ಹಾವೇರಿ: ‘ಕೋವಿಡ್ ಸಂಕಷ್ಟ ಕಾಲದಲ್ಲಿ ಜನರಿಗೆ ಆತ್ಮಸ್ಥೈರ್ಯ ತುಂಬಲು ದೀಪ ಬೆಳಗಿಸಿ, ಗಂಟೆ ಮತ್ತು ಜಾಗಟೆ ಬಾರಿಸಿ ಎಂದು ದೇಶದ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಇದನ್ನು ಕಾಂಗ್ರೆಸ್ ಲೇವಡಿ ಮಾಡಿತು. ಹಿಂದೂ ಪದ್ಧತಿಯ ಆಚರಣೆಗಳೆಂದರೆ ಕಾಂಗ್ರೆಸ್‌ಗೆ ಅಲರ್ಜಿ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
ಹಾನಗಲ್‌ನಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ, ಜಗತ್ತಿನಲ್ಲಿ 700 ಕೋಟಿ ಲಸಿಕೆ ಹಾಕಿದ್ದರೆ, ಭಾರತದಲ್ಲಿ 100 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ. ಇಷ್ಟು ದೊಡ್ಡ ಜನಸಂಖ್ಯೆಗೆ ಲಸಿಕೆ ಹಾಕಿದ ಸಾಧನೆ ಭಾರತದ್ದು. ಇದನ್ನೂ ಸಿದ್ದರಾಮಯ್ಯನವರು ಟೀಕಿಸುತ್ತಾರೆ. ಮೋದಿ ಅವರನ್ನು ವಿರೋಧಿಸುವ ಭರದಲ್ಲಿ ದೇಶದ ಸಾಧನೆಯನ್ನೇಕೆ ವಿರೋಧಿಸುತ್ತೀರಿ?. ದೇಶವನ್ನೇ ವಿರೋಧಿಸಲು ಹೇಸದ ಜನ ಇವರು ಎಂದು ವಾಗ್ದಾಳಿ ನಡೆಸಿದರು.
ಕೊರೊನಾ ಲಾಕ್‌ಡೌನ್ ಆದ ಆರಂಭದಲ್ಲೇ ಮೋದಿ ಅವರು ‘ಭಾರತೀಯ ಲಸಿಕೆ’ ಸಂಶೋಧನೆಯಾಗದಿದ್ದರೆ ಕೋವಿಡ್ ನಿರ್ವಹಣೆ ಕಷ್ಟವಾಗುತ್ತದೆ ಎಂದು ಸಂಸದೀಯ ಸಭೆಯಲ್ಲಿ ಹೇಳಿದ್ದರು. ನಂತರ ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿ, ದೇಶದಲ್ಲೇ ಲಸಿಕೆ ಉತ್ಪಾದನೆಗೆ ಪ್ರೋತ್ಸಾಹ ನೀಡಿದರು. ಹೀಗಾಗಿ ದೇಶದ ಜನರು ಕೊರೊನಾದಿಂದ ಪಾರಾಗಿದ್ದಾರೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಕಾಂಗ್ರೆಸ್ ನಾಯಕರು ದೊಡ್ಡದಾಗಿ ಮಾತನಾಡುತ್ತಾರೆ. ಎರಡೂವರೆ ವರ್ಷಗಳಿಂದ ಎಐಸಿಸಿಗೆ ಅಧ್ಯಕ್ಷರೇ ಇಲ್ಲ. ಸಮರ್ಥ ಅಧ್ಯಕ್ಷರೊಬ್ಬರನ್ನು ನೇಮಿಸಿ ಎಂದು ಹೇಳಿದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ಗುಲಾಂ ನಬಿ ಆಜಾದ್ ಅವರನ್ನು ಹೊರಹಾಕಿದರು ಎಂದು ಕುಟುಕಿದರು.
ಕಗ್ಗತ್ತಲತ್ತ ಕರ್ನಾಟಕವಾಗುತ್ತಿದೆ. ರಾಜ್ಯದವರೇ ಕಲ್ಲಿದ್ದಲು ಸಚಿವರಿದ್ದರೂ ಯಾವ ಪ್ರಯೋಜನವೂ ಇಲ್ಲ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ, ಮಳೆಗಾಲದಲ್ಲಿ ಕಲ್ಲಿದ್ದಲು ಸಾಗಣೆ ತೊಡಕಾಗುತ್ತದೆ. ಹೀಗಾಗಿ ಕಲ್ಲಿದ್ದಲು ಸಂಗ್ರಹಕ್ಕೆ ಸೂಚನೆ ನೀಡಿದ್ದೆವು. ಆದರೆ. ಕಾಂಗ್ರೆಸ್ ಆಡಳಿತವಿರುವ ಮಹಾರಾಷ್ಟ್ರ ಮತ್ತು ಪಂಜಾಬ್ ರಾಜ್ಯಗಳಲ್ಲಿ ಸಂಗ್ರಹ ಮಾಡಲು ಆಸಕ್ತಿ ತೋರಲಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.