ADVERTISEMENT

ಹಾನಗಲ್ | ಮಕ್ಕಳಿಗೆ ಹಾಲಿನ ಪುಡಿ ಪೂರೈಕೆ ಸ್ಥಗಿತ: ನಾಲ್ಕು ತಿಂಗಳಿಂದ ಸಮಸ್ಯೆ

ಮಾರುತಿ ಪೇಟಕರ
Published 31 ಜನವರಿ 2025, 5:45 IST
Last Updated 31 ಜನವರಿ 2025, 5:45 IST
ಅಂಗವಾಡಿ ಕೇಂದ್ರಗಳಿಗೆ ಪೂರೈಸುತ್ತಿದ್ದ ಹಾಲಿನ ಪುಡಿ ಪೊಟ್ಟಣ
ಅಂಗವಾಡಿ ಕೇಂದ್ರಗಳಿಗೆ ಪೂರೈಸುತ್ತಿದ್ದ ಹಾಲಿನ ಪುಡಿ ಪೊಟ್ಟಣ   

ಹಾನಗಲ್: ತಾಲ್ಲೂಕಿನ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ನಾಲ್ಕು ತಿಂಗಳಿನಿಂದ ಹಾಲಿನ ಪುಡಿ ಹಾಗೂ ಸಕ್ಕರೆ ಪೂರೈಕೆಯಾಗದಿದ್ದರಿಂದ, ಮಕ್ಕಳು ಹಾಲಿನಿಂದ ವಂಚಿತರಾಗಿದ್ದಾರೆ.

‘ಅನುದಾನದ ಕೊರತೆಯಿಂದ ಹಾಲಿನ ಪುಡಿ ಹಾಗೂ ಸಕ್ಕರೆ ಸರಬರಾಜು ಆಗುತ್ತಿಲ್ಲ’ ಎಂದು ಶಿಶು ಅಭಿವೃದ್ಧಿ ಇಲಾಖೆಯವರು ಹೇಳುತ್ತಿದ್ದು, ನಿತ್ಯವೂ ಅಂಗನವಾಡಿಗಳಲ್ಲಿ ಹಾಲು ತಯಾರಿಯೂ ಬಂದ್ ಆಗಿದೆ.

ಕೆಎಂಎಫ್‌ನಿಂದ ಹಾಲಿನ ಪುಡಿ ಹಾಗೂ ಸಕ್ಕರೆ ಸರಬರಾಜು ಆಗುತ್ತಿತ್ತು. 2024ರ ಸೆಪ್ಟಂಬರ್‌ನಿಂದಲೇ ಹಾಲಿನ ಪುಡಿ ಮತ್ತು ಸಕ್ಕರೆ ಸರಬರಾಜು ಸ್ಥಗಿತಗೊಳಿಸಲಾಗಿದೆ. ಹೀಗಾಗಿ, ತಾಲ್ಲೂಕಿನ ಅಂಗನವಾಡಿ ಕೇಂದ್ರಗಳ ಮಕ್ಕಳು ಮತ್ತು ಗರ್ಭಿಣಿ, ಬಾಣಂತಿಯರಿಗೆ ಕೆನೆಬರಿತ ಹಾಲು ಮತ್ತು ಸಕ್ಕರೆ ಲಭ್ಯವಾಗುತ್ತಿಲ್ಲ.

ADVERTISEMENT

ತಾಲ್ಲೂಕಿಗೆ ಸರಾಸರಿ ಪ್ರತಿ ತಿಂಗಳು 9 ಟನ್‌ ಹಾಲಿನ ಪುಡಿ ಮತ್ತು 4 ಟನ್‌ ಸಕ್ಕರೆ ಬೇಡಿಕೆಯಿದೆ. ಹಾನಗಲ್‌ ತಾಲ್ಲೂಕಿನ ಅಂಗನವಾಡಿಗೆ ಪೂರೈಸಬೇಕಿದ್ದ ಹಾಲಿನ ಪುಡಿ ಮತ್ತು ಸಕ್ಕರೆಯ ಹಣವನ್ನು ಕೆಎಂಎಫ್‌ಗೆ ತುಂಬಿಲ್ಲ. 

‘2024ರ ಆಗಸ್ಟ್‌ ತಿಂಗಳಿನಲ್ಲಿ ಕೊನೆಯದಾಗಿ ಹಾಲಿನ ಪುಡಿ ಹಾಗೂ ಸಕ್ಕರೆ ಬಂದಿತ್ತು. ಅದಾದ ನಂತರ, ಎರಡೂ ಬಂದಿಲ್ಲ. ಪಕ್ಕದ ತಾಲ್ಲೂಕುಗಳಲ್ಲಿ ಇದರ ಪೂರೈಕೆಯಲ್ಲಿ ವ್ಯತ್ಯಯವಾಗಿಲ್ಲ. ಹಾನಗಲ್ ತಾಲ್ಲೂಕಿನಲ್ಲಿ ಮಾತ್ರ ಅನುದಾನದ ಕೊರತೆ ಇರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ಅಂಗನವಾಡಿ ಕಾರ್ಯಕರ್ತೆಯರು ಹೇಳುತ್ತಿದ್ದಾರೆ.

‘ಹಾಲಿನ ಪುಡಿ ಖರೀದಿಸಿದ್ದಕ್ಕಾಗಿ ಕೆಎಂಎಫ್‌ಗೆ ₹ 102 ಲಕ್ಷ ಪಾವತಿಸಬೇಕಿತ್ತು. ಈ ಹಣ ಪಾವತಿ ಮಾಡದಿದ್ದರಿಂದ, ಹಾಲಿನ ಪುಡಿ ಹಾಗೂ ಸಕ್ಕರೆ ಪೂರೈಕೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಸದ್ಯ ₹ 44 ಲಕ್ಷ ಭರಿಸಲಾಗಿದೆ. ಜನವರಿಯಲ್ಲಿ ಕೆಲ ಅಂಗನವಾಡಿಗಳಿಗೆ ಹಾಲಿನ ಪುಡಿ ಬರುವ ನಿರೀಕ್ಷೆಯಿದೆ’ ಎಂದಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯೊಬ್ಬರು, ‘ಜನವರಿ ಮುಗಿಯುತ್ತ ಬಂದಿದೆ. ಹಾಲಿನಪುಡಿ ಮತ್ತು ಸಕ್ಕರೆ ಪೂರೈಕೆಯಾಗಿಲ್ಲ. ನಮಗೆ ಎರಡು ತಿಂಗಳಿನಿಂದ ವೇತನವೂ ಸಿಕ್ಕಿಲ್ಲ. ಡಿಸೆಂಬರ್‌ ಮತ್ತು ಜನವರಿ ತಿಂಗಳ ಮೊಟ್ಟೆ ಹಣವನ್ನೂ ಕೊಟ್ಟಿಲ್ಲ. ಕಳೆದ ವರ್ಷ ಏಪ್ರಿಲ್‌ನಿಂದ ಇಲ್ಲಿಯತನಕ ಅಡುಗೆ ಅನಿಲ ಸಿಲಿಂಡರ್‌ ಬಿಲ್‌ ಸಹ ಬಾಕಿ ಉಳಿದಿದೆ’ ಎಂದು ಅಳಲು ತೋಡಿಕೊಂಡಿದ್ದಾರೆ.

ಅನುದಾನದ ಕೊರತೆ ನೆಪ ₹ 102 ಲಕ್ಷ ಬಿಲ್ ಬಾಕಿ ಸದ್ಯ ₹ 44 ಲಕ್ಷ ಪಾವತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.