ADVERTISEMENT

ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ನಿರ್ಮಿತಿ ಕೇಂದ್ರ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 17:50 IST
Last Updated 6 ಸೆಪ್ಟೆಂಬರ್ 2019, 17:50 IST

ಹಾವೇರಿ: ‘ಎಲ್ಲ ಜಿಲ್ಲೆಗಳ ನಿರ್ಮಿತಿ ಕೇಂದ್ರಗಳೂ ಇನ್ನು ಮುಂದೆ ಮಾಹಿತಿ ಹಕ್ಕು ಕಾಯ್ದೆಯ (ಆರ್‌ಟಿಐ) ವ್ಯಾಪ್ತಿಗೆ ಒಳಪಡುತ್ತವೆ’ ಎಂದು ರಾಜ್ಯ ಮಾಹಿತಿ ಆಯೋಗ ಆ.27ರಂದು ಆದೇಶ ಹೊರಡಿಸಿದೆ.

ನಿರ್ಮಿತಿ ಕೇಂದ್ರದ ಅಧಿಕಾರಿಗಳು ‘ನಾವು ಸಾರ್ವಜನಿಕ ಪ್ರಾಧಿಕಾರದ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಹೇಳುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ಕೊಡಲು ನಿರಾಕರಿಸುತ್ತಿದ್ದಾರೆ. ಆದರೆ, ಸಂಪೂರ್ಣವಾಗಿ ಸರ್ಕಾರದ ಅನುದಾನದಲ್ಲೇ ನಡೆಯುತ್ತಿರುವ ಕಾರಣ ಈ ಕೇಂದ್ರಗಳು ಸಾರ್ವಜನಿಕರಿಗೇ ಮಾಹಿತಿ ನೀಡಲೇಬೇಕಾ
ಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ಏನಿದು ಪ್ರಕರಣ?: ಹಾವೇರಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ನಾಲ್ಕು ಹಾಸ್ಟೆಲ್‌ಗಳ ಕಾಮಗಾರಿಗಳ ಕುರಿತಂತೆ ರಾಣೆಬೆನ್ನೂರಿನ ಕೊಟ್ರೇಶ ಬಸಪ್ಪ ಕುದುರಿಹಾಳು ಎಂಬುವರು ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದರು. ಅಧಿಕಾರಿಗಳು, ತಾವು ಆರ್‌ಟಿಐ ವ್ಯಾಪ್ತಿಗೆ ಬರುವುದಿಲ್ಲವೆಂಬ ಕಾರಣ ನೀಡಿ ಮಾಹಿತಿ ಕೊಟ್ಟಿರಲಿಲ್ಲ. ಈ ಕುರಿತು ಕೊಟ್ರೇಶ ಅವರು ಮಾಹಿತಿ ಹಕ್ಕು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ADVERTISEMENT

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಮಾಹಿತಿ ಆಯುಕ್ತ ಎಲ್‌.ಕೃಷ್ಣಮೂರ್ತಿ, ‘ಮನವಿದಾರರು ಕೋರಿರುವ ಮಾಹಿತಿಯನ್ನು 30 ದಿನಗಳ ಒಳಗಾಗಿ ನೀಡಬೇಕು. ಆ ಪ್ರತಿಗಳ ಜತೆ ಮುಂದಿನ ವಿಚಾರಣೆಗೆ ಖುದ್ದು ಹಾಜರಾಗಬೇಕು’ ಎಂದುಇದೇ ಜುಲೈ 16ರಂದು ಹಾವೇರಿ ಜಿಲ್ಲಾ ನಿರ್ಮಿತಿ ಕೇಂದ್ರದ ಸಾರ್ವಜನಿಕ ಮಾಹಿತಿ ಅಧಿಕಾರಿ ಎಚ್‌.ಎಸ್.ತಿಮ್ಮೇಶ್‌ ಕುಮಾರ್ ಅವರಿಗೆ ನಿರ್ದೇಶಿಸಿದ್ದರು.

ಅಕ್ರಮ ತಡೆಗೆ ಮಹತ್ವದ ಆದೇಶ

‘ರಾಜ್ಯ ಸರ್ಕಾರವು 1999ರ ಕರ್ನಾಟಕ ಸಾರ್ವಜನಿಕ ಪಾರದರ್ಶಕ ಅಧಿನಿಯಮ ಕಲಂ 4ರ (ಜಿ) ಅಡಿಜಿಲ್ಲಾ ನಿರ್ಮೀತಿ ಕೇಂದ್ರಗಳಿಗೆ ವಿನಾಯಿತಿ ನೀಡಿದೆ. ಇದರಿಂದಾಗಿ ಬೇರೆಯವರುಸರ್ಕಾರದ ಟೆಂಡರ್‌ಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಮಾಹಿತಿ ಹೊರಗೆ ಹೋಗುವುದಿಲ್ಲ ಎಂಬ ಕಾರಣಕ್ಕೆ ಸರ್ಕಾರ ತಮ್ಮ ಆಪ್ತರಿಗೇ ಟೆಂಡರ್‌ಗಳನ್ನು ನೀಡುತ್ತಿತ್ತು. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಈ ಆದೇಶ ಮಹ್ವತ್ವದ್ದು’ ಎಂದು ಆರ್‌ಟಿಐ ಕಾರ್ಯಕರ್ತೆ ಸುಧಾ ಕಟ್ವ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.