ಹಾವೇರಿ/ಬ್ಯಾಡಗಿ: ಮೋಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿ–48ರಲ್ಲಿ ನಿರ್ಮಿಸಿರುವ ಮೇಲ್ಸೇತುವೆಗೆ ಚಾಲನೆ ನೀಡುವ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ನಡುವೆ ‘ಪ್ರಚಾರ’ ಪೈಪೋಟಿ ಏರ್ಪಟ್ಟಿದೆ.
ಹೆದ್ದಾರಿ ಪಕ್ಕದಲ್ಲೇ ಮೋಟೆಬೆನ್ನೂರಿದ್ದು, ವಾಹನಗಳ ದಟ್ಟಣೆಯಿಂದ ಸ್ಥಳೀಯ ಜನರ ಓಡಾಟಕ್ಕೆ ಕಷ್ಟವಾಗುತ್ತಿತ್ತು. ಹೀಗಾಗಿ, ಮೇಲ್ಸೇತುವೆ ನಿರ್ಮಿಸುವಂತೆ ಸ್ಥಳೀಯರು ಒತ್ತಾಯಿಸಿದ್ದರು. ಅದರಂತೆ ಮೇಲ್ಸೇತುವೆ ನಿರ್ಮಿಸಲಾಗಿದೆ.
ಹುಬ್ಬಳ್ಳಿಯಿಂದ ಬೆಂಗಳೂರು ಹಾಗೂ ಬೆಂಗಳೂರಿನಿಂದ ಹುಬ್ಬಳ್ಳಿಗೆ ಸಾಗುವ ಎರಡೂ ಮಾರ್ಗದಲ್ಲೂ ಮೇಲ್ಸೇತುವೆ ಮೂಲಕ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ. ಮೇಲ್ಸೇತುವೆಯ ಕೆಳಭಾಗದಲ್ಲಿರುವ ಕೆಳ ಸೇತುವೆಯಲ್ಲಿ ಸ್ಥಳೀಯರ ವಾಹನಗಳ ಓಡಾಟಕ್ಕೆ ಅವಕಾಶವಿದೆ.
ಜುಲೈ 21ರಂದು ಜಿಲ್ಲೆಗೆ ಭೇಟಿ ನೀಡಿದ್ದ ಸಚಿವ ಶಿವಾನಂದ ಪಾಟೀಲ, ಮೇಲ್ಸೇತುವೆಯ ಒಂದು ಮಾರ್ಗದಲ್ಲಿ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಚಾಲನೆ ನೀಡಿ ಹಸಿರು ನಿಶಾನೆ ತೋರಿಸಿ ಫೋಟೊ ತೆಗೆಸಿಕೊಂಡಿದ್ದರು. ಶಾಸಕರಾದ ಬಸವರಾಜ ಶಿವಣ್ಣನವರ, ಪ್ರಕಾಶ ಕೋಳಿವಾಡ ಹಾಜರಿದ್ದರು.
ಸಚಿವರು ಚಾಲನೆ ನೀಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ‘ಮೇಲ್ಸೇತುವೆ ಚಾಲನೆ ವಿಚಾರದಲ್ಲಿ ಸಚಿವರು ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಸಂಸದರನ್ನು ಆಹ್ವಾನಿಸದೇ ಅವಮಾನ ಮಾಡಿದ್ದಾರೆ’ ಎಂದು ದೂರಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಬಸವರಾಜ ಶಿವಣ್ಣನವರ, ‘ಜನರ ಹಿತದೃಷ್ಟಿಯಿಂದ ಒಂದು ಬದಿಯ ಮಾರ್ಗಕ್ಕೆ ಸಚಿವರು ಚಾಲನೆ ನೀಡಿದ್ದಾರೆ. ಅಪೂರ್ಣಗೊಂಡಿದ್ದ ಮೇಲ್ಸೇತುವೆಯನ್ನು ಪೂರ್ಣಗೊಳಿಸುವಂತೆ ನಾನು ಸಹ ಸಂಸದ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದ್ದೆ’ ಎಂದು ಹೇಳಿದ್ದರು.
ಈ ಬೆಳವಣಿಗೆ ನಡುವೆಯೇ ಶನಿವಾರ (ಆಗಸ್ಟ್ 2) ಮೇಲ್ಸೇತುವೆ ಸ್ಥಳಕ್ಕೆ ಭೇಟಿ ನೀಡಿದ ಸಂಸದ ಬಸವರಾಜ ಬೊಮ್ಮಾಯಿ, ತಾವು ಸಹ ಹಸಿರು ನಿಶಾನೆ ತೋರಿಸಿ ವಾಹನಗಳ ಸಂಚಾರಕ್ಕೆ ಚಾಲನೆ ನೀಡಿ ಫೋಟೊ ತೆಗೆಸಿಕೊಂಡರು. ವಿರೂಪಾಕ್ಷಪ್ಪ ಬಳ್ಳಾರಿ ಸಹ ಇದ್ದರು.
ಹೆಸರಿಗಾಗಿ ಎರಡು ಬಾರಿ ಚಾಲನೆ: ‘ಹೆದ್ದಾರಿಯಲ್ಲಿ ಸರಣಿ ಅಪಘಾತಗಳು ನಡೆಯುತ್ತಿದ್ದವು. ಮೇಲ್ಸೇತುವೆ ನಿರ್ಮಿಸಬೇಕೆಂಬುದು ಸ್ಥಳೀಯರ ಹಲವು ವರ್ಷಗಳ ಕನಸ್ಸಾಗಿತ್ತು. ಕಾಮಗಾರಿ ಆರಂಭವಾದ ದಿನದಲ್ಲಿ ಸಾಕಷ್ಟು ಅಡೆತಡೆಗಳಿದ್ದವು. ಈಗ ಮೇಲ್ಸೇತುವೆ ನಿರ್ಮಾಣವಾಗಿದೆ. ಆದರೆ, ಜನಪ್ರತಿನಿಧಿಗಳು ತಮ್ಮ ಹೆಸರಿಗಾಗಿ ಪೈಪೋಟಿ ನಡೆಸಿದ್ದಾರೆ’ ಎಂದು ಸ್ಥಳೀಯರು ಹೇಳಿದರು.
‘ಸಚಿವರು ಬಂದು ಚಾಲನೆ ನೀಡಿದ್ದ ಜಾಗಕ್ಕೆ, ಸಂಸದರೂ ಬಂದು ಚಾಲನೆ ನೀಡಿದ್ದಾರೆ. ಇಬ್ಬರೂ ಹಸಿರು ನಿಶಾನೆ ತೋರಿಸಿ ಹೋಗಿದ್ದಾರೆ. ಮೇಲ್ಸೇತುವೆಯಲ್ಲಿ ಇನ್ನು ಕೆಲ ಕೆಲಸಗಳು ಬಾಕಿಯಿದ್ದು, ಅವುಗಳನ್ನು ಮಾಡಿಸಲು ಅವರಿಬ್ಬರು ಗಮನ ಹರಿಸಬೇಕು’ ಎಂದು ತಿಳಿಸಿದರು.
ತಾಳಕ್ಕೆ ತಕ್ಕಂತೆ ಅಧಿಕಾರಿಗಳ ಕುಣಿತ: ‘ಮೇಲ್ಸೇತುವೆ ನಿರ್ಮಿಸಿರುವ ಇಲಾಖೆಯ ಅಧಿಕಾರಿಗಳು, ಒಂದೇ ಬಾರಿ ಕಾರ್ಯಕ್ರಮ ನಡೆಸಿ ಚಾಲನೆ ನೀಡಬಹುದಿತ್ತು. ಆದರೆ, ಅವರು ಜನಪ್ರತಿನಿಧಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಮೇಲ್ಸೇತುವೆ ಮಾತ್ರವಲ್ಲದೇ ಇಂಥ ಹಲವು ಕೆಲಸಗಳ ಉದ್ಘಾಟನೆಯಲ್ಲಿ ಇದೇ ಆಗುತ್ತಿದೆ’ ಎಂದು ಸ್ಥಳೀಯರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.