ADVERTISEMENT

ಕೋವಿಡ್‌ ಸಂಕಷ್ಟದಲ್ಲಿ ನೆರವಾದ ನರೇಗಾ

‘ನರೇಗಾ ಹಬ್ಬ-2023’ ಕಾರ್ಯಕ್ರಮದಲ್ಲಿ ಸಿಇಒ ಮೊಹಮ್ಮದ್‌ ರೋಶನ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 14:23 IST
Last Updated 7 ಫೆಬ್ರುವರಿ 2023, 14:23 IST
ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ನರೇಗಾ ಹಬ್ಬದಲ್ಲಿ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಸಿಇಒ ಮೊಹಮ್ಮದ್ ರೋಶನ್‌, ಉಪ ಕಾರ್ಯದರ್ಶಿ ಎಸ್‌.ಬಿ.ಮುಳ್ಳಳ್ಳಿ ಇದ್ದಾರೆ 
ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ನರೇಗಾ ಹಬ್ಬದಲ್ಲಿ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಸಿಇಒ ಮೊಹಮ್ಮದ್ ರೋಶನ್‌, ಉಪ ಕಾರ್ಯದರ್ಶಿ ಎಸ್‌.ಬಿ.ಮುಳ್ಳಳ್ಳಿ ಇದ್ದಾರೆ    

ಹಾವೇರಿ: ‘ಕೋವಿಡ್-19 ಸಮಯದ ಸಂಕಷ್ಟದ ಪರಿಸ್ಥಿತಿಯಲ್ಲಿ ಪ್ರತಿ ವ್ಯಕ್ತಿಗೂ ಉದ್ಯೋಗ ನೀಡಿದ ಏಕೈಕ ಯೋಜನೆ, ಉದ್ಯೋಗ ಖಾತ್ರಿ ಯೋಜನೆಯಾಗಿದೆ’ ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ರೋಶನ್‌ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ ಹಾಗೂ ಕರ್ನಾಟಕ ರಾಜ್ಯ ಮಹತ್ಮಾಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ‘ನರೇಗಾ ಹಬ್ಬ-2023’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಾದ್ಯಂತ ನರೇಗಾ ಯೋಜನೆಯಡಿ ಕೈಗೊಂಡ ಬೂದು ನಿರ್ವಹಣಾ ಘಟಕ ಕಾಮಗಾರಿ ಸೇರಿದಂತೆ ಕೆರೆ, ಕುಂಟೆ, ಗೋಕಟ್ಟೆಗಳ ಅಭಿವೃದ್ಧಿ ಕಾರ್ಯಗಳು, ಪೌಷ್ಟಿಕ ತೋಟ ನಿರ್ಮಾಣ ಕಾರ್ಯ, ವಾತ್ಸಲ್ಯ ಕಾರ್ಯಕ್ರಮದ ಪೌಷ್ಟಿಕ ಆಹಾರವನ್ನು ಒದಗಿಸುವುದು ಸೇರಿದಂತೆ ಅನೇಕ ಕೆಲಸ, ಕಾರ್ಯಗಳು ಇಡೀ ರಾಜ್ಯಕ್ಕೆ ಮಾದರಿಯಾಗಿವೆ. ಹಾವೇರಿ ಜಿಲ್ಲೆಯನ್ನು ಮಾದರಿಯಾಗಿ ತೆಗೆದುಕೊಂಡು, ರಾಜ್ಯದ ಎಲ್ಲ ಜಿಲ್ಲೆಗಳ ಕ್ರಿಯಾಯೋಜನೆಯಲ್ಲಿ ಮಾದರಿ ಕಾಮಗಾರಿ ಅಳವಡಿಸಿಕೊಳ್ಳಲಾಗಿದೆ. ಅದು ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದರು.

ADVERTISEMENT

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಊಟ, ನೀರು, ವಸತಿ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಯಾವುದೇ ಕುಂದುಕೊರತೆಯಾಗದಂತೆ ಎಲ್ಲ ಇಲಾಖೆ ಅಧಿಕಾರಿಗಳು ಶ್ರಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿ.ಪಂ. ಉಪ ಕಾರ್ಯದರ್ಶಿ ಎಸ್.ಬಿ. ಮುಳ್ಳಳ್ಳಿ ಮಾತನಾಡಿ, ಬಡವರ ಪರವಾಗಿ, ಬಡ ಕೂಲಿಕಾರ್ಮಿಕರ ಆರ್ಥಿಕ ಶ್ರೇಯೋಭಿವೃದ್ಧಿಹಗಾಗಿ ಮುಂದಡಿಯಿಟ್ಟು ಕೆಲಸ ನಿರ್ವಹಿಸೋಣ. ಉದ್ಯೋಗ ಖಾತ್ರಿ ಯೋಜನೆ ಬಂದ ನಂತರ ಗ್ರಾಮೀಣ ಪ್ರದೇಶದಲ್ಲಿ ಮಹತ್ತರ ಬದಲಾವಣೆಯಾಗಿದೆ. ಕಳೆದ ಎರಡು ವರ್ಷಗಳಿಂದ ಸಿಇಒ ಮೊಹಮ್ಮದ್ ರೋಶನ್ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ 60 ಲಕ್ಷ ಮಾನವ ದಿನಗಳು ಸೃಜನೆಯಾಗಿವೆ. ರಾಜ್ಯದಲ್ಲಿಯೆ ಪ್ರಥಮ ಸ್ಥಾನದಲ್ಲಿದ್ದೇವೆ ಎಂದರು.

ಕ್ಯಾಲೆಂಡರ್, ಡೈರಿ ಬಿಡುಗಡೆ:

ಮಹಾತ್ಮ ಗಾಂಧಿ ರಾಷ್ಟ್ರೀಯ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯ ಹಾಗೂ ಮಹಾತ್ಮ ಗಾಂಧಿ ನರೇಗಾ ನೌಕರರ ಸಂಘದ ಈ ಆರ್ಥಿಕ ವರ್ಷದ ಕ್ಯಾಲೆಂಡರ್ ಹಾಗೂ ಡೈರಿಗಳನ್ನು ಬಿಡುಗಡೆಗೊಳಿಸಿದರು.

ಹಾಡಿಗೆ ಹೆಜ್ಜೆಹಾಕಿದ ಸಿಇಒ: ಕನ್ನಡ ಕೋಗಿಲೆ ಗಾಯಕ ಖಾಸೀಂಅಲಿ, ಬಾಲ ಗಾಯಕಿ ಮಹನ್ಯ ಗುರು ಪಾಟೀಲ್ ಅವರೊಂದಿಗೆ ಸಿಇಒ ಮೊಹಮ್ಮದ್ ರೋಷನ್ ಅವರು ಗೊಂಬೆ ಹೇಳುತೈತೆ, ಮತ್ತೆ ಹೇಳುತೈತೆ ನೀನೇ ರಾಜಕುಮಾರ ಹಾಡು ಸೇರಿದಂತೆ ಹಲವು ಗೀತೆಗಳನ್ನು ಹಾಡಿ, ನೃತ್ಯ ಮಾಡುವ ಮೂಲಕ ಎಲ್ಲರನ್ನು ರಂಜಿಸಿದರು.

ಅಧಿಕಾರಿಗಳಿಗೆ ಸನ್ಮಾನ: ಮಹಾತ್ಮ ಗಾಂಧಿ ನರೇಗಾ ನೌಕರರ ಸಂಘದಿಂದ ಸಿಇಒ ಮೊಹಮ್ಮದ್ ರೋಶನ್ ಹಾಗೂ ಉಪ ಕಾರ್ಯದರ್ಶಿ ಎಸ್.ಬಿ ಮುಳ್ಳಳ್ಳಿ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ನರೇಗಾ ಯೋಜನೆಯ ಯಶಸ್ವಿ ಅನುಷ್ಠಾನ ಮತ್ತು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಿದ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು ಹಾಗೂ ಕುಡಿಯುವ ನೀರು ಮತ್ತು ನೌರ್ಮಲ್ಯ ವಿಭಾಗದ ಅಧಿಕಾರಿಗಳು ಸೇರಿದಂತೆ ಹಲವು ಹಂತದ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.

ರಕ್ತದಾನ ಶಿಬಿರ:

ನರೇಗಾ ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್‌ ರೋಶನ್‌ ಸೇರಿದಂತೆ 50 ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನದ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.