
ಶಿಗ್ಗಾವಿ: ‘ಬಡತನ ನಿರ್ಮೂಲನೆಗೆ ಉಚಿತ ಸರ್ವ ಧರ್ಮ ಸಾಮೂಹಿಕ ವಿವಾಹ ಹಮ್ಮಿಕೊಳ್ಳುವ ಕಾರ್ಯ ಶ್ರೇಷ್ಠವಾಗಿದೆ. ಅದರಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕು ಮೂಲಕ ಜನರ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಲು ಸಾಧ್ಯ. ಉಚಿತ ಮುಸ್ಲಿಂ ಸಮುದಾಯದ ಸಾಮೂಹಿಕ ಸರಳ ವಿವಾಹಗಳಲ್ಲಿ ಎಲ್ಲರೂ ಸೇರುವಂತಾಗಬೇಕು’ ಎಂದು ಶಿಗ್ಗಾವಿ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಬಂಕಾಪುರ ಪಟ್ಟಣದ ಹಜರತ್ ಸೈಯದ್ ಅಲ್ಲಾವುದ್ದೀನ್ ಶಾಹ ಖಾದ್ರಿ ದರ್ಗಾದಲ್ಲಿ ಶನಿವಾರ ಖ್ವಾಜಾ ಎ ಹಿಂದ್ ಕಮಿಟಿ ವತಿಯಿಂದ ಹಜರತ್ ಖ್ವಾಜಾ ಗರೀಬ ನವಾಜ ಅವರ ಉರುಸ್ ಮುಬಾರಕ್ ಅಂಗವಾಗಿ ನಡೆದ ಮುಸ್ಲಿಂ ಸಮುದಾಯದ ಉಚಿತ ಸಾಮೂಹಿಕ ಸರಳ ವಿವಾಹದ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಮಾಜದಲ್ಲಿನ ಕೆಲವು ಮೌಢ್ಯಗಳು ದೂರಾಗಬೇಕು. ಸರ್ವ ಸಮುದಾಯದಲ್ಲಿ ಎಲ್ಲರೂ ಒಂದೇ ಎಂಬ ಭಾವನೆ ಮೂಡಬೇಕು ಎಂದರು.
ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಮಾತನಾಡಿ, ‘ಸುಮಾರು ವರ್ಷಗಳಿಂದ ನೆರವೇರಿಸಿಕೊಂಡು ಬರುತ್ತಿರುವ ಸಾಮೂಹಕ ವಿವಾಹಗಳ ಕಾರ್ಯದಲ್ಲಿ ಕಮಿಟಿ ಸೇವೆ ಅಪಾರವಾಗಿದೆ. ಅದರಿಂದ ಮೌಲ್ಯಾಧಾರಿತ ಬದುಕು ಸಾಗಿಸಲು ಸಾಧ್ಯ. ಸಮಾಜದ ಬಡವರಿಗೆ ಅನುಕೂಲವಾಗುತ್ತಿದೆ. ಕಮಿಟಿ ಸೇವಾ ಕಾರ್ಯಕ್ಕೆ ನಾವು ಬೆಂಬಲವಾಗಿ ನಿಲ್ಲುತ್ತೇವೆ. ಸಮಾಜ ಸೇವಾ ಕಾರ್ಯದಲ್ಲಿ ಪ್ರತಿಯೊಬ್ಬರು ಸೇವಾಧಾರಿಗಳಾಗಿ ಕೆಲಸ ಮಾಡಬೇಕು’ ಎಂದು ತಿಳಿಸಿದರು.
ರಾಜ್ಯ ಗಡಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ, ‘ಸರ್ವ ಧರ್ಮ ಸಾಮೂಹಿಕ ವಿವಾಹಗಳಿಗೆ ಪ್ರೋತ್ಸಾಹ ನೀಡುವ ಕಾರ್ಯವಾಗಬೇಕು. ಇತರ ಸಮಾಜದಂತೆ ಮುಸ್ಲಿಂ ಸಮಾಜದ ಸಾಮೂಹಿಕ ವಿವಾಹ ಕಾರ್ಯ ಮುಖ್ಯವಾಗಿದೆ’ ಎಂದು ಹೇಳಿದರು.
ಖ್ವಾಜಾ ಎ ಹಿಂದ್ ಕಮಿಟಿ ಅಧ್ಯಕ್ಷ ಮಹ್ಮದಖಾನ್ ಕಾಕಡ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ವರರಿಗೆ ಬಟ್ಟೆ, ವಾಚ್, ವಧುವಿಗೆ ಬಟ್ಟೆ ಹಾಗೂ ಗುಂಗಟ ನೀಡಲಾಗುತ್ತಿದೆ. ಸರ್ಕಾರದಿಂದ ನೆರವು ನೀಡಲಾಗುತ್ತಿದೆ. ಅದರಿಂದ ಆರ್ಥಿಕವಾಗಿ ಹಿಂದುಳಿದ ಮುಸ್ಲಿಂ ಸಮುದಾಯದ ಬಡ ಜನರಿಗೆ ಸಹಾಯವಾಗಲಿದೆ’ ಎಂದರು.
ಬಂಕಾಪುರ ಅಂಜುಮನ್ ಎ ಇಸ್ಲಾಂ ಕಮಿಟಿ ಅಧ್ಯಕ್ಷ ಮಹ್ಮದಹುಸೇನ್ ಖತೀಬ, ಹುಬ್ಬಳ್ಳಿ ಹಜರತ್ ಸೈಯದ್ ತಾಜುದ್ದಿನ್ ಪೀರಾ, ಬಂಕಾಪುರ ಹಜರತ್ ಸೈಯದ್ ಕುತುಬ್ ಅಲಂ ಪೀರಾ, ಪುರಸಭೆ ಅಧ್ಯಕ್ಷೆ ಮಮತಾ ಮಾಗಿ, ಸದಸ್ಯ ಅಯೊಬಖಾನ್ ಪಠಾಣ, ಕಮಿಟಿ ಉಪಾಧ್ಯಕ್ಷ ಅಬ್ದುಲಖಾದರ ಲಾಲಾನವರ, ಮಹ್ಮದ್‌ಗೌಸ್ ಜಂಬಗಿ, ಮಹ್ಮದಸಾಧಿಕ ಮನ್ನಂಗಿ, ಮಹ್ಮದ ನೂರುಲ್ಲಾ ಆರ್, ಅಲ್ಲಾವುದ್ದೀನ್ ಚಿಂದಡಿ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.