ADVERTISEMENT

ಹಾವೇರಿ | ಕರ್ತವ್ಯಲೋಪ: ಒಂದೇ ದಿನ ಇಬ್ಬರು ಪಿಡಿಒ ಅಮಾನತು

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸಿಇಒ: ಕರ್ತವ್ಯಲೋಪ– ಕೆಲಸದಲ್ಲಿ ನಿಷ್ಠೆ ತೋರದಿದ್ದಕ್ಕೆ ಕ್ರಮ

ಸಂತೋಷ ಜಿಗಳಿಕೊಪ್ಪ
Published 16 ಅಕ್ಟೋಬರ್ 2025, 4:16 IST
Last Updated 16 ಅಕ್ಟೋಬರ್ 2025, 4:16 IST
ಶಾಂತಿನಾಥ ಜೈನ್
ಶಾಂತಿನಾಥ ಜೈನ್   

ಹಾವೇರಿ: ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶ ಹಾಗೂ ಜನರ ಅಭಿವೃದ್ಧಿಗಾಗಿ ರಾಜ್ಯ–ಕೇಂದ್ರ ಸರ್ಕಾರಗಳು ಹಲವು ಯೋಜನೆ ಜಾರಿಗೊಳಿಸಿದೆ. ಈ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ನಿರ್ಲಕ್ಷ್ಯ ವಹಿಸಿದ ಹಾಗೂ ಕರ್ತವ್ಯಲೋಪ ಎಸಗಿದ ಆರೋಪದಡಿ ಇಬ್ಬರು ‍ಪಿಡಿಒಗಳನ್ನು (ಪಂಚಾಯಿತಿ ಅಭಿವೃದ್ಧಿ ಅಧಿಕಾರಿ) ಕೆಲಸದಿಂದ ಅಮಾನತುಗೊಳಿಸಲಾಗಿದೆ.

ಗ್ರಾ.ಪಂ. ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಪ್ರಗತಿ ಬಗ್ಗೆ ಮಂಗಳವಾರ ಪರಿಶೀಲನೆ ನಡೆಸಿದ ಜಿಲ್ಲಾ ಪಂಚಾಯಿತಿ ಸಿಇಒ ರುಚಿ ಬಿಂದಲ್, ಜಿಲ್ಲೆಯ ಎಲ್ಲ ಪಿಡಿಒಗಳ ಕೆಲಸದ ಮಾಹಿತಿ ಪಡೆದರು. ಯೋಜನೆ ಜಾರಿಯಲ್ಲಿ ಪ್ರಗತಿ ಸಾಧಿಸದ ಹಾಗೂ ಕರ್ತವ್ಯದಲ್ಲಿ ಲೋಪ ಎಸಗಿದ ಇಬ್ಬರು ಪಿಡಿಒಗಳನ್ನು ಒಂದೇ ದಿನ ಅಮಾನತು ಮಾಡಿ ಬಿಸಿ ಮುಟ್ಟಿಸಿದ್ದಾರೆ. 

ರಾಣೆಬೆನ್ನೂರು ತಾಲ್ಲೂಕಿನ ಕವಲೆತ್ತು ಗ್ರಾಮದ ಪಿಡಿಒ ಶಾಂತಿನಾಥ ಜೈನ್ ಹಾಗೂ ಹಾವೇರಿ ತಾಲ್ಲೂಕಿನ ಯಲಗಚ್ಚ ಗ್ರಾಮದ ಪಿಡಿಒ ಮಾಬುಸಾಬ್ ಹೊಟ್ಟೆಫಕ್ಕೀರಣ್ಣನವರ ಅವರನ್ನು ಅಮಾನತುಗೊಳಿಸಿ ಸಿಇಒ ಅವರು ಬುಧವಾರ ಆದೇಶ ಹೊರಡಿಸಿದ್ದಾರೆ.

ADVERTISEMENT

‘ಇಬ್ಬರೂ ಪಿಡಿಒಗಳು ತಮ್ಮ ಕೆಲಸದಲ್ಲಿ ಪೂರ್ಣ ಪ್ರಮಾಣದ ನಿಷ್ಠೆ ಹಾಗೂ ಪ್ರಾಮಾಣಿಕತೆ ತೋರಲು ವಿಫಲರಾಗಿದ್ದಾರೆ. ಗಂಭೀರ ಸ್ವರೂಪದ ಕರ್ತವ್ಯ ಲೋಪ ಎಸಗಿರುವುದು ತನಿಖಾ ವರದಿಯಿಂದ ಕಂಡುಬಂದಿದ್ದರಿಂದ ಇಬ್ಬರನ್ನೂ ಅಮಾನತುಗೊಳಿಸಲಾಗಿದೆ’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

4 ವರ್ಷ ಕೆಲಸ, ಕರ್ತವ್ಯಲೋಪ: ‘ಪಿಡಿಒ ಶಾಂತಿನಾಥ ಜೈನ್, 2021ರಿಂದ 2025ರವರೆಗೆ ಕೆಲಸ ಮಾಡುತ್ತಿದ್ದರು. ಹಣಕಾಸು ವ್ಯವಹಾರದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಕರ್ತವ್ಯ ಲೋಪ ಎಸಗಿರುವುದು ಕಂಡುಬಂದಿದೆ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

‘2024–25ನೇ ಸಾಲಿನ ಕಾಮಗಾರಿಗಳಲ್ಲಿ ಗುತ್ತಿಗೆದಾರರಿಂದ ₹ 59,075 ತೆರಿಗೆ ವಸೂಲಿ ಮಾಡದೇ ಸರ್ಕಾರಕ್ಕೆ ಆರ್ಥಿಕ ನಷ್ಟವನ್ನುಂಟು ಮಾಡಿದ್ದಾರೆ. ಗ್ರಾಮ ನಿಧಿಯಡಿ ಸಾಮಗ್ರಿ ಖರೀದಿಗೆ ₹ 6.24 ಲಕ್ಷ ವ್ಯಯಿಸಿದ್ದು, ಇದಕ್ಕೆ ಯಾವುದೇ ದೃಢೀಕರಣ ನೀಡಿಲ್ಲ. 15ನೇ ಹಣಕಾಸು ಯೋಜನೆಯಡಿ ಸಾಮಗ್ರಿ ಖರೀದಿಸಲು ₹ 9.34 ಲಕ್ಷ ಹಾಗೂ ಗ್ರಾಮ ನಿಧಿಯಡಿ ಸಿ.ಸಿ.ಟಿ.ವಿ ಕ್ಯಾಮೆರಾ ಹಾಗೂ ಇತರೆ ವಸ್ತು ಖರೀದಿಗೆ ₹ 5.66 ಲಕ್ಷ ಭರಿಸಿದ್ದು, ಇದರಲ್ಲಿಯೂ ನಿಯಮ ಉಲ್ಲಂಘಿಸಿದ್ದಾರೆ.’

‘ನಿವೃತ್ತ ಸ್ವೀಪರ್ ಮಹದೇವಪ್ಪ ಹರಿಜನ ಅವರು 1964ರ ನವೆಂಬರ್ 13ರಂದು ಜನಿಸಿದ್ದು, 2024ರ ನವೆಂಬರ್ 30ರಂದು ನಿವೃತ್ತಿಯಾಗಬೇಕು. ಆದರೆ, 2024ರ ಡಿಸೆಂಬರ್‌ನಿಂದ 2025ರ ಆಗಸ್ಟ್‌ವರೆಗೂ ಮಹದೇವಪ್ಪ ಅವರಿಗೆ ₹ 1.50 ಲಕ್ಷ ವೇತನ ಪಾವತಿಯಾಗಿದೆ. ಸೇವಾ ದಾಖಲೆಗಳನ್ನು ಪರಿಶೀಲಿಸದೇ ಪಿಡಿಒ ಅವರು ವೇತನ ಪಾವತಿಸಿದ್ದಾರೆ. 20 ಹೊಲಿಗೆ ಯಂತ್ರ, ನೀರು ಎತ್ತುವ ಯಂತ್ರ (ಮೋಟರ್) ಹಾಗೂ ಇತರೆ ವಸ್ತುಗಳ ಖರೀದಿಯಲ್ಲೂ ಸರ್ಕಾರಕ್ಕೆ ನಷ್ಟ ಮಾಡಿದ್ದಾರೆ. ಕೊಠಡಿ ಹಾಗೂ ಕಚೇರಿ ನವೀಕರಣದಲ್ಲೂ ನಿಯಮ ಉಲ್ಲಂಘಿಸಿದ್ದಾರೆ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಮಾಬುಸಾಬ್ ಹೊಟ್ಟೆಫಕ್ಕೀರಣ್ಣನವರ

ನರೇಗಾ ಜಾರಿಯ‌ಲ್ಲಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿ

‘ಯಲಗಚ್ಚ ಪಿಡಿಒ ಮಾಬುಸಾಬ್‌, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ 4,920 ಮಾನವ ದಿನಗಳನ್ನು ಸೃಜಿಸುವ ಗುರಿ ನೀಡಿದರೂ ಕೇವಲ ಕೇವಲ 246 ದಿನಗಳನ್ನು ಸೃಜಿಸಿದ್ದಾರೆ. 21 ಕಾಮಗಾರಿಗಳಿಗೆ ಅನುಮೋದನೆ ನೀಡಿದರೂ ಒಂದೂ ಕಾಮಗಾರಿ ಅನುಷ್ಠಾನಗೊಳಿಸಿಲ್ಲ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

‘ಎಸ್‌.ಸಿ.,ಎಸ್‌.ಟಿ. ಕಲ್ಯಾಣ ಕಾರ್ಯಕ್ರಮಗಳಿಗೆ ₹ 55,000 ಅನುದಾನವಿದ್ದರೂ, ಕೇವಲ 10,000 ವೆಚ್ಚ ಮಾಡಿದ್ದಾರೆ. ₹ 45,000 ಉಳಿಸಿಕೊಂಡು, ಫಲಾನುಭವಿಗಳಿಗೆ ಸಿಗಬೇಕಾದ  ಸೌಲಭ್ಯಗಳನ್ನು ತಪ್ಪಿಸಿದ್ದಾರೆ. 15ನೇ ಹಣಕಾಸು ಯೋಜನೆಯಡಿ ಪಂಚಾಯಿತಿಗೆ ₹ 1.05 ಕೋಟಿ ಹಣ ಬಿಡುಗಡೆಯಾಗಿದ್ದು, ಕೇವಲ ₹ 15.03 ಲಕ್ಷ ಮಾತ್ರ ವಿನಿಯೋಗಿಸಿದ್ದಾರೆ. ₹ 89,97,426 ಹಣವನ್ನು ಬಾಕಿ ಉಳಿಸಿಕೊಂಡಿದ್ದಾರೆ.

‘ನಿಗದಿತ ಸಮಯಕ್ಕೆ ಗ್ರಾಮ ಸಭೆ, ಮಹಿಳಾ ಗ್ರಾಮ ಸಭೆ ಹಾಗೂ ಮಕ್ಕಳ ಗ್ರಾಮ ಸಭೆ ನಡೆಸಿಲ್ಲ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 80 ಮನೆ ನಿರ್ಮಾಣದ ಗುರಿ ನೀಡಿದರೂ ಕೇವಲ 12 ಮನೆಗಳಿಗೆ ಮಾತ್ರ ಅನುಮೋದನೆ ನೀಡಿದ್ದಾರೆ. ಸ್ವಚ್ಛ ವಾಹಿನಿ ವಾಹನದ ವಿಮೆಯನ್ನೂ ನವೀಕರಿಸಿಲ್ಲ. ಹಣಕಾಸು ವ್ಯವಹಾರದ ಪ್ರಕರಣಗಳ ಕುರಿತು ಅನುಪಾಲನಾ ವರದಿ ಸಹ ಸಲ್ಲಿಸದೇ ಲೋಪ ಎಸಗಿದ್ದಾರೆ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.