ADVERTISEMENT

ನವೆಂಬರ್‌ನಲ್ಲಿ ವಿಧಾನಸೌಧಕ್ಕೆ ಮುತ್ತಿಗೆ, ಯಡಿಯೂರಪ್ಪಗೆ ತಕ್ಕ ಪಾಠ: ಯತ್ನಾಳ್‌

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 16:25 IST
Last Updated 20 ಸೆಪ್ಟೆಂಬರ್ 2022, 16:25 IST
ಶಿಗ್ಗಾವಿ ಪಟ್ಟಣದಲ್ಲಿ ಮಂಗಳವಾರ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆ ಮುಂದೆ ನಡೆದ ಧರಣಿ ಸತ್ಯಾಗ್ರಹದಲ್ಲಿ ವಿಜಯಪುರ ಶಾಸಕ ಬಸನಗೌಡ ಯತ್ನಾಳ ಮಾತನಾಡಿದರು
ಶಿಗ್ಗಾವಿ ಪಟ್ಟಣದಲ್ಲಿ ಮಂಗಳವಾರ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆ ಮುಂದೆ ನಡೆದ ಧರಣಿ ಸತ್ಯಾಗ್ರಹದಲ್ಲಿ ವಿಜಯಪುರ ಶಾಸಕ ಬಸನಗೌಡ ಯತ್ನಾಳ ಮಾತನಾಡಿದರು   

ಶಿಗ್ಗಾವಿ (ಹಾವೇರಿ): ‘ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಲ್ಲಿ ಅಡ್ಡಗಾಲು ಹಾಕುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಮುದಾಯದ ಜನ ತಕ್ಕ ಪಾಠ ಕಲಿಸಬೇಕು’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹರಿಹಾಯ್ದರು.

ಪಟ್ಟಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆ ಮುಂದೆ ಮಂಗಳವಾರ ರಾತ್ರಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿ, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮ್ಮ ವಿರೋಧಿಗಳಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಬೊಮ್ಮಾಯಿ ಅವರನ್ನು ಬಿಎಸ್‌ವೈ ಬಿಡುತ್ತಿಲ್ಲ. ತಿರುಪತಿಗೆ ಹೋಗಿ ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡದಂತೆ ಬಿಎಸ್‌ವೈ ಹೇಳಿರುವ ಕಾರಣ ಬೊಮ್ಮಾಯಿ ಅವರು ಮೀಸಲಾತಿ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದರು.

ವಿಧಾನಸೌಧಕ್ಕೆ ಮುತ್ತಿಗೆ:ಮಂಗಳವಾರ ನಡೆದ ಅಧಿವೇಶನದಲ್ಲಿ ಎಲ್ಲ ಸಮಾಜಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಲಾಗಿದೆ. ಅದಕ್ಕೆ ಎಲ್ಲ ಸಮಾಜದ ಶಾಸಕರು ಒಮ್ಮತವಾಗಿ ಬೆಂಬಲ ನೀಡಿದ್ದಾರೆ. ಅಧಿವೇಶನ ಮುಗಿಯುವ ಒಳಗಾಗಿ ಒಳ್ಳೆಯ ಸುದ್ದಿ ಸಿಗುವ ಲಕ್ಷಣಗಳು ಕಂಡುಬಂದಿವೆ. ಆದರೂ ಸಹ ನವೆಂಬರ್‌ 2ನೇ ವಾರದಲ್ಲಿ 25 ಲಕ್ಷ ಜನ ಸೇರಿ ವಿಧಾನಸೌಧ ಮುತ್ತಿಗೆ ಹಾಕಿ ಪ್ರತಿಭಟಿಸುವುದು ಅಥವಾ ಸನ್ಮಾನ ಸಮಾರಂಭ ಮಾಡುವುದು ನಿರ್ಧಾರವಾಗಲಿದೆ ಎಂದರು.

ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ‘ಯಡಿಯೂರಪ್ಪನವರು ಪಂಚಮಸಾಲಿಗಳ ಶಾಪದಿಂದ ಅಧಿಕಾರ ಕಳೆದುಕೊಂಡರು. ನುಡಿದಂತೆ ನಡೆಯದಿದ್ದರೆ ಪಂಚಮಸಾಲಿಗಳ ಶಾಪ ಯಾರನ್ನೂ ಬಿಡದು’ ಎಂದರು.

ADVERTISEMENT

ಮಾಜಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ಮಕ್ಕಳ ಭವಿಷ್ಯಕ್ಕಾಗಿ ಮೀಸಲಾತಿ ನೀಡುವುದು ಅವಶ್ಯವಾಗಿದೆ. ನಮ್ಮ ಮೇಲೆ ನೂರು ಪ್ರಕರಣ ದಾಖಲಿಸಿದರೂ ನಾವು ಹೆದರುವುದಿಲ್ಲ. ಪಕ್ಷ ಯಾವುದೇ ಇರಲಿ, ಸಿಎಂ ಯಾರೇ ಇರಲಿ, ಹೋರಾಟ ನಡೆಸಿ, ನಮ್ಮ ಹಕ್ಕು ಕೇಳುವುದು ಮುಖ್ಯವಾಗಿದೆ ಎಂದರು.

ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಧಾರವಾಡ ಶಾಸಕ ಅರವಿಂದ ಬೆಲ್ಲದ ಸೇರಿದಂತೆ ವಿವಿಧ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.