ADVERTISEMENT

ಸಾರಿಗೆ ಸಂಸ್ಥೆ ಬಸ್‌ ಸವಾರಿ: ಅವಘಡಕ್ಕೆ ದಾರಿ

ಶಕ್ತಿ ಯೋಜನೆಯಿಂದ ಬಸ್‌ಗಳು ಭರ್ತಿ, ಬಸ್‌ಗಳ ಕೊರತೆಯಿಂದ ಪ್ರಯಾಣಿಕರು ಕಂಗಾಲು, ವಿದ್ಯಾರ್ಥಿಗಳ ಪರದಾಟ

ಸಂತೋಷ ಜಿಗಳಿಕೊಪ್ಪ
Published 1 ಡಿಸೆಂಬರ್ 2025, 2:29 IST
Last Updated 1 ಡಿಸೆಂಬರ್ 2025, 2:29 IST
<div class="paragraphs"><p>ಹಾವೇರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್‌ ಭರ್ತಿಯಾಗಿದ್ದರೂ ಅದರಲ್ಲೇ ತಳ್ಳುತ್ತ ಬಸ್‌ ಹತ್ತುತ್ತಿರುವ ಪ್ರಯಾಣಿಕರು</p></div>

ಹಾವೇರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್‌ ಭರ್ತಿಯಾಗಿದ್ದರೂ ಅದರಲ್ಲೇ ತಳ್ಳುತ್ತ ಬಸ್‌ ಹತ್ತುತ್ತಿರುವ ಪ್ರಯಾಣಿಕರು

   

ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ

ಹಾವೇರಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕರಾರಸಾಸಂ) ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ವಾಕರಸಾಸಂ) ಬಸ್‌ಗಳು, ಇತ್ತೀಚಿನ ದಿನಗಳಲ್ಲಿ ನಿಗದಿತ ಪ್ರಯಾಣಿಕರ ಸಂಖ್ಯೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಭರ್ತಿಯಾಗಿ ಸಂಚರಿಸುತ್ತಿವೆ. ಮೋಟಾರು ವಾಹನ ಕಾಯ್ದೆಯ ನಿಯಮ ಉಲ್ಲಂಘಿಸುತ್ತಿರುವ ಸಾರಿಗೆ ಸಂಸ್ಥೆಯ ಬಸ್‌ಗಳು, ಅವಘಡಕ್ಕೂ ದಾರಿ ಮಾಡಿಕೊಡುತ್ತಿವೆ.

ADVERTISEMENT

ಜಿಲ್ಲೆಯಾದ್ಯಂತ ಜನರು ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಲು ಬಸ್‌ಗಳನ್ನು ಅವಲಂಬಿಸಿದ್ದಾರೆ. ಬಸ್‌ಗಳು ಇಲ್ಲದಿದ್ದಾಗ ಮಾತ್ರ ಟಂಟಂ ಹಾಗೂ ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ. ಶಕ್ತಿ ಯೋಜನೆ ಜಾರಿಯಾದ ನಂತರ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ, ನಿಗದಿಗಿಂತ ದುಪ್ಪಟ್ಟು ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಈ ಅಸುರಕ್ಷಿತ ಪ್ರಯಾಣದಿಂದ ಅನಾಹುತ ಸಂಭವಿಸುವ ಆತಂಕ ಜನರನ್ನು ಕಾಡುತ್ತಿವೆ.

ಮಹಿಳೆಯರ ಉಚಿತ ಪ್ರಯಾಣಕ್ಕೆ ರಾಜ್ಯ ಸರ್ಕಾರ ‘ಶಕ್ತಿ’ ಯೋಜನೆ ಜಾರಿಗೆ ತಂದಿದೆ. ಯೋಜನೆಯ ಲಾಭ ಪಡೆದಿರುವ ಮಹಿಳೆಯರು, ಉದ್ಯೋಗ, ಕೌಟುಂಬಿಕ ಕೆಲಸ, ಸಮಾರಂಭ ಸೇರಿ ಎಲ್ಲ ಕಡೆಗೂ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಇದೇ ಕಾರಣಕ್ಕೆ ನಿಲ್ದಾಣ ಹಾಗೂ ಬಸ್‌ಗಳಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  

ಒಂದೆಡೆ ಶಕ್ತಿ ಯೋಜನೆ ಜಾರಿ ಮಾಡಿರುವ ಸರ್ಕಾರ, ಇನ್ನೊಂದೆಡೆ ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿಲ್ಲ. ಇರುವ ಬಸ್‌ಗಳಲ್ಲಿಯೇ ಸೇವೆ ನೀಡಲು ಸಾರಿಗೆ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಸ್‌ಗಳ ಕೊರತೆ ಇರುವ ಸಮಯದಲ್ಲಿ, ಪ್ರತಿ ಮಾರ್ಗದಲ್ಲೂ ಬಸ್‌ಗಳನ್ನು ಹೊಂದಾಣಿಕೆ ಮಾಡಲು ಅಧಿಕಾರಿಗಳು ಪರದಾಡುತ್ತಿದ್ದಾರೆ.

ಬಸ್‌ಗಳು ನಿಲ್ದಾಣಕ್ಕೆ ಬರುತ್ತಿದ್ದಂತೆ ಜನರು, ಮುಗಿಬಿದ್ದು ಬಸ್‌ನೊಳಗೆ ಹತ್ತುತ್ತಿದ್ದಾರೆ. ಸೀಟು ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಬಸ್‌ನೊಳಗೆ ಹೋಗುತ್ತಿದ್ದಂತೆ ಸೀಟಿನ ವಿಚಾರವಾಗಿಯೇ ಜಗಳಗಳು ಹಾಗೂ ಪರಸ್ಪರ ಕೈ–ಕೈ ಮಿಲಾಯಿಸುವ ಘಟನೆಗಳು ಸಾಮಾನ್ಯವಾಗಿವೆ.

ಹಾವೇರಿ ಕೇಂದ್ರ ಬಸ್‌ ನಿಲ್ದಾಣದಲ್ಲಂತೂ ನಿತ್ಯವೂ ಬಸ್‌ ಪ್ರಯಾಣಿಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಬಸ್‌ ಬರುವ ಹಾಗೂ ಹೋಗುವ ಸಮಯದಲ್ಲಿ, ಬಾಗಿಲು ಬಳಿ ನಿಲ್ಲಲು ಜಾಗವಿಲ್ಲದಷ್ಟು ಪ್ರಯಾಣಿಕರು ತುಂಬಿಕೊಳ್ಳುತ್ತಿದ್ದಾರೆ. ಬಾಗಿಲು ಬಳಿಯೇ ಜೋತು ಬಿದ್ದ ಸ್ಥಿತಿಯಲ್ಲಿಯೇ ಸಂಚರಿಸಿ, ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ.

ಹಾವೇರಿ ನಿಲ್ದಾಣ ಬಳಿಯೇ ಇತ್ತೀಚೆಗೆ ಬಸ್‌ನಲ್ಲಿ ಜಾಗವಿಲ್ಲದಿದ್ದರಿಂದ, ಬಾಗಿಲು ಬಳಿ ನಿಂತುಕೊಂಡು ಪ್ರಯಾಣಿಸುತ್ತಿದ್ದ ವೃದ್ಧೆಯೊಬ್ಬರು ರಸ್ತೆಗೆ ಬಿದ್ದು ಗಾಯಗೊಂಡು ಮೃತಪಟ್ಟಿದ್ದಾರೆ. ಈ ಘಟನೆ ಬಳಿಕವೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಜನರು ಸಹ ಜಾಗೃತರಾಗಿಲ್ಲ. ಅಷ್ಟಾದರೂ ಆರ್‌ಟಿಒ ಹಾಗೂ ಪೊಲೀಸರು, ಸಾರಿಗೆ ಸಂಸ್ಥೆಗಳ ಬಸ್‌ಗಳ ವಿರುದ್ಧ ಯಾವುದೇ ಕ್ರಮ ಜರುಗಿಸುತ್ತಿಲ್ಲ.

ಕರ್ನೂಲು ಬಳಿ ಖಾಸಗಿ ಬಸ್‌ ಬೆಂಕಿಗಾಹುತಿಯಾದ ಬಳಿಕ, ರಾಜ್ಯದಾದ್ಯಂತ ಖಾಸಗಿ ಬಸ್‌ಗಳ ಸುರಕ್ಷತಾ ಕ್ರಮಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಆದರೆ, ಸಾರಿಗೆ ಸಂಸ್ಥೆಯ ಬಸ್‌ಗಳ ಅಸುರಕ್ಷಿತ ಸ್ಥಿತಿಯನ್ನು ಪರಿಶೀಲಿಸುತ್ತಿಲ್ಲವೆಂಬ ಆರೋಪವಿದೆ.

‘ರಾಜ್ಯದಲ್ಲಿ ಎಲ್ಲ ವಾಹನಗಳ ಮಾಲೀಕರು ಹಾಗೂ ಚಾಲಕರು, ನಿಯಮ ಪಾಲಿಸಬೇಕು. ಆದರೆ, ಖಾಸಗಿ ವಾಹನಗಳಿಗಷ್ಟೇ ನಿಯಮ ಎಂಬ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಬಸ್‌ನವರು ನಿಯಮ ಉಲ್ಲಂಘನೆ ಮಾಡಿದರೂ ಆರ್‌ಟಿಒ ಅಧಿಕಾರಿಗಳು ಗಮನ ಹರಿಸುತ್ತಿಲ್ಲ’ ಎಂಬುದು ಜನರ ದೂರು.

ಬಸ್‌ನಲ್ಲಿ 70ರಿಂದ 80 ಮಂದಿ: ಸಾರಿಗೆ ಸಂಸ್ಥೆಯ ಪ್ರತಿ ಬಸ್‌ಗಳಲ್ಲಿ 40 –45 ಪ್ರಯಾಣಿಕರ ಸೀಟುಗಳಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರತಿ ಬಸ್‌ನಲ್ಲಿ 70ರಿಂದ 80 ಮಂದಿ ಪ್ರಯಾಣಿಸುತ್ತಿದ್ದಾರೆ. ಬಸ್‌ ಸಂಚರಿಸುವ ಸಂದರ್ಭದಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ? ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 545 ಮಾರ್ಗಗಳಲ್ಲಿ ಸುಮಾರು 586 ಬಸ್‌ಗಳು ಸಂಚರಿಸುತ್ತಿವೆ. ನಿತ್ಯವೂ 2.50 ಲಕ್ಷ ಮಂದಿ ಪ್ರಯಾಣಿಕರು, ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಪ್ರಯಾಣಿಕರ ಸಂಖ್ಯೆಗೆ ಹೋಲಿಕೆ ಮಾಡಿದರೆ, ಬಸ್‌ಗಳ ಕೊರತೆ ಹೆಚ್ಚಿದೆ. 

ಜಿಲ್ಲೆಯ ಬಹುತೇಕ ಕಡೆಗಳಲ್ಲಿ ರಸ್ತೆಗಳು ಹಾಳಾಗಿವೆ. ಕೆರೆ ದಡದ ಮೇಲೆಯೂ ಬಸ್‌ಗಳು ಸಂಚರಿಸುತ್ತಿವೆ. ಇಂಥ ಸಂದರ್ಭದಲ್ಲಿ ಬಸ್‌ಗಳಲ್ಲಿ ಹೆಚ್ಚುವರಿ ಪ್ರಯಾಣಿಕರು ಪ್ರಯಾಣಿಸುವುದು ಅಪಾಯಕಾರಿ. ಜತೆಗೆ,  ತುರ್ತು ಬಾಗಿಲು ತೆರೆಯಲು ಸಹ ಸಾಧ್ಯವಾಗದಷ್ಟು ಬಸ್‌ಗಳು ಹಾಳಾಗಿವೆ.

ಹಳೇ ಬಸ್‌ಗಳು, ಸದೃಢತೆ ಕಳಪೆ: ಜಿಲ್ಲೆಯ ಹಲವು ಬಸ್‌ಗಳು ಹಳೆಯದ್ದಾಗಿದ್ದು, ಸದೃಢತೆಯೂ ಕಳಪೆಯಾಗಿದೆ. ಅಂಥ ಬಸ್‌ಗಳನ್ನು ಹಳ್ಳಿಗಳ ಮಾರ್ಗದಲ್ಲಿ ಓಡಿಸುತ್ತಿರುವ ಆರೋಪವಿದೆ.

ಹಾವೇರಿ, ರಾಣೆಬೆನ್ನೂರು, ಹಾನಗಲ್, ಹಿರೇಕೆರೂರು, ಸವಣೂರು, ಶಿಗ್ಗಾವಿ, ರಟ್ಟೀಹಳ್ಳಿ ಹಾಗೂ ಬ್ಯಾಡಗಿ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಸಂಚರಿಸುವ ಬಸ್‌ಗಳು ಹಳೆಯದ್ದಾಗಿದೆ. 1 ಲಕ್ಷಕ್ಕಿಂತಲೂ ಹೆಚ್ಚು ಕಿ.ಮೀ ಓಡಿರುವ ಬಸ್‌ಗಳಿವೆ. ಕೆಲ ಬಸ್‌ಗಳಿಗೆ ಬಾಗಿಲುಗಳಿಲ್ಲ. ಕಿಟಕಿಗಳೂ ಜಖಂಗೊಂಡಿವೆ. ಇಂಥ ಬಸ್‌ಗಳನ್ನು ಗ್ರಾಮೀಣ ಭಾಗದಲ್ಲಿ ಓಡಿಸುತ್ತಿರುವ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿದ್ಯಾರ್ಥಿಗಳ ಪರದಾಟ: ಗ್ರಾಮೀಣ ಭಾಗದ ಮಕ್ಕಳು, ಬಸ್‌ಗಳಲ್ಲಿಯೇ ಶಾಲೆ–ಕಾಲೇಜಿಗೆ ನಿತ್ಯವೂ ಹೋಗಿ ಬರುತ್ತಿದ್ದಾರೆ. ಪ್ರಯಾಣದ ಸಂದರ್ಭದಲ್ಲಿ ಸೀಟು ಸಿಗದೇ ಮಕ್ಕಳು ನಿತ್ಯವೂ ಪರದಾಡುತ್ತಿದ್ದಾರೆ.

‘ನನ್ನದು ಮೆಳ್ಳಾಗಟ್ಟಿ. ಹಾವೇರಿ ಕಾಲೇಜಿನಲ್ಲಿ ಓದುತ್ತಿದ್ದೇನೆ. ನಿತ್ಯವೂ ನಮ್ಮೂರಿನ ಬಸ್‌ನಲ್ಲಿ 70ರಿಂದ 80 ಮಂದಿ ಸಂಚರಿಸುತ್ತಾರೆ. ವಿದ್ಯಾರ್ಥಿಗಳು ಸಹ ಅದೇ ಬಸ್‌ನಲ್ಲಿ ನಿಂತುಕೊಂಡು ಅಥವಾ ಬಾಗಿಲು ಬಳಿ ನಿಂತು ಪ್ರಯಾಣಿಸುತ್ತೇವೆ. ಕಾಲೇಜು ಸಮಯಕ್ಕೆ  ಒಂದೇ ಬಸ್‌ ಇದೆ’ ಎಂದು ವಿದ್ಯಾರ್ಥಿ ಕಲ್ಲಪ್ಪ ಅಳಲು ತೋಡಿಕೊಂಡರು.

ಹಾವೇರಿ ಕೇಂದ್ರ ನಿಲ್ದಾಣದಿಂದ ಹೊರಟ ಬಸ್ಸಿನ ಸೀಟುಗಳು ಭರ್ತಿಯಾಗಿ ನಿಂತುಕೊಂಡೇ  ಪ್ರಯಾಣಿಸಿದ ಪ್ರಯಾಣಿಕರು
ಶಕ್ತಿ ಯೋಜನೆ ಜಾರಿಯಾದ ನಂತರ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಜನರನ್ನು ಕುರಿಗಳ ರೀತಿ ಹತ್ತಿಸಿಕೊಂಡು ಕರೆದೊಯ್ಯಲಾಗುತ್ತಿದೆ. ಅನಾಹುತ ಸಂಭವಿಸಿದರೆ ಯಾರು ಹೊಣೆ
ರಾಜೀವ ಸಂಗಣ್ಣನವರ ಹಿರೇಕೆರೂರು
ಜಿಲ್ಲೆಯಲ್ಲಿ ಸಂಚರಿಸುವ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿಯೇ ಸುರಕ್ಷಿತ ಕ್ರಮಗಳಿಲ್ಲ. ಆರ್‌ಟಿಒ ಅಧಿಕಾರಿಗಳು ಎಲ್ಲ ಬಸ್‌ಗಳ ಪರಿಶೀಲನೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು
ಮಂಜುನಾಥ ಸೋಮಣ್ಣನವರ ರಾಣೆಬೆನ್ನೂರು

ಚಾಲಕ -ನಿರ್ವಾಹಕರು ಹೈರಾಣ

ಪ್ರತಿ ಬಸ್‌ನಲ್ಲಿ 55 ರಿಂದ 65 ಮಂದಿ ಪ್ರಯಾಣಿಕರಿದ್ದಾಗ ಬಹುತೇಕರು ಸೀಟುಗಳ ಮೇಲೆ ಕುಳಿತು ಪ್ರಯಾಣಿಸುತ್ತಾರೆ. ಆದರೆ 70ಕ್ಕಿಂತ ಹೆಚ್ಚು ಪ್ರಯಾಣಿಕರು ಇದ್ದಾಗ ನಿಂತು  ಪ್ರಯಾಣಿಸುವುದು ಅನಿವಾರ್ಯ. ಇಂಥ ಸಂದಣಿಯಲ್ಲಿ ಟಿಕೆಟ್ ನೀಡುವಾಗಲೂ ನಿರ್ವಾಹಕ ಹೈರಾಣಾಗುತ್ತಾನೆ. ಬಸ್‌ನಲ್ಲಿ ಹೆಚ್ಚು ಜನರು ಇರುವುದರಿಂದ ಚಾಲಕ ಸಹ ಆತಂಕದಲ್ಲಿ ಚಾಲನೆ ಮಾಡುವ ಸ್ಥಿತಿ ಇದೆ. ‘ಸೀಟುಗಳಿಗೆ ತಕ್ಕಂತೆ ಪ್ರಯಾಣಿಕರು ಇದ್ದರೆ ಬಸ್‌ ನಿಯಂತ್ರಿಸಬಹುದು. ಆದರೆ 70ಕ್ಕಿಂತ ಹೆಚ್ಚು ಪ್ರಯಾಣಿಕರಿದ್ದರೆ ಹದಗೆಟ್ಟ ರಸ್ತೆ ನದಿ ದಡ ತಿರುವು ಘಟ್ಟ ಪ್ರದೇಶಗಳಲ್ಲಿ ಬಸ್‌ಗಳನ್ನು ನಿಯಂತ್ರಿಸುವುದು ಕಷ್ಟ’ ಎಂದು ಚಾಲಕರೊಬ್ಬರು ಅಳಲು ತೋಡಿಕೊಂಡರು. 

‘ಪುರುಷ ಸೀಟು ಮೀಸಲು; ಆಗ್ರಹ’

‘ಶಕ್ತಿ’ ಯೋಜನೆಯಿಂದಾಗಿ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ಪುರುಷರು ಸೀಟು ಸಿಗದೇ  ನಿಂತುಕೊಂಡೇ ಪ್ರಯಾಣಿಸುತ್ತಿದ್ದಾರೆ. ‘ನಾನು ನಿತ್ಯ ಬ್ಯಾಡಗಿಯಲ್ಲಿರುವ  ಕಚೇರಿಗೆ ಕೆಲಸಕ್ಕೆ ಹೋಗಿ ಬರುತ್ತೇನೆ.  ಬಸ್‌ ಬರುತ್ತಿದ್ದಂತೆ ಮಹಿಳೆಯರೇ ಮುಗಿಬಿದ್ದು ಮೊದಲಿಗೆ ಬಸ್‌ ಹತ್ತುತ್ತಾರೆ. ಅವರ ಜತೆ ಜಗಳ ಬೇಡವೆಂದು ನಾನು ತಡವಾಗಿ ಬಸ್‌ ಹತ್ತುತ್ತೇನೆ.  ಹೀಗಾಗಿ ಅನಿವಾರ್ಯವಾಗಿ ಬಾಗಿಲು ಬಳಿ ನಿಂತು ಪ್ರಯಾಣಿಸುತ್ತಿದ್ದೇನೆ’ ಎಂದು ಹಾವೇರಿಯ ನಿವಾಸಿ ವಿಕ್ರಮ್ ಅಳಲು ತೋಡಿಕೊಂಡರು. ‘ಶಕ್ತಿ ಯೋಜನೆಗೂ ಮುನ್ನ ‘ಈ ಸೀಟು ಸ್ತ್ರಿಯರಿಗೆ ಮೀಸಲು’ ಎಂಬ ಫಲಕ ಹಾಕುತ್ತಿದ್ದರು. ಈಗ ಬಸ್‌ನ ಬಹುತೇಕ ಸೀಟುಗಳಲ್ಲಿ ಮಹಿಳೆಯರೇ ಕುಳಿತಿರುತ್ತಾರೆ. ಹೀಗಾಗಿ ಪುರುಷರಿಗೆ ಕೆಲವು ಸೀಟುಗಳನ್ನು ಮೀಸಲಿಡಬೇಕು’ ಎಂದು ಒತ್ತಾಯಿಸಿದರು.

ಸೀಟು ಹಿಡಿಯಲು ಪೈಪೋಟಿ

ಜಿಲ್ಲೆಯ ಪ್ರತಿ ನಿಲ್ದಾಣದಲ್ಲಿ ಬಸ್‌ಗಳಲ್ಲಿ ಸೀಟು ಹಿಡಿಯಲು ಪೈಪೋಟಿ  ನಡೆಯುತ್ತಿದೆ. ಬಸ್‌ ನಿಲ್ದಾಣಕ್ಕೆ ಬರುತ್ತಿದ್ದಂತೆ ಕೆಲವರು ಕಿಟಕಿಯಿಂದ ತಮ್ಮ ಬಳಿಯ ವಸ್ತುಗಳನ್ನು ಸೀಟಿನ ಮೇಲೆ ಹಾಕುತ್ತಾರೆ. ಇದಕ್ಕಾಗಿ ಕಿಟಕಿಯ ಗಾಜುಗಳನ್ನು ಒಡೆಯುವವರಿದ್ದಾರೆ. ಬಸ್‌ನೊಳಗೆ ಹೋದ ನಂತರವೂ ಸೀಟಿಗಾಗಿ ಜಗಳ ನಡೆಯುವುದು ಸಾಮಾನ್ಯವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.