ADVERTISEMENT

‘ಭಿಕ್ಷಾಪಾತ್ರೆ’ ಕೈಗೆ ‘ಅಕ್ಷಯಪಾತ್ರೆ’ ಕೊಟ್ಟ ಸಂತ!

ಏಲಕ್ಕಿ ನಾಡಿನಲ್ಲಿ ಪೇಜಾವರ ಶ್ರೀಗಳ ಹೆಜ್ಜೆ ಗುರುತುಗಳು: ಒಡನಾಟದ ಬುತ್ತಿ ಬಿಚ್ಚಿದ ಡಾ.ಗುರುರಾಜ ವೈದ್ಯ

ಸಿದ್ದು ಆರ್.ಜಿ.ಹಳ್ಳಿ
Published 30 ಡಿಸೆಂಬರ್ 2019, 4:30 IST
Last Updated 30 ಡಿಸೆಂಬರ್ 2019, 4:30 IST
ಹಾವೇರಿ ನಗರದ ಗುರುರಾಜ ವೈದ್ಯರ ಮನೆಗೆ ಭೇಟಿ ನೀಡಿದ್ದ ಪೇಜಾವರ ಶ್ರೀಗಳು
ಹಾವೇರಿ ನಗರದ ಗುರುರಾಜ ವೈದ್ಯರ ಮನೆಗೆ ಭೇಟಿ ನೀಡಿದ್ದ ಪೇಜಾವರ ಶ್ರೀಗಳು   

ಹಾವೇರಿ: ‘ಭಿಕ್ಷಾಪಾತ್ರೆ’ ಹಿಡಿಯಬೇಕಿದ್ದ ನೂರಾರು ಮಾಧ್ವ ವಿದ್ಯಾರ್ಥಿಗಳ ಕೈಗೆ ಜ್ಞಾನದ ‘ಅಕ್ಷಯಪಾತ್ರೆ’ ನೀಡಿ, ಅವರ ಬಾಳನ್ನು ಬೆಳಗಿದ ಮಹಾನ್‌ ಸಂತ ಪೇಜಾವರ ಶ್ರೀ’ ಎಂದು ನಗರದ ಹಿರಿಯ ವೈದ್ಯ ಗುರುರಾಜ ವೈದ್ಯ ಅವರು ಬಣ್ಣಿಸಿದರು.

ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳುಕೃಷ್ಣೈಕ್ಯರಾದ ಹಿನ್ನೆಲೆಯಲ್ಲಿ, ಹಾವೇರಿ ಜಿಲ್ಲೆಗೆ ಶ್ರೀಗಳ ಭೇಟಿ ಮತ್ತುಅವರೊಂದಿಗಿನ ಒಡನಾಟದ ನೆನಪಿನ ಬುತ್ತಿಯನ್ನು ಭಾನುವಾರ ‘ಪ್ರಜಾವಾಣಿ’ಯೊಂದಿಗೆ ಬಿಚ್ಚಿಟ್ಟರು.

ಬೆಂಗಳೂರಿನಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಸ್ಥಾಪಿಸಿ, ಸಂಸ್ಕೃತದ ಘಮವನ್ನು ನಾಡಿನೆಲ್ಲೆಡೆ ಪಸರಿಸಿದರು. ಇಲ್ಲಿ ಕಲಿತ 500 ವಿದ್ಯಾರ್ಥಿಗಳಲ್ಲಿ 50 ವಿದ್ಯಾರ್ಥಿಗಳು ಹಾವೇರಿ ಜಿಲ್ಲೆಯವರು. ಈ ವಿದ್ಯಾಪೀಠದ ವಿದ್ಯಾರ್ಥಿಗಳು ಮಹಾರಾಷ್ಟ್ರದ ನಾಗ್‌ಪುರ, ತಿರುಪತಿಯ ವಿ.ವಿ.ಗಳಲ್ಲಿ ಕುಲಪತಿ ಹುದ್ದೆ ಅಲಂಕರಿಸಿದ್ದಾರೆ ಎಂದು ವೈದ್ಯ ಅವರು ಅಭಿಮಾನದ ನುಡಿಗಳನ್ನಾಡಿದರು.

ADVERTISEMENT

ಶ್ರೀಗಳಿಗೆ ಪ್ರತ್ಯೇಕ ಕೋಣೆ ಮೀಸಲು!

ಹಾವೇರಿಗೆ ಬಂದರೆ ತಪ್ಪದೆ ಗುರುರಾಜ ವೈದ್ಯರ ಮನೆಗೆ ವಿಶ್ವೇಶ ತೀರ್ಥರು ಭೇಟಿ ನೀಡುತ್ತಿದ್ದರು. ಅಷ್ಟೇ ಅಲ್ಲ, ಇವರ ಮನೆಯಲ್ಲೇ ರಾತ್ರಿ ವಾಸ್ತವ್ಯ ಹೂಡುತ್ತಿದ್ದರು. ಶ್ರೀಗಳಿಗಾಗಿಯೇ ಇವರ ಮನೆಯ ಒಂದು ಕೋಣೆಯನ್ನು ಮೀಸಲು ಇಡಲಾಗಿತ್ತು. ಒಂದೂವರೆ ತಿಂಗಳ ಹಿಂದಷ್ಟೇ ಶ್ರೀಗಳು ಇವರ ಮನೆಗೆ ಭೇಟಿ ನೀಡಿದ್ದರು. ಪ್ರತಿ ಭೇಟಿಯ ನೆನಪೂ ಇವರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.

ನಳ ಚಕ್ರವರ್ತಿ ಕಟ್ಟಿದ ಊರು, ವನವಾಸದ ಸಂದರ್ಭ ಪಾಂಡವರು ಹಾದು ಹೋದ ಜಿಲ್ಲೆ ಎಂಬ ಕೀರ್ತಿ ಇರುವ ಹಾವೇರಿ ಜಿಲ್ಲೆಯ ಬಗ್ಗೆ ಶ್ರೀಗಳಿಗೆ ಅಪಾರ ಪ್ರೇಮವಿತ್ತು. ಹಾಗಾಗಿಯೇ ವರ್ಷಕ್ಕೆ ಮೂರ್ನಾಲ್ಕು ಬಾರಿ ಭೇಟಿ ನೀಡುತ್ತಿದ್ದರು. ಜಿಲ್ಲೆಯಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಸಾನ್ನಿಧ್ಯ ವಹಿಸಿದ್ದಾರೆ.

ಊಟಕ್ಕೆ ಕುಳಿತರೆ ಅರ್ಧ ತಾಸು ಬೇಕಿತ್ತು. ಅಂದರೆ, ಒಂದು ತುತ್ತು ಕರಗಲು ಐದು ನಿಮಿಷ ಬೇಕು. ಆಗ ಮಾತ್ರ ತಿಂದದ್ದು ಸಮರ್ಪಕವಾಗಿ ಪಚನವಾಗುತ್ತದೆ ಎಂಬುದು ಶ್ರೀಗಳ ಆಂಬೋಣ. ಊಟ ಮಾಡುವಾಗಲೂ ಜ್ಞಾನ, ಶಿಕ್ಷಣದ ಬಗ್ಗೆ ಮಾತುಗಳನ್ನಾಡುತ್ತಿದ್ದರು. ಒಂದೂ ನಿಮಿಷವನ್ನೂ ವ್ಯರ್ಥ ಮಾಡುತ್ತಿರಲಿಲ್ಲ. ‘ಮಿಡಿ ಉಪ್ಪಿನಕಾಯಿ, ಕಾಫಿ ಎಂದರೆ ಅವರಿಗೆ ಬಲು ಪ್ರೇಮ ಎಂದು ಅವರ ಊಟದ ವಿಶೇಷತೆಯನ್ನು ಗುರುರಾಜ ವೈದ್ಯ ಬಿಚ್ಚಿಟ್ಟರು.

ಹಣದ ಜಾಗದಲ್ಲಿ ಜ್ಞಾನ!

ಈ ಜಗತ್ತಿನಲ್ಲಿ ‘ಹಣವಂತರೇ ಗುಣವಂತರು’, ಹಣವಿಲ್ಲದವ ಹೆಣಕ್ಕೆ ಸಮಾನ. ಹಣವಿಲ್ಲದವನ ಮೇಲೆ ನೊಣವೂ ಕೂರುವುದಿಲ್ಲ ಎಂದು ಶ್ರೀಗಳೊಂದಿಗೆ ಒಮ್ಮೆ ವಾದಿಸಿದ್ದೆ. ಅದಕ್ಕೆ ಅವರು ನನ್ನ ವಾದವನ್ನು ಅಲ್ಲಗಳೆದು, ‘ಹಣ’ ಇದ್ದ ಜಾಗದಲ್ಲಿ ‘ಜ್ಞಾನ’ ಪದ ಹಾಕಿ ಎಂದು ಸಲಹೆ ನೀಡಿದ್ದರು. ಸಂಸ್ಕೃತ ಪಾಂಡಿತ್ಯದಲ್ಲಿ ಪೇಜಾವರ ಶ್ರೀಗಳಿಗೆ ಅವರೇ ಸರಿಸಾಟಿ. ಐದು ಪರ್ಯಾಯಗಳನ್ನು ಪೂರ್ಣಗೊಳಿಸಿದವರು ಸೋದೆ ವಾದಿರಾಜ ಮತ್ತು ಪೇಜಾವರ ಶ್ರೀಗಳು ಮಾತ್ರ. 8ನೇ ವರ್ಷದಿಂದ 88 ವರ್ಷಗಳವರೆಗೆ ನಡೆಸಿರುವ ಪ್ರತಿ ಪೂಜಾ ಕಾರ್ಯಕ್ರಮದ ವಿವರವೂ ಅವರಿಗೆ ನೆನಪಿತ್ತು ಎಂದು ವೈದ್ಯ ಹೇಳಿದರು.

20 ವರ್ಷಗಳ ಹಿಂದೆ ನಗರದ ರಾಘವೇಂದ್ರಸ್ವಾಮಿ ಮಠದಲ್ಲಿ ಒಂದು ವಾರ ಪ್ರವಚನ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಒಂದು ಗಂಟೆಯ ಪ್ರವಚನ ಒಂದು ನಿಮಿಷವೂ ವ್ಯತ್ಯಯವಾಗುತ್ತಿರಲಿಲ್ಲ. ನಗರದಲ್ಲಿ ‘ವಿಶ್ವೇಶತೀರ್ಥ ನಗರ’ ಎಂಬ ಬಡಾವಣೆ ಇರುವುದು ವಿಶೇಷ. ಇಲ್ಲಿನ ಕೃಷ್ಣನ ದೇವಸ್ಥಾನಕ್ಕೆ ಪೇಜಾವರ ಶ್ರೀಗಳೇ ಗೌರವಾಧ್ಯಕ್ಷರಾಗಿದ್ದರು.ಪೇಜಾವರ ಶ್ರೀಗಳ ಅಮೃತ ಹಸ್ತದಿಂದ ‘ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ’, ‘ಶ್ರೀ ರಾಮಕೃಷ್ಣ ವಿಠ್ಠಾಲುನುಗ್ರಹ ಪ್ರಶಸ್ತಿ’ ಪಡೆದ ನಾನೇ ಧನ್ಯ. ದಿನಕ್ಕೆ ನೂರು ಸಾರಿ ‘ಕೃಷ್ಣ’ ಎಂದರೆ ಸಾಕು, ಬೇರ‍್ಯಾವ ಜಪ–ತಪವೂ ಬೇಡ ಎಂದು ಶ್ರೀಗಳು ಹೇಳಿದ ಮಾತು ಇಂದಿಗೂ ಕಿವಿಯಲ್ಲಿ ರಿಂಗಣಿಸುತ್ತಿದೆ ಎಂದು ನೆನಪುಗಳನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.