ADVERTISEMENT

ಗುತ್ತಲ | ಅಧಿಕಾರಿಗಳ ನಿರ್ಲಕ್ಷ್ಯ: ಹಾಳಾದ ಜಲಮೂಲ

ಹೊಂಡ, ಕೆರೆ ಸ್ವಚ್ಛಗೊಳಿಸುವಂತೆ ಮನವಿ ಸಲ್ಲಿಸಿದರೂ ಸ್ಪಂದಿಸದ ಅಧಿಕಾರಿಗಳು

ದುರಗಪ್ಪ ಪಿ.ಕೆಂಗನಿಂಗಪ್ಪನವರ
Published 14 ಮಾರ್ಚ್ 2025, 8:16 IST
Last Updated 14 ಮಾರ್ಚ್ 2025, 8:16 IST
ಗುತ್ತಲದ ರಾಣೆಬೆನ್ನೂರ ರಸ್ತೆಯಲ್ಲಿರುವ ಹೊಂಡ ಸಂಪೂರ್ಣ ಅಂತರಗಂಗೆಯಿಂದ ಮುಚ್ಚಿರುವುದು
ಗುತ್ತಲದ ರಾಣೆಬೆನ್ನೂರ ರಸ್ತೆಯಲ್ಲಿರುವ ಹೊಂಡ ಸಂಪೂರ್ಣ ಅಂತರಗಂಗೆಯಿಂದ ಮುಚ್ಚಿರುವುದು   

ಗುತ್ತಲ: ಪಟ್ಟಣದಲ್ಲಿ ಜಲಮಮೂಲಗಳಾದ ಗೋಕಟ್ಟೆಕೆರೆ, ದೊಡ್ಡಹೊಂಡ ಮತ್ತು ಸಣ್ಣಹೊಂಡಗಳು ವಾರ್ಡ್‌ ಸದಸ್ಯರ ಮತ್ತು ಅಧ್ಯಕ್ಷೆ ಮಾಳವ್ವ ಗೊರವರ ಹಾಗೂ ಮುಖ್ಯಾಧಿಕಾರಿ ದೇವಾನಂದ ದೊಡ್ಮನಿ ಅವರ ನಿರ್ಲಕ್ಷ್ಯದಿಂದ ಪಾಳು ಬಿದ್ದಿವೆ ಎಂದು ಜನ ದೂರುತ್ತಿದ್ದಾರೆ.

ಈ ಹಿಂದೆ ಗೋಕಟ್ಟೆ ಕೆರೆ ಮತ್ತು ಹೊಂಡಗಳಲ್ಲಿ ಪ್ರತಿದಿನ ರೈತರು ಜಾನುವಾರುಗಳಿಗೆ ನೀರು ಕುಡಿಸುವುದು ಮತ್ತು ಅವುಗಳ ಮೈ ತೊಳೆಯುದು ಮಾಡುತ್ತಿದ್ದರು. ಮಹಿಳೆಯರು ಬಟ್ಟೆಯನ್ನು ತೊಳೆಯುತ್ತಿದ್ದರು.ಮುಖ್ಯಾಧಿಕಾರಿ ಮತ್ತು ಅಧ್ಯಕ್ಷೆ ಅಧಿಕಾರ ವಹಿಸಿಕೊಂಡಾಗಿಂದ ಹೊಂಡವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. 

‘ಹೊಂಡ ಮತ್ತು ಕೆರೆ ಸ್ವಚ್ಛ ಮಾಡಿ ಜನರಿಗೆ ಬಳಕೆ ಮಾಡುವಂತೆ ಅವಕಾಶ ಮಾಡಿಕೊಡಿ ಎಂದು  ಪಟ್ಟಣ ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಮುಖ್ಯಾಧಿಕಾರಿ ಮತ್ತು ಅಧಕ್ಷರು ಸ್ಪಂದಿಸಿಲ್ಲ’ ಎಂದು ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಹಾಲೇಶ ಹಾಲಣ್ಣನವರ ಹೇಳಿದರು.

ADVERTISEMENT

‘ಹೊಂಡದ ನೀರಿನ ಮೇಲೆ ಅಂತರಗಂಗೆ ಬೆಳೆದು ಸಂಪೂರ್ಣ ಮುಚ್ಚಿದೆ, ಆದರೂ ಪಂಚಾಯಿತಿಯವರು ಸ್ವಚ್ಛಗೊಳಿಸಲು ಹಿಂದೇಟು ಹಾಕುತ್ತಿದ್ದಾರೆ. ಗೊಕಟ್ಟೆ ಮತ್ತು ಹೊಂಡದ ಸುತ್ತಮುತ್ತ ಬಾರಿ ಪ್ರಮಾಣದ ಸೊಳ್ಳೆಗಳು ಉತ್ಪತ್ತಿಯಾಗಿವೆ, ಅಲ್ಲಿ ವಾಸಿಸುವ ನಿವಾಸಿಗಳು ನರಕ ಯಾತನೆ ಅನುಭವಿಸುತ್ತಿದ್ದಾರೆ. ಸೊಳ್ಳೆಗಳ ಕಾಟದಿಂದ ಈ ಭಾಗಗಳಲ್ಲಿ ಡೆಂಗಿ ಜ್ವರಗಳಿಂದ ಮಕ್ಕಳು ಬಳಲುತ್ತಿದ್ದಾರೆ ಎಂದು ನಾಗರಾಜ ದಪ್ಪೇರ ಆರೋಪಿಸಿದರು.

ಪಟ್ಟಣದಲ್ಲಿ ತಿಪ್ಪೆಗುಂಡಿಗಳು ರಸ್ತೆಯ ಅಕ್ಕಪಕ್ಕದಲ್ಲಿ ನಾಯಿಕೊಡೆಯಂತೆ ಉತ್ಪತ್ತಿಯಾಗುತ್ತಿವೆ. ಹೊಂಡದ ಸುತ್ತಮುತ್ತ ವಾಸಿಸುತ್ತಿರುವ ಹಲವು ಮನೆಗಳಲ್ಲಿ ಮಕ್ಕಳು ಡೆಂಗಿ ಜ್ವರದಿಂದ  ಬಳಲುತ್ತಿದ್ದಾರೆ. ಕೂಡಲೇ ಪಟ್ಟಣ ಪಂಚಾಯಿತಿಯವರು ಹೊಂಡ ಮತ್ತು ಕೆರೆ ಸ್ವಚ್ಛಗೊಳಿಸಿ ತಿಪ್ಪೆಗುಂಡಿಗಳನ್ನು ತೆರವುಗೊಳಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಜಾವಿದ ಹಾಲಗಿ ಆಗ್ರಹಿಸಿದ್ದಾರೆ.

ಹೊಂಡವನ್ನು ಶೀಘ್ರದಲ್ಲಿ ಸ್ವಚ್ಛಗೊಳಿಸಲಾಗುವುದು. ಈಗಾಗಲೇ ಹಲವು ತಿಪ್ಪೆಗುಂಡಿಗಳನ್ನು ತೆರವುಗೊಳಿಸಲಾಗಿದೆ ಉಳಿದ ತಿಪ್ಪೆಗುಂಡಿಗಳನ್ನು ತೆರವುಗೊಳಿಸಲಾಗುವುದು
ದೇವಾನಂದ ದೊಡ್ಮನಿ ಮುಖ್ಯಾಧಿಕಾರಿ ಪಟ್ಟಣ ಪಂಚಾಯತಿ ಗುತ್ತಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.