ADVERTISEMENT

‘ದೇಶದ ಸಂಪತ್ತು ಬಂಡವಾಳಶಾಹಿಗಳ ಪಾಲು’

ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ: ಶಿವಾನಂದ ಗುರುಮಠ ಖಂಡನೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 12:34 IST
Last Updated 24 ಫೆಬ್ರುವರಿ 2021, 12:34 IST
ಶಿವಾನಂದ ಗುರುಮಠ
ಶಿವಾನಂದ ಗುರುಮಠ   

ಹಾವೇರಿ: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡುವ ಮೂಲಕ ಬಂಡವಾಳಶಾಹಿಗಳನ್ನು ಉದ್ಧಾರ ಮಾಡುತ್ತಿದೆ. ಸಾರ್ವಜನಿಕರನ್ನು ಪರಾವಲಂಬಿಗಳನ್ನಾಗಿ ಮಾಡಿ, ಬಡತನದತ್ತ ದೂಡುತ್ತಿದೆ’ ಎಂದು ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ಗುರುಮಠ ಆರೋಪಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಯುವ ಜನರಿಗೆ ಉದ್ಯೋಗ ಸೃಷ್ಟಿಸುತ್ತೇವೆ, ಬಡತನ ನಿರ್ಮೂಲನೆ ಮಾಡುತ್ತೇವೆ, ದೇಶದ ಭವಿಷ್ಯವನ್ನು ಬದಲಿಸುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ದೇಶವನ್ನು ಆಳ್ವಿಕೆ ಮಾಡಲು ಸಂಪೂರ್ಣ ವಿಫಲವಾಗಿದೆ. ದೇಶದ ಸಂಪತ್ತನ್ನು ಶ್ರೀಮಂತರಿಗೆ, ಬಂಡವಾಳಶಾಹಿಗಳಿಗೆ ಅತ್ಯಂತ ಕಡಿಮೆ ದರಕ್ಕೆ ಮಾರುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈಲ್ವೆ, ಭಾರತೀಯ ವಿಮಾನಯಾನ ಸಂಸ್ಥೆ, ಸಮುದ್ರ ದಂಡೆ ಮುಂತಾದವುಗಳ ಖಾಸಗೀಕರಣವಾಗುತ್ತಿದೆ. ಸಾರಿಗೆ ಸಂಸ್ಥೆ ಡಿಪೊ, ಕೆಇಬಿ, ಕೆ.ಒ.ಎಫ್‌, ಕೆ.ಎಂ.ಎಫ್‌ ಮುಂತಾದ ಕಂಪನಿಗಳು ನಷ್ಟದಲ್ಲಿವೆ ಎಂದು ಬಂಡವಾಳಶಾಹಿಗಳಿಗೆ ಬಿಟ್ಟುಕೊಡುವ ಹುನ್ನಾರ ನಡೆಯುತ್ತಿದೆ. ಕಬ್ಬಿಣದ ಅದಿರಿನ ಗುಡ್ಡಗಳನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತಿದೆ.ಹೀಗೆ ಮುಂದುವರಿದರೆ, ದೇಶದ ಅರಣ್ಯ ಸಂಪತ್ತನ್ನು ಖಾಸಗಿಯವರಿಗೆ ಬರೆದು ಕೊಡುವಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.

ADVERTISEMENT

ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಮನಬಂದಂತೆ ಟೋಲ್‌ ಸಂಗ್ರಹಿಸಲಾಗುತ್ತಿದೆ. ಜನರು ರೊಕ್ಕ ಕೊಟ್ಟು ರಸ್ತೆಯಲ್ಲಿ ಅಡ್ಡಾಡುವಂತಾಗಿದೆ. ಇಂಧನ ದರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಬಡ ಮಧ್ಯಮ ವರ್ಗದವರು ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ. ಸಂಸತ್‌ ಭವನ ಮತ್ತು ವಿಧಾನಸೌಧಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿದರೂ ಆಶ್ಚರ್ಯವಿಲ್ಲ. ಜನರು ಜಾಗೃತರಾಗಿ ರಾಜಕೀಯ ಪಕ್ಷಗಳನ್ನು ತಿರಸ್ಕರಿಸಿ, ಪರ್ಯಾಯ ಆಡಳಿತ ವ್ಯವಸ್ಥೆಯತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸುರೇಶ ಸಜ್ಜನ, ಸದಸ್ಯ ಎಸ್‌.ಎಂ. ಚಿಕ್ಕಗೌಡ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.