾಮವಾಗಿ ಮುಂಗಾರು ಬೆಳೆಗಳು ಸಂಪೂರ್ಣ ಜಲಾವೃತ್ತಗೊಂಡು, ಜವಳು ಹಿಡಿದು ಬೆಳೆಗಳು ಹಾನಿಯಾಗುತ್ತಿವೆ. ರೈತರು ಬೆಳೆಹಾನಿ, ಬೆಳೆ ವಿಮೆ ಪರಿಹಾರ ಪಡೆಯಲು ಪರದಾಡುವಂತಾಗಿದೆ. ತಾಲ್ಲೂಕಿನ ರೈತ ಸಮೂಹದಲ್ಲಿ ಆತಂಕದ ಛಾಯೆ ಮೂಡಿದೆ.
ಮೇ ತಿಂಗಳ ಕೊನೆ ವಾರದಲ್ಲಿ ಮುಂಗಾರು ಮಳೆ ಆರಂಭವಾಗಿತ್ತು. ಋತುಮಾನದ ತಕ್ಕಂತೆ ಮಳೆ ಆರಂಭವಾಗಿದೆ. ಪ್ರಸಕ್ತ ವರ್ಷ ಮುಂಗಾರು ಬೆಳೆ ಉತ್ತಮ ಫಸಲನ್ನು ಪಡೆಯುತ್ತೇವೆ ಎಂಬ ಬಹು ನಿರೀಕ್ಷೆಯಲ್ಲಿ ರೈತರು ಇದ್ದರು. ಆದರೆ ಕಳೆದ ಮೂರು ತಿಂಗಳಿಂದ ಸತತವಾಗಿ ಮಳೆ ಸುರಿದ ಪರಿಣಾಮ ಬೆಳೆದು ನಿಂತ ಬೆಳೆ ಹಾನಿ ಅನುಭವಿಸುವಂತಾಗಿದೆ. ತಾಲ್ಲೂಕಿನ ಒಟ್ಟು ಭೂ ವಿಸ್ತೀರ್ಣದಲ್ಲಿ ಶೇ 70ರಷ್ಟು ಒಣ ಬೇಸಾಯಿ ಪದ್ದತಿ ಅಳವಡಿಸಿದ್ದಾರೆ. ಹೀಗಾಗಿ ಮಳೆ ಆಶ್ರಿತ ಬೆಳೆಯನ್ನೇ ಹೆಚ್ಚಿನ ರೈತರು ಅವಲಂಬಿತರಾಗಿದ್ದಾರೆ. ಬೆಳೆ ಬಾರದೆ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮುಂಗಾರು ಬೆಳೆಗಳಾದ ಶೇಂಗಾ, ಹತ್ತಿ, ಭತ್ತ, ಗೋವಿನಜೋಳ, ಸೋಯಾಬಿನ್, ಹೆಸರು ಸೇರಿದಂತೆ ಹಲವು ಬೆಳೆಗಳು ಮಳೆ ನೀರಿನಲ್ಲಿ ನಿಂತು ಹಾನಿಯಾಗಿವೆ. ಈ ಕುರಿತು ಬೆಳಹಾನಿ ಸರ್ವೇ ಕಾರ್ಯ ಕೈಗೊಳ್ಳಬೇಕು. ಅಧಿಕಾರಿಗಳು ಬೆಳೆಹಾನಿಯಾದ ಸ್ಥಳಗಳಿಗೆ ಭೇಟಿ ನೀಡಿ ಸಮೀಕ್ಷೆ ಮಾಡಿಸಬೇಕಿದೆ. ಹಾನಿಯಾದ ರೈತನಿಗೆ ನ್ಯಾಯ ಸಿಗಬೇಕು ಎಂದು ರೈತ ಸಂಘಟನೆಗಳು ತಹಶೀಲ್ದಾರರಿಗೆ ಈಗಾಗಲೆ ಮನವಿ ಮಾಡಿದ್ದಾರೆ. ಆದರೂ ಯಾವುದೇ ಹಾನಿ ಸರ್ವೇ ಕಾರ್ಯಕೈಗೊಂಡಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸಿದರು.
‘ತಾಲ್ಲೂಕಿನ ಬಂಕಾಪುರ, ಕೋಣನಕೇರಿ, ದುಂಢಸಿ, ಹುಲಸೋಗಿ, ಹಿರೇಬೆಂಡಿಗೇರಿ, ಕಡಳ್ಳಿ, ಚಿಕ್ಕಬೆಂಡಿಗೇರಿ, ಪಾಣಿಗಟ್ಟಿ, ಹುಲಗೂರ, ಚಿಕ್ಕಮಲ್ಲೂರು, ಹಿರೇಮಲ್ಲೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಮಳೆ ನೀರಿನಿಂದ ಸುಮಾರು 70 ಸಾವಿರ ಎಕರೆಗಿಂತ ಹೆಚ್ಚಿನ ಜಮೀನನಲ್ಲಿ ಬೆಳೆದ ಬೆಳೆ ಸಂಪೂರ್ಣ ಮಣ್ಣು ಪಾಲಾಗಿ ಹೋಗಿದೆ. ಮಳೆ ನೀರಿನಿಂದ ಬದುಗಳು ಒಡೆದು ಹೋಗಿವೆ. ಹಾನಿಯಾದ ರೈತರು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರು ಸಹ ಯಾವುದೇ ಅಧಿಕಾರಿಗಳು ಬೆಳೆಹಾನಿ ಸಮೀಕ್ಷೆ ನಡೆಸಿಲ್ಲ. ಹೀಗಾಗಿ ಕೆಲವು ರೈತರು ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಿಸಿ ನಾಶ ಪಡಿಸಿದ್ದಾರೆ’ ಎಂದು ರೈತ ಮುಖಂಡ ಶಂಕರಗೌಡ ಪಾಟೀಲ ತಿಳಿಸಿದರು.
******
ಪ್ರತಿವರ್ಷ ಅತೀವೃಷ್ಟಿ ಅನಾವೃಷ್ಟಿಗೆ ಸಿಲುಕಿ ರೈತರು ಆರ್ಥಿಕವಾಗಿ ಕುಗ್ಗಿ ಹೋಗಿದ್ದಾರೆ. ಕುಟುಂಬ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ಶೀಘ್ರ ಬೆಳೆಹಾನಿ ಪರಿಹಾರ ಕೊಡಬೇಕು
-ಶಂಕರಗೌಡ ಪಾಟೀಲ ಚಿಕ್ಕಮಲ್ಲೂರ ರೈತ ಮುಖಂಡ
ಸರ್ಕಾರಕ್ಕೆ ಬೆಳೆಹಾನಿ ವರದಿ ‘ಬೆಳೆಹಾನಿ ಕುರಿತು ಸದ್ಯದಲ್ಲಿ ಕಂದಾಯ ಕೃಷಿ ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ಪರಿಶೀಲನೆ ನಡೆಸಲಾಗುವುದು. ಅಲ್ಲದೆ ಮನೆಹಾನಿ ಆಗಿರುವುದನ್ನು ಕಂದಾಯ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಸೇರಿ ಜಂಟಿಯಾಗಿ ಪರಿಶೀಲನೆ ಹಮ್ಮಿಕೊಳ್ಳಲಾಗುವುದು. ಹಾನಿಯಾಗಿರುವ ಕುರಿತು ತಕ್ಷಣ ಸರ್ಕಾರದ ವರದಿ ಕಳುಹಿಸಲಾಗುತ್ತಿದೆ. ಸಾರ್ವಜನಿಕರು ಸಹಕರಿಸಬೇಕು’ ಎಂದು
-ಶಿಗ್ಗಾವಿ ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣನವರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.