ADVERTISEMENT

ಹಾವೇರಿ: 633 ಕ್ವಿಂಟಲ್ ಪಡಿತರ ಅಕ್ಕಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 18:02 IST
Last Updated 26 ಡಿಸೆಂಬರ್ 2025, 18:02 IST
   

ಹಾವೇರಿ: ಇಲ್ಲಿಯ ಹಾನಗಲ್ ರಸ್ತೆಯ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿರುವ ಗೋದಾಮು ಬಳಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 633 ಕ್ವಿಂಟಲ್ (6.33 ಟನ್‌) ಪಡಿತರ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

‘ಖಚಿತ ಮಾಹಿತಿ ಮೇರೆಗೆ ಗೋದಾಮು ಬಳಿ ಪರಿಶೀಲನೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ₹ 14.68 ಲಕ್ಷ ಮೌಲ್ಯದ ಪಡಿತರ ಅಕ್ಕಿ ಹಾಗೂ ₹ 1.28 ಲಕ್ಷ ಮೌಲ್ಯದ 50 ಕ್ವಿಂಟಲ್ 20 ಕೆ.ಜಿ ಗೋಧಿ ಪತ್ತೆಯಾಗಿದೆ. ಈ ಪಡಿತರವನ್ನು ಆರೋಪಿ ಸಚಿನ್ ಕಬ್ಬೂರ ಎಂಬಾತ ಸಂಗ್ರಹಿಸಿದ್ದನೆಂಬ ಮಾಹಿತಿ ಇದೆ. ಆತನ ವಿರುದ್ಧ ಹಾವೇರಿ ಶಹರ ಠಾಣೆಗೆ ದೂರು ನೀಡಲಾಗಿದ್ದು, ಎಫ್‌ಐಆರ್ ದಾಖಲಾಗಿದೆ’ ಎಂದು ಆಹಾರ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

‘ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ನೀಡಲು ಅಕ್ಕಿ ಹಾಗೂ ಗೋಧಿ ಪೂರೈಸಲಾಗಿತ್ತು. ಅದೇ ಅಕ್ಕಿ ಹಾಗೂ ಗೋಧಿಯನ್ನು ಕಳ್ಳಸಂತೆಯಲ್ಲಿ ಮಾರುವುದಕ್ಕಾಗಿ ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿತ್ತು’ ಎಂದರು.

ADVERTISEMENT

‘ಆರೋಪಿ ಸಚಿನ್, ಹಲವು ಬಾರಿ ಪಡಿತರ ಅಕ್ಕಿ ಸಾಗಣೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ. ಹುಬ್ಬಳ್ಳಿಯಲ್ಲೂ ಈತನನ್ನು ಪೊಲೀಸರು ಬಂಧಿಸಿದ್ದರು. ಈತ ಪದೇ ಪದೇ ಕೃತ್ಯ ಎಸಗುತ್ತಿದ್ದಾನೆ. ಪಡಿತರವಿದ್ದ ಮೂರು ಲಾರಿಗಳನ್ನು ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.