ADVERTISEMENT

ಕೊರೊನಾ ಅನಾಹುತಕ್ಕೆ ಮೋದಿಯೇ ಕಾರಣ: ಎಂ.ಬಿ.ಪಾಟೀಲ ಆರೋಪ

ಮಾಜಿ ಸಚಿವ ಎಂ.ಬಿ.ಪಾಟೀಲ ಆರೋಪ

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 11:32 IST
Last Updated 14 ಜೂನ್ 2021, 11:32 IST
ಎಂ.ಬಿ. ಪಾಟೀಲ, ಬಬಲೇಶ್ವರ ಕ್ಷೇತ್ರದ ಶಾಸಕ
ಎಂ.ಬಿ. ಪಾಟೀಲ, ಬಬಲೇಶ್ವರ ಕ್ಷೇತ್ರದ ಶಾಸಕ   

ಹಾವೇರಿ: ‘ಕೊರೊನಾ ನಿಯಂತ್ರಣ ವಿಷಯದಲ್ಲಿ ತಜ್ಞರ ವರದಿ ಮತ್ತು ವೈಜ್ಞಾನಿಕ ಕ್ರಮಗಳನ್ನು ಕೇಂದ್ರ ಸರ್ಕಾರ ಪಾಲಿಸಲೇ ಇಲ್ಲ. ಸಕಾಲದಲ್ಲಿ ಆಕ್ಸಿಜನ್‌ ಬೆಡ್‌ ಮತ್ತು ಚಿಕಿತ್ಸೆ ಸಿಗದೆ ದೇಶದಲ್ಲಿ ಲಕ್ಷಾಂತರ ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಈ ಕೊರೊನಾ ಅನಾಹುತಕ್ಕೆ ಪ್ರಧಾನಿ ನರೇಂದ್ರ ಮೋದಿಯೇ ಕಾರಣ’ ಎಂದು ಬಬಲೇಶ್ವರ ಕ್ಷೇತ್ರದ ಶಾಸಕ ಎಂ.ಬಿ.ಪಾಟೀಲ ಆರೋಪ ಮಾಡಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಮೋದಿ ಅವರ ಯಡವಟ್ಟು ನೀತಿ ಮತ್ತು ಸರ್ವಾಧಿಕಾರಿ ಧೋರಣೆಯಿಂದ ಕೊರೊನಾ ನಿಯಂತ್ರಣ ಮಾಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಲಸಿಕೆ ನೀಡುವಾಗ ಚುನಾವಣೆಗಳಿದ್ದ ರಾಜ್ಯಗಳಿಗೆ ಮೊದಲ ಆದ್ಯತೆ ನೀಡಿದರು. ದೇಶದಲ್ಲಿ ಲಸಿಕೆಗೆ ತೀವ್ರ ಕೊರತೆಯಿದ್ದರೂ, ಬೇರೆ ದೇಶಗಳಿಗೆ ರಫ್ತು ಮಾಡುವ ಮೂಲಕ ಮೋದಿ ಅವರು ‘ವಿಶ್ವಗುರು’ ಎನಿಸಿಕೊಳ್ಳಲು ಹೊರಟರು’ ಎಂದು ಮೂದಲಿಸಿದರು.

‘ಪಿ.ಎಂ ಕೇರ್ಸ್‌ ಫಂಡ್‌’ ಬಗ್ಗೆ ಲೆಕ್ಕ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಎಲ್ಲಿಂದ ಹಣ ಹರಿದುಬಂತು ಮತ್ತು ಯಾವ ಕಾರಣಕ್ಕೆ ಖರ್ಚಾಯಿತು ಎಂಬ ಲೆಕ್ಕವನ್ನೇ ನೀಡದೆ ‘ಸಂವಿಧಾನ ವಿರೋಧಿ ನೀತಿ’ಯನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ. ಕೊರೊನಾ ಬರುವ ಮೊದಲೇ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಈಗ ಕೊರೊನಾದಿಂದ ಆರ್ಥಿಕ ಹಿಂಜರಿತವಾಗಿದೆ ಎಂದು ತಮ್ಮ ಆಡಳಿತ ವೈಫಲ್ಯವನ್ನು ಪ್ರಧಾನಿ ಮುಚ್ಚಿಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

ಸಾವಿನ ಸಂಖ್ಯೆಯಲ್ಲಿ ವ್ಯತ್ಯಾಸ:

ಸರ್ಕಾರ ನೀಡುತ್ತಿರುವ ಕೋವಿಡ್‌ ಸಾವುಗಳ ಅಂಕಿಅಂಶಗಳಿಗಿಂತ ಹತ್ತು ಪಟ್ಟು ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸರ್ಕಾರಿ ಆಸ್ಪತ್ರೆಗಳಿಗೆ ಹೋಗದೆ ಮನೆಗಳಲ್ಲೇ ಮೃಪತಟ್ಟಿರುವವರು ಸರ್ಕಾರಿ ಲೆಕ್ಕಕ್ಕೆ ಸೇರ್ಪಡೆಯಾಗಿಲ್ಲ. ಜನರಿಗೆ ಅಗತ್ಯವಾಗಿ ಬೇಕಾದಷ್ಟು ಲಸಿಕೆಯನ್ನೂ ಉತ್ಪಾದಿಸಲಿಲ್ಲ ಮತ್ತು ಹೊರದೇಶಗಳಿಂದ ಆಮದನ್ನೂ ಮಾಡಿಕೊಳ್ಳಲಿಲ್ಲ ಎಂದು ಟೀಕಿಸಿದರು.

ಕಪ್ಪು ಶಿಲೀಂಧ್ರಕ್ಕೆ ಸಿಗದ ಚಿಕಿತ್ಸೆ:

‘ಕೈಗಾರಿಕಾ ಆಮ್ಲಜನಕವನ್ನು ‘ಮೆಡಿಕಲ್‌ ಆಕ್ಸಿಜನ್’ ಆಗಿ ಸರಿಯಾಗಿ ಪರಿವರ್ತನೆ ಮಾಡಿಲ್ಲ. ಡಿಸ್ಟಿಲ್‌ ವಾಟರ್‌ ಬದಲು ಕೊಳವೆಬಾವಿ ನೀರು ಬಳಸಿದ್ದಾರೆ. ಉಪಕರಣ, ಔಷಧ ಮತ್ತು ಸಿಬ್ಬಂದಿ ಕೊರತೆಯಿಂದ ‘ಕಪ್ಪು ಶಿಲೀಂಧ್ರ’ಕ್ಕೆ ಚಿಕಿತ್ಸೆ ಸಿಗದೆ ಜನರು ಸಾವು–ನೋವು ಅನುಭವಿಸುತ್ತಿದ್ದಾರೆ. ಜನವಿರೋಧಿ ನೀತಿ ಪಾಲಿಸುತ್ತಿರುವ ಬಿಜೆಪಿ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕು ಕಳೆದುಕೊಂಡಿವೆ’ ಎಂದು ವಾಗ್ದಾಳಿ ನಡೆಸಿದರು.

ಬೆಲೆ ಏರಿಕೆ ಬಿಸಿ:

ಕೊರೊನಾ ಲಾಕ್‌ಡೌನ್‌ನಿಂದ ಬಡ ಮತ್ತು ಮಧ್ಯಮ ವರ್ಗದ ಜನರು ತತ್ತರಿಸಿ ಹೋಗಿದ್ದಾರೆ. ಇಂಥ ಸಂಕಷ್ಟದ ಸಮಯದಲ್ಲಿ ಇಂಧನ, ಅಡುಗೆ ಅನಿಲ, ದಿನಸಿ ವಸ್ತು, ವಿದ್ಯುತ್‌ ದರಗಳನ್ನು ಏರಿಕೆ ಮಾಡಿ, ಜನರಿಗೆ ಗಾಯದ ಮೇಲೆ ಬರೆ ಎಳೆದಿದ್ದಾರೆ. ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕಾ, ಬರ್ಮಾ, ನೇಪಾಳ ಮುಂತಾದ ದೇಶಗಳಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ ₹60ರ ಆಸುಪಾಸಿನಲ್ಲಿದೆ. ಆದರೆ, ಭಾರತದಲ್ಲಿ ₹100ರ ಗಡಿ ದಾಟಿದೆ. ಇದು ಆಡಳಿತದ ವೈಫಲ್ಯವಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.

ದೇಶದಲ್ಲಿ 18 ವರ್ಷಕ್ಕೂ ಮೇಲ್ಪಟ್ಟ 100 ಕೋಟಿ ಜನರಿಗೆ ಹಾಗೂ ರಾಜ್ಯದಲ್ಲಿ 5 ಕೋಟಿ ಮಂದಿಗೆ ಶೀಘ್ರ ಕೋವಿಡ್‌ ಲಸಿಕೆ ಹಾಕಿ, ಕೊರೊನಾ ನಿಯಂತ್ರಿಸಲು ಸರ್ಕಾರಗಳು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಸಚಿವರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಮನೋಹರ ತಹಶೀಲ್ದಾರ್‌, ಎ.ಎಂ.ಹಿಂಡಸಗೇರಿ, ಮಾಜಿ ಸಂಸದ ಐ.ಜಿ.ಸನದಿ, ಮಾಜಿ ಶಾಸಕ ಬಿ.ಎಚ್‌.ಬನ್ನಿಕೋಡ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ.ಹಿರೇಮಠ, ಸೋಮಣ್ಣ ಬೇವಿನಮರದ, ಎಸ್‌.ಆರ್‌.ಪಾಟೀಲ, ಪ್ರಕಾಶ ಕೋಳಿವಾಡ, ಡಾ.ಸಂಜಯ ಡಾಂಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.