ADVERTISEMENT

ಹಿರೇಕೆರೂರು | ಬಾಗಿಲು ತೆರೆಯದ ’ನಮ್ಮ ಕ್ಲಿನಿಕ್‘

ವೈದ್ಯ ನೇಮಕ ವಿಳಂಬ: ಉದ್ಘಾಟನೆಯಾಗದ ಕಿರು ಆಸ್ಪತ್ರೆ

ಶಂಕರ ಕೊಪ್ಪದ
Published 16 ಜುಲೈ 2024, 5:55 IST
Last Updated 16 ಜುಲೈ 2024, 5:55 IST
ಹಿರೇಕೆರೂರು ಆಜಾದ್ ನಗರದಲ್ಲಿ ಬಾಡಿಗೆ ಕಟ್ಟಡದಲ್ಲಿ ಸ್ಥಾಪಿಸಿರುವ ‘ನಮ್ಮ ಕ್ಲಿನಿಕ್’ ಬಾಗಿಲು ಬಂದ್ ಮಾಡಿರುವುದು
ಹಿರೇಕೆರೂರು ಆಜಾದ್ ನಗರದಲ್ಲಿ ಬಾಡಿಗೆ ಕಟ್ಟಡದಲ್ಲಿ ಸ್ಥಾಪಿಸಿರುವ ‘ನಮ್ಮ ಕ್ಲಿನಿಕ್’ ಬಾಗಿಲು ಬಂದ್ ಮಾಡಿರುವುದು   

ಹಿರೇಕೆರೂರು: ಜ್ವರ, ಕೆಮ್ಮು, ನೆಗಡಿ ಹಾಗೂ ಇತರೆ ಸಣ್ಣ–ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಪಟ್ಟಣದಲ್ಲಿ ಎಂಟು ತಿಂಗಳ ಹಿಂದೆ ಸ್ಥಾಪಿಸಿರುವ ‘ನಮ್ಮ ಕ್ಲಿನಿಕ್’ ಇದುವರೆಗೂ ಬಾಗಿಲು ತೆರೆದಿಲ್ಲ.

ವೈದ್ಯ ನೇಮಕಾತಿ ವಿಳಂಬವಾಗಿದ್ದರಿಂದ ನಮ್ಮ ಕ್ಲಿನಿಕ್ ಉದ್ಘಾಟನೆಯಾಗದೇ ಪಾಳು ಬಿದ್ದಿದೆ. ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಮೆಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಆರೋಗ್ಯ ಯೋಜನದಡಿ ನಮ್ಮ ಕ್ಲಿನಿಕ್ ಸ್ಥಾಪಿಸಲಾಗಿದೆ. ಆದರೆ, ಜನರಿಗೆ ಮಾತ್ರ ಸೇವೆ ಲಭ್ಯವಾಗುತ್ತಿಲ್ಲ.

ಪಟ್ಟಣದ ಆಜಾದ್ ನಗರದಲ್ಲಿರುವ ಕಟ್ಟಡವೊಂದಕ್ಕೆ ಯೋಜನೆಯ ಬಣ್ಣ ಹಾಗೂ ಘೋಷಣೆಗಳನ್ನು ಹಚ್ಚಿ ನಮ್ ಕ್ಲಿನಿಕ್ ಸ್ಥಾಪಿಸಲಾಗಿದೆ. ಈ ಕಟ್ಟಡಕ್ಕೆ ಪ್ರತಿ ತಿಂಗಳು ₹10 ಸಾವಿರ ಬಾಡಿಗೆ ಸಹ ನೀಡಲಾಗುತ್ತಿದೆ. ಆದರೆ, ಕಟ್ಟಡ ಮಾತ್ರ ಬಳಕೆಯಾಗುತ್ತಿಲ್ಲವೆಂದು ಸ್ಥಳೀಯರು ದೂರಿದರು.

ADVERTISEMENT

ನಮ್ಮ ಕ್ಲಿನಿಕ್‌ನಲ್ಲಿ ವೈದ್ಯಕೀಯ ಅಧಿಕಾರಿ, ಶುಶ್ರೂಷಕಿ, ಪ್ರಯೋಗಾಲಯ ತಂತ್ರಜ್ಞ ಹಾಗೂ ‘ಡಿ’ ಗ್ರೂಪ್ ನೌಕರ ಕಾರ್ಯನಿರ್ವಹಿಸಬೇಕೆಂಬ ನಿಯಮವಿದೆ. ಆದರೆ, ಆಜಾದ್ ನಗರದಲ್ಲಿರುವ ನಮ್ಮ ಕ್ಲಿನಿಕ್‌ಗೆ ವೈದ್ಯರೇ ಇಲ್ಲ. ಕೆಲ ಸಿಬ್ಬಂದಿ ಮಾತ್ರ ಕೆಲಸಕ್ಕೆ ನಿಯೋಜನೆಗೊಂಡಿದ್ದು, ವೈದ್ಯರಿಲ್ಲದಿದ್ದರಿಂದ ಅವರು ಸಹ ಕ್ಲಿನಿಕ್‌ನತ್ತ ಮುಖ ಮಾಡುತ್ತಿಲ್ಲ.

‘ನಮ್ಮ ಕ್ಲಿನಿಕ್‌ ಸಿದ್ಧವಾದರೂ ಬಾಗಿಲು ತೆರೆಯುತ್ತಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ವಿಷಯ ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ. ವೈದ್ಯರಿಲ್ಲವೆಂಬ ಕಾರಣ ನೀಡಿ ನಮ್ಮ ಕ್ಲಿನಿಕ್ ಉದ್ಘಾಟನೆ ಮಾಡುತ್ತಿಲ್ಲ. ಇದರಿಂದಾಗಿ ನಮ್ಮಂಥ ಬಡವರಿಗೆ ತೊಂದರೆ ಆಗುತ್ತಿದೆ. ಕೂಡಲೇ ನಮ್ಮ ಕ್ಲಿನಿಕ್ ತೆರೆಯಲು ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯ ಮುನ್ನಾ ಕುಪ್ಪೇಲೂರು ಆಗ್ರಹಿಸಿದರು.

‘ಜಾಹೀರಾತು ನೀಡಿದರೂ ಬಾರದ ವೈದ್ಯರು’ ‘ಹಿರೇಕೆರೂರು ಆಜಾದ್ ನಗರದಲ್ಲಿರವ ನಮ್ಮ ಕ್ಲಿನಿಕ್‌ಗೆ ಎಂಬಿಬಿಎಸ್ ವೈದ್ಯರ ಅಗತ್ಯವಿದೆ. ಜಾಹೀರಾತು ನೀಡಿದರೂ ವೈದ್ಯರು ಬರುತ್ತಿಲ್ಲ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ( ಪ್ರಭಾರಿ) ಡಾ.ಜಯಾನಂದ ತಿಳಿಸಿದರು. ನಮ್ಮ ಕ್ಲಿನಿಕ್ ಬಂದ್ ಆಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಯಾರಾದರೂ ಎಂಬಿಬಿಎಸ್ ವೈದ್ಯರು ಬಂದರೆ ಅವರಿಗೆ ತ್ವರಿತವಾಗಿ ಆದೇಶ ಪತ್ರ ನೀಡುತ್ತೇವೆ. ವೈದ್ಯರಿಲ್ಲದಿದ್ದರಿಂದ ನಮ್ಮ ಕ್ಲಿನಿಕ್ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.