ಹಾವೇರಿ: ‘ಮನೆಗಳಿಗೆ ನಂಬರ್ ಪ್ಲೇಟ್ ಅಳವಡಿಸಲು ಅಕ್ರಮವಾಗಿ ಹಣ ವಸೂಲಿ ಮಾಡಿ ಗಂಭೀರ ಸ್ವರೂಪದ ಕರ್ತವ್ಯ ಲೋಪ ಎಸಗಿದ’ ಆರೋಪದಡಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಅಕ್ಕಿಆಲೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಕುಮಾರ ಮಕರವಳ್ಳಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಅಕ್ಕಿಆಲೂರು ಪಂಚಾಯಿತಿ ವ್ಯಾಪ್ತಿಯ ಹಲವು ಮನೆಗಳಿಂದ ತಲಾ ₹100 ವಸೂಲಿ ಮಾಡಿದ್ದರ ಬಗ್ಗೆ ನಿವಾಸಿಗಳು ನೀಡಿದ್ದ ದೂರು ಆಧರಿಸಿ ‘ಪ್ರಜಾವಾಣಿ’ಯಲ್ಲಿ ಸೆ. 11ರಂದು ವರದಿ ಪ್ರಕಟಗೊಂಡಿತ್ತು. ಪ್ರಕರಣದ ಬಗ್ಗೆ ಹಾನಗಲ್ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ ಅವರಿಂದ ವರದಿ ತರಿಸಿಕೊಂಡಿದ್ದ ಜಿಲ್ಲಾ ಪಂಚಾಯಿತಿ ಸಿಇಒ ರುಚಿ ಬಿಂದಲ್, ಪಿಡಿಒ ಕುಮಾರ ಅವರನ್ನು ಅಮಾನತುಗೊಳಿಸಿ ಸೆ. 27ರಂದು ಆದೇಶ ಹೊರಡಿಸಿದ್ದಾರೆ.
‘ಪಿಡಿಒ ಕುಮಾರ ಮಕರವಳ್ಳಿ ಅವರು ಕರ್ತವ್ಯದಲ್ಲಿ ಪೂರ್ಣ ಪ್ರಮಾಣದ ನಿಷ್ಠೆ ಮತ್ತು ಪ್ರಾಮಾಣಿಕತೆ ತೋರಲು ವಿಫಲರಾಗಿದ್ದಾರೆ. ಗಂಭೀರ ಸ್ವರೂಪದ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಕರ್ನಾಟಕ ನಾಗರಿಕ ಸೇವಾ ನಿಯಮಗಳ ಅನ್ವಯ ಇಲಾಖೆ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಆದೇಶ ಹೊರಡಿಸಲಾಗಿದೆ. ಅಮಾನತ್ತಿನಲ್ಲಿರುವ ಪಿಡಿಒ ಕುಮಾರ, ಕಚೇರಿ ಮುಖ್ಯಸ್ಥರ ಅನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡುವಂತಿಲ್ಲ’ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
64 ಮನೆಗಳಿಂದ ₹100 ವಸೂಲಿ: ‘ಬೆಂಗಳೂರಿನ ಅಖಿಲ ಕರ್ನಾಟಕ ಗ್ರಾಮ ಪಂಚಾಯಿತಿ ಹಿತರಕ್ಷಣಾ ಸಮಿತಿಯ ಸಂಸ್ಥಾಪಕ ರಾಜ್ಯ ಘಟಕದ ಅಧ್ಯಕ್ಷರ ಹೆಸರಿನಲ್ಲಿ ಅಕ್ರಮವಾಗಿ ಮನೆಗಳಿಗೆ ಸುತ್ತಾಡಿದ ಕೆಲವರು, ನಂಬರ್ ಪ್ಲೇಟ್ (ಇ–ಸ್ವತ್ತು ಸಂಖ್ಯೆ) ಅಳವಡಿಸಿದ್ದರು. 64 ಮನೆಗಳಿಂದ ತಲಾ ₹ 100 ಸಂಗ್ರಹಿಸಿದ್ದರು. ಅದಕ್ಕೆ ರಶೀದಿ ಸಹ ನೀಡಿದ್ದರು. ಇದನ್ನು ಪ್ರಶ್ನಿಸಿದ್ದ ಕೆಲವರು, ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಿದ್ದರು’ ಎಂಬ ಅಂಶ ಆದೇಶದಲ್ಲಿದೆ.
‘ಪಿಡಿಒ ಅವರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರ ಗಮನಕ್ಕೆ ತರದೇ, ಸಾಮಾನ್ಯ ಸಭೆಯ ಅನುಮತಿಯನ್ನೂ ಪಡೆಯದೇ ಸ್ವಯಂಪ್ರೇರಿತರವಾಗಿ ₹100 ವಸೂಲಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಅಖಿಲ ಕರ್ನಾಟಕ ಗ್ರಾಮ ಪಂಚಾಯಿತಿ ಹಿತರಕ್ಷಣಾ ಸಮಿತಿಯ ಸಂಸ್ಥಾಪಕ ರಾಜ್ಯ ಘಟಕದ ಅಧ್ಯಕ್ಷರಿಗೆ ಆದೇಶವನ್ನೂ ನೀಡಿದ್ದಾರೆ. ಸಾರ್ವಜನಿಕರಿಂದ ಅಕ್ರಮವಾಗಿ ಹಣ ವಸೂಲಿ ಮಾಡಲು ಕಾರಣರಾಗಿದ್ದಾರೆ’ ಎಂಬ ಸಂಗತಿಯನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
‘ಪಿಡಿಒ ಬಗ್ಗೆ ಆರೋಪ ಕೇಳಿಬರುತ್ತಿದ್ದಂತೆ, ಹಾನಗಲ್ ಕಾರ್ಯನಿರ್ವಾಹಕ ಅಧಿಕಾರಿ ಪರಿಶೀಲನೆ ನಡೆಸಿದ್ದರು. ಪ್ರತಿ ಆರು ತಿಂಗಳಿಗೊಮ್ಮೆ ವಾರ್ಡ್ ಸಭೆ ನಡೆಸದಿರುವುದು ಗೊತ್ತಾಗಿದೆ. ಜೊತೆಗೆ, ಆಡಳಿತ ಮಂಡಳಿ ಗಮನಕ್ಕೆ ತರದೇ ನಂಬರ್ ಪ್ಲೇಟ್ ಅಳವಡಿಸಿ ಅದಕ್ಕೆ ತಗಲುವ ವೆಚ್ಚವನ್ನು ಜನರಿಂದ ಪಡೆಯಲು ಆದೇಶಿಸಿದ್ದರು. ಅಧಿಕಾರ ದುರುಪಯೋಗಪಡಿಸಿಕೊಂಡು ತೀವ್ರತರವಾದ ಕರ್ತವ್ಯಲೋಪ ಎಸಗಿ ನಿಯಮಾವಳಿಗಳನ್ನು ಉಲ್ಲಂಘಿಸಿರುವುದು ಪರಿಶೀಲನೆಯಲ್ಲಿ ಕಂಡುಬಂದಿದೆ’ ಎಂಬ ಅಂಶ ಆದೇಶದಲ್ಲಿವೆ.
ಅಕ್ಕಿಆಲೂರು ಗ್ರಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವರದಿ ಜಿ.ಪಂ. ಸಿಇಒ ಆದೇಶ
ಬೀಗ ಹಾಕಿ ಪ್ರತಿಭಟಿಸಿದ್ದ ಸದಸ್ಯರು
‘ಪಿಡಿಒ ಹಾಗೂ ಇತರರು ಸೇರಿದಂತೆ ಅಧಿಕಾರ ದುರುಪಯೋಗ ಪಡಿಸಿಕೊಂಡು ಅಕ್ರಮ ನಡೆಸಿದ್ದಾರೆ. ಮನೆಗಳಿಂದಲೂ ಅಕ್ರಮವಾಗಿ ₹ 100 ವಸೂಲಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಅಕ್ಕಿಆಲೂರು ಗ್ರಾಮ ಪಂಚಾಯಿತಿಯ 14 ಸದಸ್ಯರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಸಹ ನಡೆಸಿದ್ದರು. ‘ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ 14 ಸದಸ್ಯರು ಸಾಮೂಹಿಕ ರಾಜೀನಾಮೆ ಪತ್ರವನ್ನೂ ಸಲ್ಲಿಸಿದ್ದರು. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ್ದ ಸದಸ್ಯರು ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಆಕ್ರೋಶ ಹೊರಹಾಕಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.