ADVERTISEMENT

ಹೆದ್ದಾರಿ ಗುಂಡಿಯಲ್ಲಿ ದೀಪೋತ್ಸವ!

ಕನಸಿನ ಹಾವೇರಿ ತಂಡದಿಂದ ವಿನೂತನ ರೀತಿಯಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2022, 15:27 IST
Last Updated 12 ಸೆಪ್ಟೆಂಬರ್ 2022, 15:27 IST
ಕನಸಿನ ಹಾವೇರಿ ತಂಡದಿಂದ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯ ದೊಡ್ಡ ಗುಂಡಿಯಲ್ಲಿ ದೀಪೋತ್ಸವ ಆಚರಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು 
ಕನಸಿನ ಹಾವೇರಿ ತಂಡದಿಂದ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯ ದೊಡ್ಡ ಗುಂಡಿಯಲ್ಲಿ ದೀಪೋತ್ಸವ ಆಚರಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು    

ಹಾವೇರಿ: ರಾಷ್ಟ್ರೀಯ ಹೆದ್ದಾರಿ ಸರ್ವಿಸ್‌ ರಸ್ತೆ ಮಧ್ಯೆ ಬಿದ್ದಿರುವ ಗುಂಡಿಗಳ ಮಧ್ಯೆ ದೀಪೋತ್ಸವ ಆಚರಿಸುವ ಮೂಲಕ ಕನಸಿನ ಹಾವೇರಿ ತಂಡ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿ ಗಮನ ಸೆಳೆಯಿತು.

ಇಲ್ಲಿಯ ಹಾನಗಲ್ಲ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಸಂಪರ್ಕ ಕಲ್ಪಿಸುವ ಸರ್ವಿಸ್‌ ರಸ್ತೆ ಮಧ್ಯೆ ಬಿದ್ದಿರುವ ದೊಡ್ಡ ಗುಂಡಿಗಳ ಮಧ್ಯೆ ಸೋಮವಾರ ಸಂಜೆ ದೀಪ ಹಚ್ಚಿ ದೀಪೋತ್ಸವ ಆಚರಿಸಲಾಯಿತು.

ಕನಸಿನ ತಂಡದ ಅಭಿಷೇಕ ಉಪ್ಪಿನ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಚತುಷ್ಪಥದಿಂದ ಷಟ್ಪಥ ಮಾಡಲಾಗಿದೆ. ಆದರೆ, ಮೂರು ವರ್ಷಗಳಿಂದ ಸೇವಾ ರಸ್ತೆಯನ್ನು ದುರಸ್ತಿ ಮಾಡಿಲ್ಲ. ರಸ್ತೆ ಮಧ್ಯೆ ದೊಡ್ಡ ಗುಂಡಿ ಬಿದ್ದು ವಾಹನ ಸಂಚಾರವೇ ಸಾಧ್ಯವಿಲ್ಲದಂತಾಗಿದೆ. ಇದರಿಂದ ಅನೇಕ ವಾಹನಗಳು ಗುಂಡಿ ಮಧ್ಯೆ ಸಿಲುಕಿಕೊಂಡು ಹಾಳಾದ ಉದಾಹರಣೆಗಳಿವೆ ಎಂದರು.

ADVERTISEMENT

ಮುಖ್ಯಮಂತ್ರಿ ಬೊಮ್ಮಾಯಿ ಅವರು ಧಮ್ಮು, ತಾಕತ್ತು ಇದ್ದರೆ ಬಿಜೆಪಿಯ ಜನಸ್ಪಂದನ ಯಾತ್ರೆಯನ್ನು ಸವಾಲು ಹಾಕಿದ್ದಾರೆ. ಅದಕ್ಕೂ ಮುನ್ನ ಸಿಎಂ ತವರು ಜಿಲ್ಲೆಯ ರಸ್ತೆಗಳನ್ನು ದುರಸ್ತಿ ಮಾಡಿ ಜಿಲ್ಲೆಯ 6 ಕ್ಷೇತ್ರಗಳನ್ನು ಗೆದ್ದು ಟಾರ್ಗೆಟ್ 150 ತಲುಪಲಿ ಎಂದು ಕುಟುಕಿದರು.

ಜಿಲ್ಲಾ ಕೇಂದ್ರ ಹಾವೇರಿಯಿಂದ ಬೆಂಗಳೂರು ಕಡೆಗೆ, ಹುಬ್ಬಳ್ಳಿ ಕಡೆ ಹೋಗುವ ಎಲ್ಲಾ ಸರ್ವೀಸ್ ರಸ್ತೆಗಳು ಸಂಪೂರ್ಣ ಕೆಟ್ಟಿವೆ. ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಗಮನ ಸೆಳೆಯುವ ನಿಟ್ಟಿನಲ್ಲಿ ದೀಪೋತ್ಸವ ಆಚರಿಸಿದ್ದೇವೆ ಎಂದು ಹೇಳಿದರು.

ವಿಕಾಸ ಸಿದ್ದನಗೌಡ್ರ, ಪ್ರಮೋದ ಮೆಳ್ಳಾಗಟ್ಟಿ, ಕಿರಣ ನಿಂಬರಗಿ, ಸಚಿನ್ ಜನ್ನು, ಶಿವು ಅಂಗಡಿ, ಸುಶೀಲೇಂದ್ರ ಕುಲಕರ್ಣಿ, ಶಿವು ಅಂಗಡಿ, ಗಂಗಾಧರ ಕಲವಾಡಿಮಠ, ಯಶ್ ಮಲ್ಲನಗೌಡ್ರ, ಹರೀಶ ಭೋವಿ, ವಿನಯ ಬೆನ್ನೂರ, ಚೇತನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.