ADVERTISEMENT

ಹಾನಗಲ್‌: ಜನಪರ ಆಡಳಿತ ನನ್ನ ಆದ್ಯತೆ- ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ

ಸಂದರ್ಶನ

ಸಿದ್ದು ಆರ್.ಜಿ.ಹಳ್ಳಿ
Published 27 ಅಕ್ಟೋಬರ್ 2021, 6:17 IST
Last Updated 27 ಅಕ್ಟೋಬರ್ 2021, 6:17 IST
ಶ್ರೀನಿವಾಸ ಮಾನೆ, ಕಾಂಗ್ರೆಸ್‌ ಅಭ್ಯರ್ಥಿ
ಶ್ರೀನಿವಾಸ ಮಾನೆ, ಕಾಂಗ್ರೆಸ್‌ ಅಭ್ಯರ್ಥಿ   

ಜನರು ಆಯ್ಕೆ ಮಾಡಿದ ಪ್ರತಿನಿಧಿ ಅವರ ಕಷ್ಟಕಾಲದಲ್ಲಿ ಕೈಗೆ ಸಿಗಬೇಕು, ಸ್ಪಂದಿಸಬೇಕು ಎಂಬ ಅಪೇಕ್ಷೆ ಇರುತ್ತದೆ. ‘ಬೆಲೆ ಏರಿಕೆ’ಯಿಂದ ಬಡವರಿಗೆ ಆರ್ಥಿಕವಾಗಿ ದೊಡ್ಡ ಪೆಟ್ಟು ಬಿದ್ದಿದೆ.

***

*ಮತದಾರರು ನಿಮಗೇ ಏಕೆ ಮತ ನೀಡಬೇಕು?

ADVERTISEMENT

ಜನರು ಆಯ್ಕೆ ಮಾಡಿದ ಪ್ರತಿನಿಧಿ ಅವರ ಕಷ್ಟಕಾಲದಲ್ಲಿ ಕೈಗೆ ಸಿಗಬೇಕು, ಸ್ಪಂದಿಸಬೇಕು ಎಂಬ ಅಪೇಕ್ಷೆ ಇರುತ್ತದೆ. ‘ಬೆಲೆ ಏರಿಕೆ’ಯಿಂದ ಬಡವರಿಗೆ ಆರ್ಥಿಕವಾಗಿ ದೊಡ್ಡ ಪೆಟ್ಟು ಬಿದ್ದಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಳ, ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗದೇ ಇರುವುದು, ರೈತರ ಸಾಲಮನ್ನಾ ಆಗದಿರುವುದು, ಬೆಳೆ ಹಾನಿಗೆ ಪರಿಹಾರ ಸಿಗದೇ ಇರುವುದರಿಂದ ಸಾಮಾನ್ಯ ಜನ ಮತ್ತು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಕೊರತೆ ಕಾಡುತ್ತಿದ್ದು, ಜನರು ಪರದಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ನಮ್ಮ ಸಹಾಯಕ್ಕೆ ಜನಪ್ರತಿನಿಧಿ ಬರಬೇಕು ಎಂದು ಹಾನಗಲ್‌ ಜನರು ನಿರೀಕ್ಷಿಸುತ್ತಿದ್ದಾರೆ. ಕಳೆದ ಮೂರೂವರೆ ವರ್ಷಗಳಲ್ಲಿ ನಾನು ಜನರ ಕಷ್ಟಕ್ಕೆ ಸ್ಪಂದಿಸಿರುವುದರಿಂದ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ.

*‘ಪಕ್ಷದೊಳಗಿನ ಭಿನ್ನಮತ’ ಮೇಲ್ನೋಟಕ್ಕೆ ಶಮನವಾಗಿದೆಯೋ? ಅಥವಾ ಬಣಗಳ ನಡುವೆ ನಿಜಕ್ಕೂ ಹೊಂದಾಣಿಕೆಯಾಗಿದೆಯಾ?

ಟಿಕೆಟ್‌ ಆಕಾಂಕ್ಷಿಗಳಿಂದ ಪ್ರಬಲ ಪೈಪೋಟಿ ಎಲ್ಲ ಪಕ್ಷಗಳಲ್ಲೂ ಸಹಜವಾದದ್ದು. ನಮ್ಮ ವರಿಷ್ಠರು ಮುತುವರ್ಜಿ ವಹಿಸಿ, ಎಲ್ಲರ ಮಾತುಗಳನ್ನೂ ಆಲಿಸಿ, ಸಮಾಧಾನಪಡಿಸಿದ್ದಾರೆ. ವರಿಷ್ಠರ ಮಾತುಗಳಿಗೆ ನಾವೆಲ್ಲರೂ ಬದ್ಧರಿರುತ್ತೇವೆ ಎಂದು ಮಾತು ಕೊಟ್ಟು, ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ.

*‘ಕಾಂಗ್ರೆಸ್‌ ಮುಳುಗುತ್ತಿರುವ ಹಡಗು’, ಹೀಗಾಗಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವ ವ್ಯಕ್ತಿಗೆ ಮತ ನೀಡಬೇಡಿ ಎಂದು ಬಿಜೆಪಿ ಪ್ರಚಾರ ಮಾಡುತ್ತಿದೆಯಲ್ಲ?

ಮೇಲೆ ಏರಿಸುವುದು ಜನರೇ, ಕೆಳಗೆ ಇಳಿಸುವುದೂ ಜನರೇ. ಬಿಜೆಪಿಯ ಬೆಟ್ಟದಷ್ಟು ಭರವಸೆಗಳು ಸುಳ್ಳಾಗಿವೆ. ಭಾವನಾತ್ಮಕ ವಿಷಯಗಳ ಮೇಲೆ ಮತಬ್ಯಾಂಕ್‌ಗಳನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಬಿಜೆಪಿಯ ಆಡಳಿತ ನೋಡಿದ ಜನರಿಗೆ ಈಗ ಅರಿವಾಗಿದೆ. ಜನರಿಗೆ ಆರ್ಥಿಕ ಶಕ್ತಿ ಕೊಡುವ ಪಕ್ಷ ಕಾಂಗ್ರೆಸ್‌ ಎಂಬುದು ಮನವರಿಕೆಯಾಗಿದೆ. ಜನರೇ ಕಾಂಗ್ರೆಸ್‌ ಪಕ್ಷವನ್ನು ಮೇಲೆತ್ತುತ್ತಾರೆ.

*ಕಳೆದ ಬಾರಿ ತಾವು ಬಿಜೆಪಿ ಅಭ್ಯರ್ಥಿ ವಿರುದ್ಧ ಅಲ್ಪ ಮತಗಳಿಂದ ಸೋತಿದ್ರಿ. ಈ ಅನುಕಂಪದ ಅಲೆಯ ಲಾಭ ಈ ಚುನಾವಣೆಯಲ್ಲಿ ಸಿಗುತ್ತಿದೆಯೇ?

ಚುನಾವಣೆಯಲ್ಲಿ ಗೆಲುವು–ಸೋಲು ಸಹಜ. ಜನರ ತೀರ್ಪನ್ನು ನಾವು ಗೌರವಿಸಬೇಕು. ಕೇವಲ ಸೋತಿದ್ದಕ್ಕೆ ಅನುಕಂಪ ಬರುವುದಿಲ್ಲ. ಸೋತರೂ ಕೂಡ ನಮ್ಮ ಜತೆ ನಿಂತಿದ್ದಾನಲ್ಲ ಎಂಬ ಭಾವನೆ ಜನರಿಗೆ ಮೂಡಿರುವುದರಿಂದ ನಮಗೆ ಅನುಕೂಲವಾಗುತ್ತಿದೆ. ಎಲ್ಲರೂ ‘ಆಪತ್ಬಾಂಧವ’ ಎಂದು ಪ್ರೀತಿ ತೋರಿಸುತ್ತಿದ್ದಾರೆ.

*ನೀವು ಶಾಸಕರಾಗಿ ಆಯ್ಕೆಯಾದರೆ, ಹಾನಗಲ್‌ ಕ್ಷೇತ್ರಕ್ಕೆ ಸಿಗುವ ಕೊಡುಗೆ ಏನು?

ಇದು ಐದು ವರ್ಷಗಳ ಸಾರ್ವತ್ರಿಕ ಚುನಾವಣೆಯಲ್ಲ, ಉಪಚುನಾವಣೆ. ಸಹಜವಾಗಿ, ಹಾನಗಲ್‌ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ನನಗೆ ಹಲವಾರು ಕನಸುಗಳಿವೆ. ಉಳಿದಿರುವ ಅಲ್ಪ ಅವಧಿಯಲ್ಲಿ ಎಲ್ಲ ಕನಸುಗಳನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗುತ್ತದೆಯೇ ಎಂಬ ಬಗ್ಗೆ ಯೋಚಿಸುತ್ತಿದ್ದೇನೆ. ತಾಲ್ಲೂಕು ಆಡಳಿತದಲ್ಲಿ ಚುರುಕು ಮುಟ್ಟಿಸಬೇಕಿದೆ. ಜನಸಾಮಾನ್ಯರ ಅನೇಕ ಸಮಸ್ಯೆಗಳು ಬಾಕಿ ಉಳಿದಿವೆ. ಬಡಜನರು ಕೆಲಸ– ಕಾರ್ಯಗಳಿಗೆ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಮೀನು, ಕೃಷಿ, ತೋಟಗಾರಿಕೆ ಯೋಜನೆಗಳು ಅರ್ಹರಿಗೆ ಸಿಗುತ್ತಿಲ್ಲ. ‘ಜನಪರ ಆಡಳಿತ’ ಮತ್ತು ‘ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ’ ನನ್ನ ಮುಖ್ಯ ಆದ್ಯತೆಗಳಾಗಿವೆ.

*ನಿಮ್ಮ ಗೆಲುವಿಗಿರುವ ಪೂರಕ ಹಾಗೂ ಬಾಧಕ ಅಂಶಗಳೇನು?

ಬಿಜೆಪಿ ಆಡಳಿತದ ವೈಫಲ್ಯ, ಜನವಿರೋಧಿ ನೀತಿ, ಸುಳ್ಳು ಭರವಸೆಗಳು ನಮ್ಮ ಗೆಲುವಿಗೆ ಅನುಕೂಲವಾಗಿವೆ. ನಾನು ಮೂರೂವರೆ ವರ್ಷ ಜನರ ಮಧ್ಯೆ ಇದ್ದು, ಪ್ರತಿ ಹಳ್ಳಿಗೂ ಐದಾರು ಬಾರಿ ಭೇಟಿ ನೀಡಿ ಜನರ ಸಮಸ್ಯೆಗೆ ಸ್ಪಂದಿಸಿರುವುದರಿಂದ ‘ಇವ ನಮ್ಮವ’ ಎಂಬ ಭಾವನೆ ವ್ಯಕ್ತವಾಗಿದೆ. ಆಡಳಿತಾರೂಢ ಬಿಜೆಪಿ ಸರ್ಕಾರ, ಮುಖ್ಯಮಂತ್ರಿ, ಮಂತ್ರಿಗಳು, ಹಣ, ಒತ್ತಡ... ಈ ಅಂಶಗಳು ನಮ್ಮ ಗೆಲುವಿನ ಹಾದಿಗೆ ತೊಡಕಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.