ADVERTISEMENT

ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ: ಬಿ.ಸಿ.ಪಾಟೀಲ ವ್ಯಂಗ್ಯ

ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಕೃಷಿ ಸಚಿವ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 12:27 IST
Last Updated 24 ನವೆಂಬರ್ 2020, 12:27 IST
ಬಿ.ಸಿ.ಪಾಟೀಲ, ಕೃಷಿ ಸಚಿವ 
ಬಿ.ಸಿ.ಪಾಟೀಲ, ಕೃಷಿ ಸಚಿವ    

ಹಾವೇರಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಪದೇ ಪದೇ ಬಾಂಬ್‌ ಸಿಡಿಸಿದ್ದರಿಂದ, ಶಿರಾ ಮತ್ತು ಆರ್‌.ಆರ್‌.ನಗರ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ನೆಲ ಕಚ್ಚಿತು. ‘ಜಟ್ಟಿ ನೆಲಕ್ಕೆ ಬಿದ್ರು ಮೀಸೆ ಮಣ್ಣಾಗಲಿಲ್ಲ’ ಅನ್ನೋ ಮನೋಭಾವ ಅವರದ್ದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ವ್ಯಂಗ್ಯವಾಡಿದರು.

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಬಿಜೆಪಿಯ ಕೆಲ ಶಾಸಕರು ಕಾಂಗ್ರೆಸ್‌ ಸೇರಲಿದ್ದಾರೆ’ ಎಂಬ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ, ಶಿವಕುಮಾರ್‌ ಹೇಳಿಕೆ ಸತ್ಯಕ್ಕೆ ದೂರವಾದದ್ದು. ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ಈಗ‌ ಮೀನಮೇಷ ಎಣಿಸುತ್ತಿದೆ. ಕಾಂಗ್ರೆಸ್‌ ರಾಷ್ಟ್ರಮಟ್ಟದಲ್ಲಿ ನೆಲಕಚ್ಚಿ ಹೋಗಿದೆ ಎಂದು ಟೀಕಿಸಿದರು.

ಕಾಂಗ್ರೆಸ್‌ ನಾಯಕನನ್ನು ಮಣಿಸಲು ಬಿಜೆಪಿ ಸಿಬಿಐ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವ ಆರೋಪಕ್ಕೆ, ‘ಮಾಡಿದ್ದುಣ್ಣೋ ಮಾರಾಯ’ ಎಂಬಂತೆ ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಆಡಳಿತ ಪಕ್ಷದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದರು.

ADVERTISEMENT

ಸುಳ್ಳಾದ ಭವಿಷ್ಯ:

ಕೋಡಿಹಳ್ಳಿ ಶ್ರೀಗಳ ರಾಜಕೀಯ ವಿಪ್ಲವ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಒಮ್ಮೆ ಕೋಡಿಹಳ್ಳಿ ಶ್ರೀಗಳು ನನಗೆ ಭವಿಷ್ಯ ಹೇಳಿದ್ದರು. ‘ನೀವುರಾಜಕೀಯಕ್ಕೆ ಬರಬೇಡಿ, ನಿಮಗೆ ಭವಿಷ್ಯವಿಲ್ಲ’ ಅಂದಿದ್ರು. ಆದರೆ, ನಾನು ನಾಲ್ಕು ಬಾರಿ ಶಾಸಕನಾಗಿದ್ದೇನೆ, ಈಗ ಸಚಿವನಾಗಿದ್ದೇನೆ. ಹಾಗಾದರೆ ಅವರು ಹೇಳಿದ ಭವಿಷ್ಯ ಏನಾಯ್ತು? ಎಲ್ಲವೂ ಭವಿಷ್ಯದ ಮೇಲೆ ನಿರ್ಧಾರವಾಗುವುದಿಲ್ಲ. ಮಾಟ–ಮಂತ್ರ ಮಾಡಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಜನಸೇವೆ, ಜನಸಂಪರ್ಕದಿಂದ ಚುನಾವಣೆ ಗೆಲ್ಲಬಹುದು ಎಂದು ಹೇಳಿದರು.

ವಿಜಯನಗರ ಜಿಲ್ಲೆ ಘೋಷಣೆ ಸ್ವಾಗತಾರ್ಹ:

ಎಲ್ಲ ಶಾಸಕರ ಅಭಿಪ್ರಾಯ ಪಡೆದು ಮುಖ್ಯಮಂತ್ರಿಯವರು ವಿಜಯನಗರ ಜಿಲ್ಲೆ ಘೋಷಣೆ ಮಾಡಿದ್ದಾರೆ. ಈ ಹಿಂದೆ, ಧಾರವಾಡ, ರಾಯಚೂರು, ಕಲ್ಬುರ್ಗಿ, ರಾಯಚೂರು ಜಿಲ್ಲೆಗಳು ವಿಭಜನೆಯಾಗಿವೆ. ಆದರೆ, ವಿಜಯನಗರ ಜಿಲ್ಲೆ ರಚನೆಗೆ ಈಗ ವಿರೋಧ ಯಾಕೆ? ಆಡಳಿತಾತ್ಮಕ ದೃಷ್ಟಿಯಿಂದ ಘೋಷಣೆ ಮಾಡಲಾಗಿದೆ. ಇದು ಸ್ವಾಗತಾರ್ಹ ಎಂದು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.