ADVERTISEMENT

ಬ್ಯಾಡಗಿ| ಜನಪ್ರತಿನಿಧಿಗಳ ನಿರ್ಲಕ್ಷ್ಯ; ಪಾಳು ಬಿದ್ದ ಜಾನುವಾರು ಮಾರುಕಟ್ಟೆ

ಪ್ರಮೀಳಾ ಹುನಗುಂದ
Published 20 ಫೆಬ್ರುವರಿ 2026, 7:22 IST
Last Updated 20 ಫೆಬ್ರುವರಿ 2026, 7:22 IST
ಬ್ಯಾಡಗಿ ತಾಲ್ಲೂಕಿನ ಚಿಕ್ಕಣಜಿ ಬಳಿ ಜಾನುವಾರು ಮಾರುಕಟ್ಟೆಯ ಕಾಂಪೌಂಡ್ ಗೋಡೆ ಕುಸಿದು ಬಿದ್ದಿರುವುದು
ಬ್ಯಾಡಗಿ ತಾಲ್ಲೂಕಿನ ಚಿಕ್ಕಣಜಿ ಬಳಿ ಜಾನುವಾರು ಮಾರುಕಟ್ಟೆಯ ಕಾಂಪೌಂಡ್ ಗೋಡೆ ಕುಸಿದು ಬಿದ್ದಿರುವುದು   

ಬ್ಯಾಡಗಿ: ತಾಲ್ಲೂಕಿನ ಚಿಕ್ಕಣಜಿ ಬಳಿ ನಾಲ್ಕು ವರ್ಷಗಳ ಹಿಂದೆ ಉದ್ಘಾಟನೆಗೊಂಡ ‘ಜಾನುವಾರು ಮಾರುಕಟ್ಟೆ‘, ಉಪಯೋಗಕ್ಕೆ ಮುಕ್ತವಾಗದೇ ಪಾಳು ಬಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿದೆ. 

ಅಂದಾಜು ₹3 ಕೋಟಿ ಅನುದಾನದಲ್ಲಿ ನಿರ್ಮಿಸಿರುವ ಈ ಜಾನುವಾರು ಮಾರುಕಟ್ಟೆಯ ಒಂದು ಬದಿಯಲ್ಲಿ ಕಾಂಪೌಂಡ ಗೋಡೆ ಕುಸಿದು ಬಿದ್ದಿದೆ. ಅದರ ಹಿಂದಿನ ಭಾಗ ಕುಸಿಯುವ ಹಂತದಲ್ಲಿದೆ. ಲಕ್ಷಾಂತರ ರೂಪಾಯಿ ಹಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಿದ್ದರೂ ನಿರ್ವಹಣೆ ಇಲ್ಲದೆ ತುಕ್ಕು ಹಿಡಿದಿದೆ.

ಕಚೇರಿಯ ಕಟ್ಟಡದ ಬಾಗಿಲು ಮುರಿದು ಬಿದ್ದಿದೆ. ನೆಲಮಟ್ಟದಲ್ಲಿ ಕಟ್ಟಡ ನಿರ್ಮಿಸಿದ್ದರಿಂದ ಮಳೆ ನೀರು ಒಳಗೆ ನುಗ್ಗುವ ಸ್ಥಿತಿಯಿದೆ. ಅವೈಜ್ಞಾನಿಕವಾಗಿ ಮಾರುಕಟ್ಟೆ ನಿರ್ಮಿಸಿ ಅದರ ಗುತ್ತಿಗೆದಾರನಿಂದ ಕಮಿಷನ್ ಪಡೆದು ಹಳೇಯ ಆಡಳಿತ ಮಂಡಳಿ ಲೋಪ ಎಸಗಿರುವ ಆರೋಪವಿದೆ. ವೇಬ್ರಿಡ್ಜ್‌ ಅಳವಡಿಸಿದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.

ADVERTISEMENT

ಹಂಸಬಾವಿ ಗ್ರಾಮದಲ್ಲಿ ಕಳೆದ 25 ವರ್ಷಗಳಿಂದ ಜಾನುವಾರು ವ್ಯಾಪಾರ ನಡೆಯುತ್ತಿದ್ದರೂ, ಚಿಕ್ಕಣಜಿ ಕ್ರಾಸ್‌ ಬಳಿ ಜಾನುವಾರು ಮಾರುಕಟ್ಟೆ ಸ್ಥಾಪಿಸುವ ಔಚಿತ್ಯವವಾದರೂ ಏನಿತ್ತು? ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಅದನ್ನೇ ಬೇರೆ ಸ್ಥಳದಲ್ಲಿ ಜಾನುವಾರು ಮಾರುಕಟ್ಟೆ ಸ್ಥಾಪಿಸಿದ್ದರೆ ಒಳ್ಳೆಯ ಸ್ಥಿತಿಗೆ ಬಂದು, ರೈತರಿಗೆ ಅನುಕೂಲವಾಗುತ್ತಿತ್ತು ಎಂದು ಜನರು ಹೇಳುತ್ತಿದ್ದಾರೆ.

ಪ್ರತಿಯೊಂದು ವಿಷಯದಲ್ಲಿಯೂ ರಾಜಕಾರಣ ಮಾಡಿದ್ದರಿಂದ ಸರ್ಕಾರದ ಹಣ ವಿನಾಕಾರಣ ವ್ಯಯವಾಗಲು ಕಾರಣವಾಗಿದೆ. ಈಗೆಲ್ಲ ಮಾರುಕಟ್ಟೆಯಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಸಂಜೆಯಾದರೆ ಜೂಜು, ಮದ್ಯ ಹಾಗೂ ಇತರೆ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ.

ಸೂಕ್ತ ಪ್ರಚಾರದ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯತನ ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಜಾನುವಾರು ಮಾರುಕಟ್ಟೆ ಉಪಯೋಗವಾಗುತ್ತಿಲ್ಲ. ಜನರ ತೆರಿಗೆ ಹಣ ಅಪವ್ಯಯವಾಗುತ್ತಿದೆ ಎಂದು ರೈತ ಮುಖಂಡ ಮಲ್ಲೇಶಪ್ಪ ಡಂಬಳ ಆರೋಪಿಸಿದರು.

ಎಪಿಎಂಸಿ ಕಾರ್ಯದರ್ಶಿ ಆದರ್ಶ, ‘ಹಂಸಬಾವಿ ದೇವಸ್ಥಾನ ಜಾಗೆಯಲ್ಲಿ ಜಾನುವಾರು ಮಾರುಕಟ್ಟೆ ನಡೆಯುತ್ತಿದೆ. ವಾರಕ್ಕೊಮ್ಮೆ ದೇವಸ್ಥಾನಕ್ಕೆ ದೇಣಿಗೆಯನ್ನು ನೀಡಲಾಗುತ್ತಿದೆ. ಅಲ್ಲಿ ಯಾವುದೇ ಮೂಲ ಸೌಲಭ್ಯಗಳಿಲ್ಲ. ಅದನ್ನು ಬಂದ್‌ ಮಾಡಿ ಚಿಕ್ಕಣಜಿ ಬಳಿಯ ಸುಸಜ್ಜಿತ ಮಾರುಕಟ್ಟೆಗೆ ಬರಲು ದಲ್ಲಾಳಿಗಳಿಗೆ ಮನವಿ ಮಾಡಿಕೊಂಡರೂ ಅವರು ಒಪ್ಪುತ್ತಿಲ್ಲ. ಪ್ರಚಾರ ನಡೆಸಿ ಜಾನುವಾರು ಮಾರುಕಟ್ಟೆ ವಹಿವಾಟು ಆರಂಭಿಸಲು ಚಿಂತನೆ ನಡೆಸಲಾಗಿದೆ’ ಎಂದರು.

‘ಹಿರೇಕೆರೂರ ಎಪಿಎಂಸಿಯವರಿಗೂ ಮನವೊಲಿಸಬೇಕಾಗಿದೆ. ಇದಕ್ಕೆ ಸಮಯದ ಅಭಾವ ಇದೆ. ಈಗಾಗಲೆ ವಹಿವಾಟು ಶುರುವಾಗಿರುವುದರಿಂದ ಅದನ್ನು ನಿಯಂತ್ರಿಸಲು ಸಿಬ್ಬಂದಿ ಕೊರತೆ ಇದೆ. ವಹಿವಾಟು ಮುಗಿದ ಬಳಿಕ ಜಾನುವಾರು ಮಾರುಕಟ್ಟೆ ಆರಂಭಕ್ಕೆ ಪ್ರಯತ್ನಿಸಲಾಗುವುದು’ ಎಂದರು. 

ಅನೈತಿಕ ಚಟುವಟಿಕೆಯ ತಾಣವಾದ ಜಾನುವಾರು ಮಾರುಕಟ್ಟೆ ಸ್ಥಳ
ಚಿಕ್ಕಣಜಿ ಬಳಿ ಜಾನುವಾರು ಮಾರುಕಟ್ಟೆಯಲ್ಲಿ ಜಾನುವಾರು ಹಾಗೂ ಜನರಿಗೆ ಮೂಲ ಸೌಲಭ್ಯ ಒದಗಿಸಲಾಗಿದೆ. ವಹಿವಾಟು ಆರಂಭಕ್ಕೆ ಪ್ರಚಾರ ಹೆಚ್ಚಿಸಬೇಕಾಗಿದೆ. ಕರಪತ್ರಗಳನ್ನು ಮುದ್ರಿಸಿ ಹಂಚುವ ಆಲೋಚನೆ ಇದೆ 
ಗೌಡರ ಎಪಿಎಂಸಿ ಸಹ ಕಾರ್ಯದರ್ಶಿ
ಕಾರ್ಯದರ್ಶಿಗೆ ಜಾನುವಾರು ಮಾರುಕಟ್ಟೆ ಆರಂಭಿಸುವ ಆಸಕ್ತಿ ಇಲ್ಲ. ಹೆಚ್ಚು ಒತ್ತಾಯಿಸಿದರೆ ಹಂಸಭಾವಿ ಮಾರುಕಟ್ಟೆ ಬಂದ್ ಮಾಡಿಸುವಂತೆ ಹೇಳುತ್ತಿದ್ದಾರೆ  
ಮಲ್ಲಿಕಾರ್ಜುನ ಬಳ್ಳಾರಿ ರೈತ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.