ಹಾವೇರಿ: ‘ಛಾಯಾಗ್ರಾಹಕರು ಹಾಗೂ ವಿಡಿಯೊಗ್ರಾಫರ ಸಂಘಕ್ಕೆ ನಿವೇಶನ ನೀಡಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಆ ಬೇಡಿಕೆ ಸಾಕಾರವಾಗುವ ಸಮಯ ಬಂದಿದೆ. ನಿಗದಿತ ಶುಲ್ಕ ಪಾವತಿಸಿದರೆ ತ್ವರಿತವಾಗಿ ಆದೇಶ ಪ್ರತಿ ನೀಡಲಾಗುವುದು’ ಎಂದು ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡ್ರ ತಿಳಿಸಿದರು.
ಇಲ್ಲಿಯ ದಾನೇಶ್ವರಿನಗರದಲ್ಲಿರುವ ಬಂಟರ ಭವನದಲ್ಲಿ ‘ಹಾವೇರಿ ತಾಲ್ಲೂಕು ವೃತ್ತಿನಿರತ ಛಾಯಾಗ್ರಾಹಕರ ಮತ್ತು ವಿಡಿಯೊಗ್ರಾಫರ’ ಸಂಘದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ‘186ನೇ ವಿಶ್ವ ಛಾಯಾಗ್ರಹಣ ದಿನಾಚರಣೆ, ಸಂಘದ 23ನೇ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ’ ಉದ್ಘಾಟಿಸಿ ಅವರು ಮಾತನಾಡಿದರು.
‘ಎಷ್ಟೇ ದೊಡ್ಡ ವ್ಯಕ್ತಿಗಳಿದ್ದರೂ ಫೋಟೊ ತೆಗೆಸಿಕೊಳ್ಳುವಾದ ಛಾಯಾಗ್ರಾಹಕ ಹೇಳಿದ ಮಾತುಗಳನ್ನು ಕೇಳಬೇಕಾಗುತ್ತದೆ. ಯಾವುದೋ ಒಂದು ಚಿತ್ರದ ಸನ್ನಿವೇಶವನ್ನು ಬಹಳ ವರ್ಷಗಳ ಕಾಲ ನೆನಪು ಇಟ್ಟುಕೊಳ್ಳುವಂತಹ ಕೆಲಸವನ್ನು ವೃತ್ತಿನಿರತ ಛಾಯಾಗ್ರಾಹಕರು ಮಾಡುತ್ತಿದ್ದಾರೆ. ಇದೊಂದು ಜವಾಬ್ದಾರಿಯುತ ಕೆಲಸ. ಆದರೆ, ಮೊಬೈಲ್ ಬಂದ ಬಳಿಕ ವೃತ್ತಿಪರರಿಗೆ ತೊಂದರೆಯಾಗಿದೆ. ಛಾಯಾಗ್ರಾಹಕರು ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಂಡು ಯಶಸ್ಸು ಸಾಧಿಸಬೇಕು’ ಎಂದರು.
ಪಿಯುಸಿ ಹಾಗೂ ಪದವಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.
ಸಂಘದ ರಾಜೇಂದ್ರಕುಮಾರ ರಿತ್ತಿ, ಶಿವಾನಂದ ಕಾಶಂಬಿ, ಸಿದ್ಧಲಿಂಗಪ್ಪ ಹಳ್ಳಿಕೇರಿ, ಶಂಭುಗೌಡ ಅಂದಾನಿಗೌಡ್ರ, ಮಲ್ಲಿಕಾರ್ಜುನ ಕುಂಬಾರಿ, ಬಸವರಾಜ ಚಾವಡಿ, ಬಿ.ಎಂ. ಪವಾರ, ಮಾಲತೇಶ ಇಚ್ಚಂಗಿ, ನಾಗೇಶ ಬಾರ್ಕಿ, ಶಿವಬಸವ ಬಣಕಾರ, ಅಶೋಕ ಬ್ಯಾಡಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.