ADVERTISEMENT

ಹಾವೇರಿ | ಮೊಬೈಲ್ ನ್ಯೂನತೆ; ಕಂಪನಿಗೆ ದಂಡ

​ಪ್ರಜಾವಾಣಿ ವಾರ್ತೆ
Published 24 ಮೇ 2023, 15:54 IST
Last Updated 24 ಮೇ 2023, 15:54 IST

ಹಾವೇರಿ: ಮೊಬೈಲ್ ಸೇವಾ ನ್ಯೂನತೆಗೆ ಗ್ರಾಹಕನಿಗೆ ಮೊಬೈಲ್ ಖರೀದಿ ಮೊತ್ತವನ್ನು ಬಡ್ಡಿಸಹಿತ ಪಾವತಿಸುವಂತೆ ಆ್ಯಪಲ್ ಇಂಡಿಯಾ ಪ್ರೈ ಲಿ., ಗ್ರೀನ್ ಮೊಬೈಲ್ಸ್ ಹಾಗೂ ಎಫ್-1 ಇನ್ಫೋಸೊಲೆಷನ್ ಮತ್ತು ಸರ್ವಿ ಪ್ರೈ ಲಿ.ಗೆ ಹಾವೇರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ನೀಡಿದೆ.

ನಗರದ ನಿವಾಸಿ ಉಮೇಶ ಮಲ್ಲಿಕಾರ್ಜುನ ಸಾತೇನಹಳ್ಳಿ ಅವರು ಖರೀದಿಸಲು ಉದ್ದೇಶಿಸಿರುವ ಮೊಬೈಲ್ ಬಗ್ಗೆ ಮಹಾರಾಷ್ಟ್ರ ರಾಜ್ಯದ ಠಾಣೆ ಜಿಲ್ಲೆಯ ವಾಶ್ರೀ ಗ್ರಾಮದ ಗ್ರೀನ್ ಮೊಬೈಲ್ಸ್ ಕಚೇರಿ ವ್ಯವಸ್ಥಾಪಕರಿಂದ ಮಾಹಿತಿ ಪಡೆದಿದ್ದರು. 28 ಅಕ್ಟೋಬರ್ 2021 ರಂದು ₹32,990ಕ್ಕೆ ಅಮೆಜಾನ್ ಕಂಪನಿಯಿಂದ Apple Iphone XR (64 GB) black l BOL8CDPP6-HSN:8517 ಮಾದರಿ ಮೊಬೈಲ್ ಖರೀದಿಸಿದ್ದರು. ಮೊಬೈಲ್ ಬಳಕೆ ಸಮಯದಲ್ಲಿ ನೆಟ್‌ವರ್ಕ್ ಸಮಸ್ಯೆ, ಅಟೋಮೆಟಿಕ್ ಕಾಲ್ ಕಟ್, ಕಾಲ್ ಆನ್- ಆಫ್, ಸ್ಪೀಕರ್ ಸಮಸ್ಯೆ ಹಾಗೂ ಡಿಸ್‌ಪ್ಲೇ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳು ಕಂಡು ಬಂದಿದ್ದವು. ದುರಸ್ಥಿಗೆ ಮೊಬೈಲ್‌ನ್ನು ನಾಲ್ಕು ಬಾರಿ ಎಫ್-1 ಇನ್ಫೋಸೊಲೆಷನ್ ಮತ್ತು ಸರ್ವಿಸ್ ಪ್ರೈ ಲಿ. ಹುಬ್ಬಳ್ಳಿ ಶಾಖೆಗೆ ನೀಡಿದರೂ ಫೋನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಮೊಬೈಲ್ ಫೋನ್ ಬದಲಾಯಿಸಲು ವಿನಂತಿಸಿ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ. ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿದ್ದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷ ಈಶ್ವರಪ್ಪ ಬಿ.ಎಸ್ ಹಾಗೂ ಸದಸ್ಯೆ ಉಮಾದೇವಿ ಹಿರೇಮಠ ವಿಚಾರಣೆ ನಡೆಸಿ, ಗ್ರಾಹಕರು ಮೊಬೈಲ್ ಖರೀದಿಗೆ ನೀಡಿದ ₹32,999ಗೆ ಶೇ6 ಬಡ್ಡಿಯೊಂದಿಗೆ ಹಣ ಪಾವತಿಸಬೇಕು. ಮಾನಸಿಕ ಮತ್ತು ದೈಹಿಕ ವ್ಯಥೆಗೆ ₹2ಸಾವಿರ ಹಾಗೂ ಪ್ರಕರಣಕ್ಕೆ ಮಾಡಿದ ಖರ್ಚು ₹2ಸಾವಿರ 30 ದಿನದೊಳಗೆ ಪಾವತಿಸಲು ಆದೇಶಿಸಿದ್ದಾರೆ. ಪರಿಹಾರ ಪಾವತಿ ವಿಳಂಬವಾದಲ್ಲಿ ವಾರ್ಷಿಕ ಶೇ 9ರಂತೆ ಬಡ್ಡಿ ಸಮೇತ ಪಾವತಿಸಬೇಕು ಎಂದು ಸೂಚನೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.