ADVERTISEMENT

ಹಾವೇರಿ | ಹೂ ಬೆಳೆಗಾರರಿಗೆ ಖುಷಿ ತಂದ ‘ಓಣಂ’

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 6:07 IST
Last Updated 4 ಸೆಪ್ಟೆಂಬರ್ 2025, 6:07 IST
ಹಾವೇರಿ ತಾಲ್ಲೂಕಿನ ಕಬ್ಬೂರಿನ ಹೊಲದಲ್ಲಿ ಬೆಳೆದಿರುವ ಚೆಂಡು ಹೂವು ಬಿಡಿಸುತ್ತಿರುವ ರೈತರು – ಪ್ರಜಾವಾಣಿ ಚಿತ್ರ / ಮಾಲತೇಶ ಇಚ್ಚಂಗಿ
ಹಾವೇರಿ ತಾಲ್ಲೂಕಿನ ಕಬ್ಬೂರಿನ ಹೊಲದಲ್ಲಿ ಬೆಳೆದಿರುವ ಚೆಂಡು ಹೂವು ಬಿಡಿಸುತ್ತಿರುವ ರೈತರು – ಪ್ರಜಾವಾಣಿ ಚಿತ್ರ / ಮಾಲತೇಶ ಇಚ್ಚಂಗಿ   

ಹಾವೇರಿ: ಕೇರಳದ ಪ್ರಮುಖ ಹಬ್ಬವಾದ ಓಣಂ ಆಚರಿಸಲು ಮಲಯಾಳಿ ಸಮುದಾಯದವರು ಅದ್ದೂರಿ ತಯಾರಿ ಮಾಡಿಕೊಳ್ಳುತ್ತಿ್ದ್ದಾರೆ. ಹಬ್ಬದ ವಿಶೇಷ ಅಲಂಕಾರಕ್ಕಾಗಿ ತರಹೇವಾರಿ ಹೂವಿಗೆ ಬೇಡಿಕೆ ಬಂದಿದ್ದು, ಹಾವೇರಿ ಜಿಲ್ಲೆಯಲ್ಲಿ ಬೆಳೆದಿರುವ ಹೂವು ಖರೀದಿಸಲು ವ್ಯಾಪಾರಿಗಳು ಮುಗಿಬಿದ್ದಿದ್ದಾರೆ.

ಕೇರಳ ಮಾತ್ರವಲ್ಲದೇ ಮಲಯಾಳಿ ಸಮುದಾಯದವರು ವಾಸಿರುವ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಗೋವಾ ಸೇರಿದಂತೆ ವಿವಿಧ ರಾಜ್ಯಗಳಲ್ಲಿಯೂ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ. ಹಬ್ಬದಂದು ಪುಷ್ಪ ರಂಗೋಲಿ (ಪೊಕ್ಕಳಂ) ಹಾಕುವ ಪದ್ಧತಿಯಿದ್ದು, ಇದಕ್ಕಾಗಿ ನಾನಾ ಬಣ್ಣದ ಹೂವುಗಳನ್ನು ಬಳಕೆ ಮಾಡಲಾಗುತ್ತದೆ.

ಹಳದಿ, ಕೆಂಪು ಬಣ್ಣದ ಚೆಂಡು ಹೂವು, ಗುಲಾಬಿ, ಸೇವಂತಿಗೆ ಸೇರಿದಂತೆ ಎಲ್ಲ ಹೂವಿಗೂ ಬೇಡಿಕೆ ಬಂದಿದೆ. ಜಿಲ್ಲೆಯ ಹಾವೇರಿ, ಬ್ಯಾಡಗಿ, ಶಿಗ್ಗಾವಿ, ಸವಣೂರು, ರಾಣೆಬೆನ್ನೂರು, ರಟ್ಟೀಹಳ್ಳಿ, ಹಿರೇಕೆರೂರು ಹಾಗೂ ಹಾನಗಲ್ ತಾಲ್ಲೂಕಿನ ಹಲವು ಕಡೆಗಳಲ್ಲಿ ರೈತರು ಹೂವಿನ ಕೃಷಿ ಮಾಡಿದ್ದಾರೆ. ಓಣಂ ಹಬ್ಬವಿರುವುದರಿಂದ, ವ್ಯಾಪಾರಿಗಳು ರೈತರ ಜಮೀನಿಗೆ ಬಂದು ಹೂವು ಖರೀದಿಸುತ್ತಿದ್ದಾರೆ.

ADVERTISEMENT

ಗೋವಿನ ಜೋಳ, ಭತ್ತ ಬೆಳೆಯುವ ಜಮೀನುಗಳಲ್ಲಿ ಹಲವು ರೈತರು ಹೂವು ಬೆಳೆಯುತ್ತಿದ್ದಾರೆ. 10 ಗುಂಟೆ, ಅರ್ಧ ಎಕರೆ, ಒಂದು ಎಕರೆಯಲ್ಲಿ ಹೂವಿನ ಸಸಿಗಳನ್ನು ಹಚ್ಚಿದ್ದಾರೆ. ಈ ಸಸಿಗಳು, ಓಣಂ ಸಂದರ್ಭದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಹೂವು ಬಿಡುತ್ತಿವೆ. ಇದೇ ಹೂವುಗಳನ್ನು ರೈತರು ಕಟಾವು ಮಾಡಿಸಿ, ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದಾರೆ.

ತಮ್ಮದೇ ವಾಹನಗಳ ಮೂಲಕ ಹಳ್ಳಿಯಿಂದ ಹಳ್ಳಿಗೆ ಸಂಚರಿಸುತ್ತಿರುವ ವ್ಯಾಪಾರಿಗಳು, ಹೂವು ಬೆಳೆದವರ ಮನೆ ಹಾಗೂ ಜಮೀನಿಗೆ ಹೋಗಿ ಬೇಡಿಕೆ ಸಲ್ಲಿಸುತ್ತಿದ್ದಾರೆ. ಹಳದಿ ಹಾಗೂ ಕೆಂಪು ಚೆಂಡು ಹೂವಿಗೆ, ಮಾರುಕಟ್ಟೆ ದರ ನಿಗದಿ ಮಾಡಿ ಹೂವು ಖರೀದಿಸುತ್ತಿದ್ದಾರೆ.

ಓಣಂ ಹಬ್ಬಕ್ಕೆ ನೂರಾರು ಕ್ವಿಂಟಲ್‌ ಹೂವು ಬೇಕು. ಪ್ರತಿ ವರ್ಷವೂ ಹಾವೇರಿ ಜಿಲ್ಲೆಯಿಂದ ಕ್ವಿಂಟಲ್‌ಗಟ್ಟಲೇ ಹೂವು ಹೋಗುತ್ತದೆ. ಅಷ್ಟಾದರೂ ಹೂವಿನ ಕೊರತೆ ಕಾಡುತ್ತದೆ. ಈ ವರ್ಷವಂತೂ ವ್ಯಾಪಾರಿಗಳೇ, ರೈತರನ್ನು ಹುಡುಕಿಕೊಂಡು ಹೋಗಿ ಹೂವು ಖರೀದಿಸುತ್ತಿದ್ದಾರೆ. ಸ್ಥಳದಲ್ಲೇ ಹಣ ಪಾವತಿ ಮಾಡುತ್ತಿದ್ದಾರೆ.

ಕಷ್ಟಪಟ್ಟು ಹೂವು ಬೆಳೆದ ರೈತರ ಮನೆ ಬಾಗಿಲಿಗೆ ವ್ಯಾಪಾರಿಗಳು ಬಂದು ಹಣ ಕೊಡುತ್ತಿರುವುದರಿಂದ, ರೈತರೂ ಖುಷಿಯಾಗಿದ್ದಾರೆ. ಹೂವು ಹರಿದು ಮಾರುಕಟ್ಟೆಗೆ ಕೊಂಡೊಯ್ದು ಮಾರುವುದಕ್ಕಿಂತ ಸ್ಥಳದಲ್ಲೇ ಮಾರಿ ಉತ್ತಮ ಲಾಭ ಪಡೆಯುತ್ತಿದ್ದಾರೆ.

‘ಅರ್ಧ ಎಕರೆಯಲ್ಲಿ ಚೆಂಡು ಹೂವು ಬೆಳೆದಿದ್ದೇನೆ. ಓಣಂ ಸಮಯದಲ್ಲಿಯೇ ಉತ್ತಮವಾಗಿ ಹೂವು ಬರುತ್ತಿದೆ. ವ್ಯಾಪಾರಿಗಳೇ ಜಮೀನಿಗೆ ಬಂದು ಕೆ.ಜಿ.ಗೆ ₹ 40 ಕೊಟ್ಟು ಹೂವು ಖರೀದಿಸುತ್ತಿದ್ದಾರೆ. ಉತ್ತಮ ದರ ಸಿಗುತ್ತಿರುವುದರಿಂದ, ಖುಷಿಯಾಗುತ್ತಿದೆ’ ಎಂದು ಕಬ್ಬೂರು ರೈತರೊಬ್ಬರು ಹೇಳಿದರು.

‘ಗೋವಿನ ಜೋಳ ಬೆಳೆದರೂ ಲಾಭ ಸಿಗುತ್ತಿರಲಿಲ್ಲ. ಹೀಗಾಗಿ, ಹೂವಿನ ಕೃಷಿ ಮಾಡುತ್ತಿದ್ದೇವೆ. ಹಬ್ಬಕ್ಕೆ ಹೂವು ಬರುವ ರೀತಿಯಲ್ಲಿ ಸಸಿಗಳನ್ನು ಹಚ್ಚುತ್ತಿದ್ದೇವೆ. ಆರಂಭದಿಂದಲೂ ಹೂವಿನಲ್ಲಿ ಉತ್ತಮ ಲಾಭ ಸಿಗುತ್ತಿದೆ’ ಎಂದು ತಿಳಿಸಿದರು.

ಮಂಗಳೂರು ಮೂಲಕ ಸರಬರಾಜು: ಹಾವೇರಿ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೂವಿನ ವ್ಯಾಪಾರಿಗಳಿದ್ದಾರೆ. ಓಣಂ ಹಬ್ಬದ ನಿಮಿತ್ತ ಈ ವ್ಯಾಪಾರಿಗಳು, ತಮ್ಮದೇ ವಾಹನ ತೆಗೆದುಕೊಂಡು ಹಳ್ಳಿಗಳಿಗೆ ಹೋಗಿ ಹೂವು ಖರೀದಿಸುತ್ತಿದ್ದಾರೆ. ಇದೇ ಹೂವನ್ನು ಮಂಗಳೂರಿಗೆ ಕೊಂಡೊಯ್ದು, ಅಲ್ಲಿಂದ ಕೇರಳಕ್ಕೆ ಕಳುಹಿಸುತ್ತಿದ್ದಾರೆ.

‘ರೈತರಿಂದ ಹೂವು ಖರೀದಿಸಿ ಮಾರುಕಟ್ಟೆಗೆ ಕೊಂಡೊಯ್ದು ಮಾರುತ್ತಿದ್ದೇವೆ. ಓಣಂ ಹಬ್ಬದಂದು ಕೇರಳ, ಮಂಗಳೂರು, ಉಡುಪಿ ಹಾಗೂ ಇತರೆಡೆ ಹೂವಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಆದರೆ, ಅಲ್ಲಿ ಬೇಡಿಕೆಗೆ ತಕ್ಕಷ್ಟು ಹೂವು ಸಿಗುವುದಿಲ್ಲ. ಹೀಗಾಗಿ, ಹಾವೇರಿ ಜಿಲ್ಲೆಯ ಪ್ರತಿಯೊಂದು ಹಳ್ಳಿಯಿಂದಲೂ ಹೂವು ಖರೀದಿಸಿ ಕೊಂಡೊಯ್ದು ಮಾರುತ್ತಿದ್ದೇವೆ’ ಎಂದು ಹೂವಿನ ವ್ಯಾಪಾರಿ ರಮೇಶ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಂಪು ಚೆಂಡು ಹೂವಿಗಿಂತ ಹಳದಿ ಚೆಂಡು ಹೂವಿಗೆ ಬೇಡಿಕೆ ಹೆಚ್ಚಿದೆ. ದರವೂ ಜಾಸ್ತಿಯಿದೆ. ಹಾವೇರಿ ಹಾಗೂ ಬ್ಯಾಡಗಿ ತಾಲ್ಲೂಕಿನ ಗ್ರಾಮಗಳಲ್ಲಿ ಬೆಳೆದಿರುವ ಹಳದಿ ಚೆಂಡು ಹೂವನ್ನು ಕೆ.ಜಿ.ಗೆ ₹ 30ರಿಂದ ₹ 40 ಕೊಟ್ಟು ಖರೀದಿ ಮಾಡುತ್ತಿದ್ದೇವೆ. ಇದೇ ಹೂವನ್ನು ಮಂಗಳೂರಿಗೆ ಕೊಂಡೊಯ್ದು ಮಾರುತ್ತಿದ್ದು, ನಮಗೂ ಲಾಭ ಸಿಗುತ್ತಿದೆ’ ಎಂದರು.

ಕಂಪನಿ ಜೊತೆ ಒಪ್ಪಂದ: ಜಿಲ್ಲೆಯ ಕೆಲ ರೈತರು ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಚೆಂಡು ಹೂವು ಬೆಳೆಯುತ್ತಿದ್ದಾರೆ. ಇಂಥ ಹೂವುಗಳು, ಕಂಪನಿಯ ಉತ್ಪನ್ನ ತಯಾರಿಕೆಗೆ ಹೋಗುತ್ತಿವೆ. 

ಒಪ್ಪಂದ ಪ್ರಕಾರ ಹೂವು ಕೃಷಿ ಮಾಡುವ ರೈತರಿಗೆ ಅಲ್ಪಸ್ವಲ್ಪ ಲಾಭವಾಗುತ್ತಿದೆ. ಆದರೆ, ಕಂಪನಿಗಳ ಮಧ್ಯವರ್ತಿಗಳು ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಶಿಗ್ಗಾವಿ ತಾಲ್ಲೂಕಿನ ಕೆಲ ರೈತರು, ಕಂಪನಿ ನಂಬಿ ಹೂವು ಬೆಳೆದು ಕೈ ಸುಟ್ಟುಕೊಂಡಿದ್ದಾರೆ. 

ಹೂವಿನ ಕೃಷಿಯಲ್ಲಿ ಉತ್ತಮ ಲಾಭವಿದೆ. ಆದರೆ ಹೂವಿನ ಬೇಡಿಕೆ ಇರುವ ಹಬ್ಬಗಳಂದು ಹೂವು ಬರುವ ರೀತಿಯಲ್ಲಿ ಸಸಿ ನಾಟಿ ಮಾಡಬೇಕು
ಮಂಜುನಾಥ ಬ್ಯಾಡಗಿ, ರೈತ

‘ಸುಮಾರು 200 ಕ್ವಿಂಟಲ್ ಹೂವು’ ‘ಓಣಂ ಆಚರಣೆಗೆ ಹೂವು ಬೇಕೇ ಬೇಕು. ಹೂವಿನ ರಂಗೋಲಿ ಇಲ್ಲದೇ ಹಬ್ಬ ನಡೆಯುವುದಿಲ್ಲ. ಈ ಹಬ್ಬಕ್ಕಾಗಿ ಮಾರುಕಟ್ಟೆಗೆ ಹಾವೇರಿ ಜಿಲ್ಲೆಯಿಂದಲೇ ಈ ವರ್ಷ ಸುಮಾರು 200 ಕ್ವಿಂಟಲ್ ಹೂವು ಹೋಗಿದೆ’ ಎಂದು ವ್ಯಾಪಾರಿ ಕಿರಣ ಹೇಳಿದರು. ‘ಹಾವೇರಿಯಲ್ಲಿಯೂ ಹೂವಿನ ಮಾರುಕಟ್ಟೆಯಿದೆ. ಅಲ್ಲಿಗೆ ರೈತರು ಹೋಗುವುದು ಕಡಿಮೆ. ಹಬ್ಬದ ಸಂದರ್ಭದಲ್ಲಿ ಜಮೀನಿಗೆ ಹೋಗಿ ಹೂವು ಖರೀದಿ ಮಾಡುತ್ತಿದ್ದೇವೆ. ಇದು ರೈತರಿಗೂ ಅನುಕೂಲವಾಗಿದೆ’ ಎಂದರು.‘ಕೆಲವರು ಗುಲಾಬಿ ಬೆಳೆಯುತ್ತಿದ್ದಾರೆ. ಅದನ್ನು ಕೆ.ಜಿ.ಗೆ ₹150ರಿಂದ ₹ 200 ಕೊಟ್ಟು ಖರೀದಿ ಮಾಡುತ್ತಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.