
ಕಡತ
(ಸಾಂದರ್ಭಿಕ ಚಿತ್ರ)
ರಾಣೆಬೆನ್ನೂರು: ಕಟ್ಟಡ ಪರವಾನಿಗೆಗೆ ಸಂಬಂಧಪಟ್ಟ ದಾಖಲೆಗಳನ್ನು ಪಡೆಯದ ಹಾಗೂ ತೆರಿಗೆ ಪಾವತಿಸದ ಆರೋಪದಡಿ ನಗರದ ಹಲವು ಖಾಸಗಿ ಶಾಲೆಗಳಿಗೆ ನಗರಸಭೆಯಿಂದ ಇತ್ತೀಚೆಗೆ ನೋಟಿಸ್ ನೀಡಲಾಗಿದ್ದು, ಅದರ ಬೆನ್ನಲ್ಲೇ ಶಾಲೆ–ಕಾಲೇಜು ಆಡಳಿತ ಮಂಡಳಿಗಳು ತೆರಿಗೆ ತುಂಬಲು ಮುಂದಾಗಿವೆ.
ಖಾಸಗಿ ಶಾಲಾ–ಕಾಲೇಜುಗಳ ಆಡಳಿತ ಮಂಡಳಿಗೆ ನೋಟಿಸ್ ನೀಡಿದ್ದ ನಗರಸಭೆಯ ಪೌರಾಯುಕ್ತ ಎಫ್.ವೈ. ಇಂಗಳಗಿ, ನೋಟಿಸ್ ತಲುಪಿದ ಕೂಡಲೇ ನಿಗದಿತ ಸಮಯದೊಳಗೆ ತೆರಿಗೆ ಪಾವತಿ ಮಾಡುವಂತೆ ಎಚ್ಚರಿಕೆ ನೀಡಿದ್ದರು.
ಕೆಲ ಶಾಲೆ–ಕಾಲೇಜುಗಳಿಗೆ ಮೊದಲನೇ ನೋಟಿಸ್ ನೀಡಿದ್ದ ಪೌರಾಯುಕ್ತರು, ಹಲವು ಶಾಲೆಗಳಲ್ಲಿ ಮೂರನೇ ಬಾರಿ ಜ್ಞಾಪನಾ ನೋಟಿಸ್ ಜಾರಿಗೊಳಿಸಿದ್ದರು.
‘ರಾಣೆಬೆನ್ನೂರಿನ ಡೆಲ್ಲಿ ಸೆಂಟ್ರಲ್ ಸ್ಕೂಲ್, ನ್ಯಾಷನಲ್ ಪಬ್ಲಿಕ್ ಸ್ಕೂಲ್, ಸೆಂಟ್ ಲಾರೆನ್ಸ್ ಸ್ಕೂಲ್ ಸೇರಿದಂತೆ ಹಲವು ಖಾಸಗಿ ಶಾಲೆಗಳು ತೆರಿಗೆ ತುಂಬಿಲ್ಲ. ಕಟ್ಟಡ ಪರವಾನಗಿ ದಾಖಲೆಗಳನ್ನು ನೀಡಿಲ್ಲ. ಹೀಗಾಗಿ, ನೋಟೀಸ್ ನೀಡಲಾಗಿತ್ತು. ಈಗ ಹಲವರು ತೆರಿಗೆ ತುಂಬಲು ಮುಂದೆ ಬಂದಿದ್ದಾರೆ. ಅದರ ಪ್ರಕ್ರಿಯೆ ಶುರುವಾಗಿದೆ’ ಎಂದು ಪೌರಯುಕ್ತ ಎಫ್. ವೈ. ಇಂಗಳಗಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಶಾಲೆಯ ಆಡಳಿತ ಮಂಡಳಿಯವರು ನಗರದ ವಿವಿಧ ಭಾಗಗಳಲ್ಲಿ ದೊಡ್ಡ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಆಸ್ತಿ ತೆರಿಗೆ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಹಲವು ಅಂಶಗಳು ಗೊತ್ತಾಗಿದ್ದವು. ಕಟ್ಟಡ ಪರವಾನಿಗೆ ಪತ್ರ, ಕಟ್ಟಡ ಮುಕ್ತಾಯ ಪತ್ರ, ಪ್ರಸಕ್ತ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ, ಕಟ್ಟಡಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸಲು ತಿಳಿವಳಿಕೆ ನೋಟಿಸ್ ನೀಡಲಾಗಿತ್ತು. ಆದರೆ, ಬಹುತೇಕರು ಉತ್ತರ ನೀಡಿಲ್ಲ. ಹೀಗಾಗಿ, ಹಲವರಿಗೆ ಅಂತಿಮ ನೋಟಿಸ್ ಕೊಡಲಾಗಿತ್ತು.
ನಗರಾಭಿವೃದ್ದಿ ಪ್ರಾಧಿಕಾರದಿಂದ ಕಟ್ಟಡ ಪೂರ್ವ ಪ್ರಮಾಣ ಪತ್ರವನ್ನಾಗಲಿ ಅಥವಾ ಮುಕ್ತಾಯ ಪ್ರಮಾಣಪತ್ರವನ್ನಾಗಲಿ ಪಡೆದಿಲ್ಲ. ಶೈಕ್ಷಣಿಕ ಉದ್ದೇಶಕ್ಕಾಗಿ ಏಕ ನಿವೇಶನವನ್ನು ಅನುಮೋದನೆ ಪಡೆದುಕೊಂಡು ಕಾನೂನು ಉಲ್ಲಂಘನೆ ಮಾಡಿರುವ ಆರೋಪವೂ ಇದೆ.
‘ಆಸ್ತಿವಹಿಯಲ್ಲಿ ಸ್ವತ್ತು ಶಾಲೆಯ ಹೆಸರಿನಲ್ಲಿರಬೇಕು. ಶಾಲೆ ಪ್ರಾರಂಭಿಸಲು ಶಿಕ್ಷಣ ಇಲಾಖೆಯಿಂದ ಅನುಮತಿ ಪತ್ರ ಪಡೆದಿರಬೇಕು. ಯಾವ ಶೈಕ್ಷಣಿಕ ಉದ್ದೇಶಕ್ಕಾಗಿ ಸರ್ಕಾರದಿಂದ ಮಾನ್ಯತೆ ಪಡೆಯಲಾಗಿದೆಯೋ ಅದೇ ಉದ್ದೇಶಕ್ಕೆ ಮಾತ್ರ ಉಪಯೋಗಿಸಬೇಕು. ಶಾಲೆ ನಿರ್ಮಾಣದ ಜಾಗ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಗೊಂಡು ಭೂ ಪರಿವರ್ತನೆ ಅಗಿರಬೇಕು. ಪ್ರಾಧಿಕಾರದಿಂದ ಅನೊಮೋದನೆಗೊಂಡ ವಿನ್ಯಾಸ ನಕ್ಷೆಯ ಪ್ರತಿ ಪಡೆದಿರಬೇಕು. ಕಟ್ಟಡ ಪರವಾನಿಗೆ ಪಡೆದಿರಬೇಕು. ನಕ್ಷೆಯಂತೆ ಕಟ್ಟಡ ನಿರ್ಮಿಸಿರಬೇಕು. ಇಂಥ ಹಲವು ಅಂಶಗಳು ಉಲ್ಲಂಘನೆಯಾಗಿರುವುದು ಕಂಡುಬಂದಿದೆ. ಜೊತೆಗೆ, ಅಕ್ರಮವನ್ನು ಒಪ್ಪಿಕೊಂಡು ತೆರಿಗೆ ಪಾವತಿಸಲು ಮುಂದೆ ಬಂದರೆ ಶೇ 25ರಷ್ಟು ರಿಯಾಯಿತಿಯನ್ನೂ ನೀಡಲಾಗುತ್ತಿದೆ’ ಎಂದು ಪೌರಾಯುಕ್ತ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.