
ರಾಣೆಬೆನ್ನೂರು ತಾಲ್ಲೂಕಿನ ತುಮ್ಮನಕಟ್ಟಿ ಗ್ರಾಮದ ಮಧ್ಯಭಾಗದಲ್ಲಿ ಹಾದು ಹೋಗಿರುವ ತುಮ್ಮಿನಕಟ್ಟಿ-ಹೊನ್ನಾಳಿ ರಸ್ತೆ ಅಗಲೀಕರಣ ಮಾಡುವದನ್ನು ವಿರೋಧಿಸಿ ಗ್ರಾಮ ಪಂಚಾಯಿತಿ ದ್ವಿತೀಯ ದರ್ಜೆ ಸಹಾಯಕ ನಾಗೇಂದ್ರಪ್ಪ ಚಲವಾದಿ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ರಾಣೆಬೆನ್ನೂರು: ತಾಲ್ಲೂಕಿನ ತುಮ್ಮಿನಕಟ್ಟಿ ಗ್ರಾಮದ ಮಧ್ಯಭಾಗದಲ್ಲಿ ಹಾದು ಹೋಗಿರುವ ತುಮ್ಮಿನಕಟ್ಟಿ-ಹೊನ್ನಾಳಿ ರಸ್ತೆ ವಿಸ್ತರಣೆ ಮಾಡುವದನ್ನು ವಿರೋಧಿಸಿ ಬುಧವಾರ ಗ್ರಾಮಸ್ಥರು, ವ್ಯಾಪಾರಸ್ಥರು, ಮನೆ ಮಾಲೀಕರು ವಿರೋಧ ವ್ಯಕ್ತಪಡಿಸಿ ಗ್ರಾಮ ಪಂಚಾಯಿತಿ ದ್ವಿತೀಯ ದರ್ಜೆ ಸಹಾಯಕ ನಾಗೇಂದ್ರಪ್ಪ ಚಲವಾದಿ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮಸ್ಥರಾದ ಶಿವಣ್ಣ ರಜಪೂತ ಮಾತನಾಡಿ, ಗ್ರಾಮದ ಮಧ್ಯೆದಲ್ಲಿರುವ ತುಮ್ಮಿನಕಟ್ಟಿ-ಹೊನ್ನಾಳಿ ರಸ್ತೆ ವಿಸ್ತರಣೆಯಿಂದ ರಸ್ತೆ ಬದಿಗೆ ಇರುವ ವ್ಯಾಪಾರಸ್ಥರ ಅಂಗಡಿ ಹಾಗೂ ಮನೆ ತೆರವುಗೊಳಿಸುವುದರಿಂದ ಅಲ್ಲಿ ಬಡ ಜನತೆಗೆ ಮತ್ತು ವ್ಯಾಪಾರಸ್ಥರಿಗೆ ತೀವ್ರ ತೊಂದರೆಯಾಗುತ್ತದೆ. ಕೆಲವರಿಗೆ ಬೇರೆ ಕಡೆ ನಿವೇಶನ ಕೂಡಾ ಇಲ್ಲ. ಹಾಗಾಗಿ ಬಡವರಿಗೆ ಭಾರಿ ಅನ್ಯಾಯವಾಗಲಿದೆ.
ಕಾರಣ ರಸ್ತೆ ವಿಸ್ತರಣೆ ಮಾಡುವುದನ್ನು ಕೈಬಿಟ್ಟು, ಸದ್ಯ ಇರುವ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.
ಇಲ್ಲವಾದರೆ ಅಂಗಡಿ ವ್ಯಾಪಾರಸ್ಥರು, ಮನೆ ಮಾಲೀಕರಿಗೆ ಬದಲಿ ನಿವೇಶನ ಕೊಡಬೇಕು. ಅವರಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಪ್ರತಿಭಟನಾಕಾರರದು ಒತ್ತಾಯಿಸಿದರು.
ಗ್ರಾಮ ಪಂಚಾಯಿ ಆಡಳಿತ ಮಂಡಳಿಯವರು ಯಾರಿಗೂ ತಿಳಿಸದೆ, ಅಲ್ಲಿನ ಬೀದಿ ಬದಿ ವ್ಯಾಪಾರಸ್ಥರಿಗೆ ಹಾಗೂ ಮಾಲೀಕರಿಗೆ ಗ್ರಾಮ ಪಂಚಾಯಿತಿಯಿಂದ ನೋಟೀಸ್ ಕೊಡದೆ ಏಕಾಏಕಿಯಾಗಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಮಾಡಿ ರಸ್ತೆ ಅಗಲೀಕರಣಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿರುವುದು ಖಂಡನೀಯ ಎಂದರು.
ಈಗಾಗಲೇ ಗ್ರಾಮದಿಂದ ಹೊರವಲಯದಲ್ಲಿ ರಾಜ್ಯ ಹೆದ್ದಾರಿಯಾಗಿ ವಾಹನ ಸವಾರರಿಗೆ ಅನುಕೂಲವಾಗಿದೆ. ಎಲ್ಲ ವಾಹನಗಳು ರಾಜ್ಯ ಹೆದ್ದಾರಿ ಮೂಲಕ ಹೊನ್ನಾಳಿ, ಹರಿಹರ, ಶಿವಮೊಗ್ಗ, ದಾವಣಗೆರೆ, ಉಕ್ಕಡಗಾತ್ರಿ, ಬೆಂಗಳೂರು, ರಾಣೆಬೆನ್ನೂರು, ಹಾವೇರಿ ಕಡೆಗೆ ಬಸ್‌ಗಳು ಓಡಾಡಲು ಅನುಕೂಲವಾಗಿದೆ ಎಂದರು.
ರಾಜ್ಯ ಹೆದ್ದಾರಿ ಮಾಡುವಾಗ ಲೋಕೋಪಯೋಗಿ ಇಲಾಖೆಯವರು ಹಾಗೂ ಗ್ರಾಮ ಪಂಚಾಯಿತಿ ಅವರು ಸರ್ವೆ ಮಾಡಿ ಅಳತೆ ಮಾಡಿ ವಿಸ್ತರಣೆಗೆ ಮುಂದಾಗಿದ್ದರು. ಇದರಿಂದ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ಮಾಡಿದ್ದರು.
ಸಂಬಂಧಪಟ್ಟ ಇಲಾಖೆಗಳಿಗೆ ಗ್ರಾಮಸ್ಥರು ವಿಸ್ತರಣೆ ಮಾಡಬಾರದೆಂದು ಮನವಿ ಸಲ್ಲಿಸಿದ್ದರು. ಅದಕ್ಕೆ ಸ್ಪಂದಿಸಿದ ಅಧಿಕಾರಿಗಳು ಗ್ರಾಮದಿಂದ ಹೊರವಲಯದಲ್ಲಿ ರಾಜ್ಯ ಹೆದ್ದಾರಿ ಮಾಡಿದ್ದಾರೆಂದು ಹೇಳಿದರು.
ವೈದ್ಯ ಡಾ. ಪರಶುರಾಮಪ್ಪ ದೊಡ್ಮನಿ, ಮಾಂತೇಶ ಮಾಸೂರ, ನಾರಾಯಣ ಹಳ್ಳಳ್ಳಿ, ರಮೇಶ ಪೂಜಾರ, ಶಂಬುಲಿಂಗ ಶಿವಪೂಜಿ, ಬಶೀರ್‌ಸಾಬ್ ಕಠಾರಿ, ಪ್ರಹಲ್ಲಾದ, ಜಗದೀಶ ಅಂಗರಗಟ್ಟಿ, ರಾಘವೇಂದ್ರ ಕಠಾರಿ, ಮಂಜುನಾಥ ಮಾಸೂರ, ಆಂಜನೇಯ ಹಳ್ಳಳ್ಳಿ, ಮಂಜುನಾಥ ಕ್ಯಾದಿಗಿ, ಸುನೀಲ ಕಾಟಣ್ಣನವರ, ಕರಬಸಪ್ಪ ಮೇಡಂ, ಪ್ರಕಾಶ ಪಾಳೇದ, ವಿನಾಯಕ ಮೂಡಿ ಮುಂತರಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.